ಕರಣ್ ಜೋಹರ್ ನನಗೆ ಸ್ಫೂರ್ತಿ; ವಿವಾದದ ಬಳಿಕ ನಾಗವಂಶಿ ಹೀಗೇಳಿದ್ದೇಕೆ? | Naga Vamsi

Untitled design - 2025-01-07T183721.457
Published on

ಹೈದರಾಬಾದ್​​: ಟಾಲಿವುಡ್‌ನ ಟಾಪ್ ನಿರ್ಮಾಪಕರಲ್ಲಿ ಒಬ್ಬರಾದ ನಾಗವಂಶಿ(Naga Vamsi) ಅವರು ಬಾಲಿವುಡ್​ ಸಿನಿಮಾಗಳ ಕುರಿತು ಮಾಡಿದ ಕಾಮೆಂಟ್​​ ಭಾರೀ ವಿವಾದಕ್ಕೆ ಕಾರಣವಾಗಿತ್ತು. ನಿರ್ಮಾಪಕ ಬೋನಿ ಕಪೂರ್​​​​​​​​​​​​​​​​​​​​​​​​​ ಅವರೊಂದಿಗೆ ಮಾತನಾಡಿದಕ್ಕೆ ನಿರ್ದೇಶಕರಾದ ಹನ್ಸಲ್ ಮೆಹ್ತಾ ಮತ್ತು ಸಂಜಿತ್ ಗುಪ್ತಾ ನಾಗವಂಶಿಯನ್ನು ಟೀಕಿಸಿದ್ದಾರೆ. ಈ ವಿಚಾರಕ್ಕೆ ನಾಗ ವಂಶಿ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ನಾಗ ವಂಶಿ, ನನಗೆ ಯಾರನ್ನೂ ಅವಮಾನಿಸುವ ಉದ್ದೇಶವಿಲ್ಲ. ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿರುವುದನ್ನು ಮಾತ್ರ ವಿವರಿಸಿದ್ದೇನೆ. ಮೇಲಾಗಿ ಯಾರು ದೊಡ್ಡವರು ಮತ್ತು ಯಾರು ಕಡಿಮೆ ಎಂದು ಮಾತನಾಡಿಲ್ಲ. ನಾನು ಕೂಡ ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಅವರ ದೊಡ್ಡ ಅಭಿಮಾನಿ ಎಂದು ಹೇಳಿದ್ದರು.

ಅಲ್ಲದೆ, ನಾನು ನಿರ್ಮಾಪಕನಾಗಲು ಬಾಲಿವುಡ್ ಸ್ಟಾರ್ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್ ಅವರೇ ಸ್ಫೂರ್ತಿ ಎಂದು ಹೇಳಿದ್ದಾರೆ. ಕರಣ್ ಅವರ ಮೊದಲ ಚಿತ್ರ 'ಕುಚ್ ಕುಚ್ ಹೋತಾ'ದಿಂದ ನಾನು ತುಂಬಾ ಸ್ಫೂರ್ತಿ ಪಡೆದಿದ್ದೇನೆ. ನಾನು ಅಂತಹ ಶ್ರೀಮಂತ ಮತ್ತು ಆಕರ್ಷಕ ಚಿತ್ರ ಮಾಡುವ ಫ್ಯಾಂಟಸಿ ಹೊಂದಿದ್ದೆ. ಹಾಗೆಂದು ಬಾಲಿವುಡ್ ಅನ್ನು ಅವಹೇಳನ ಮಾಡುವಂಥದ್ದೇನೂ ಇಲ್ಲ ಎಂದು ನಾಗವಂಶಿ ಸ್ಪಷ್ಟಪಡಿಸಿದ್ದಾರೆ.

ದಕ್ಷಿಣ ಮತ್ತು ಬಾಲಿವುಡ್‌ನ ಪ್ರಮುಖ ನಿರ್ದೇಶಕರು ಮತ್ತು ನಿರ್ಮಾಪಕರೊಂದಿಗೆ ಸಭೆಯನ್ನು ಆಯೋಜಿಸಲಾಗಿತ್ತು. ಅದರಲ್ಲಿ ನಾಗವಂಶಿ ಮತ್ತು ಬೋನಿ ಕಪೂರ್ ಭಾಗವಹಿಸಿದ್ದರು. ದಕ್ಷಿಣ ಸಿನಿಮಾಗಳಿಗೆ ವಿದೇಶಗಳಲ್ಲಿ ಉತ್ತಮ ಮಾರುಕಟ್ಟೆ ಇದೆ. ತೆಲುಗು ಚಿತ್ರಗಳಿಗೆ ಅಮೆರಿಕದಲ್ಲಿ ಮತ್ತು ತಮಿಳು ಚಿತ್ರಗಳಿಗೆ ಸಿಂಗಾಪುರ, ಮಲೇಷಿಯಾ ಮತ್ತು ಗಲ್ಫ್‌ನಲ್ಲಿ ಉತ್ತಮ ಮಾರುಕಟ್ಟೆ ಇದೆ. ಮಲಯಾಳಂ ಚಿತ್ರಗಳಿಗೆ ಗಲ್ಫ್‌ನಲ್ಲಿ ದೊಡ್ಡ ಮಾರುಕಟ್ಟೆ ಇದೆ ಎಂದು ನಾಗವಂಶಿ ಹೇಳಿದರು.

ದಕ್ಷಿಣ ಭಾರತದ ಚಲನಚಿತ್ರ ನಿರ್ಮಾಪಕರು ಮತ್ತು ನಟರು ಬಾಲಿವುಡ್ ಮೇಲೆ ಪ್ರಭಾವ ಬೀರಿದ್ದಾರೆ. 'ಬಾಹುಬಲಿ', 'ಆರ್‌ಆರ್‌ಆರ್' ಮತ್ತು 'ಪುಷ್ಪ 2' ಚಿತ್ರಗಳಿಂದ ಅವರು ಬದಲಾವಣೆಯನ್ನು ಕಂಡಿದ್ದಾರೆ. ಅನಿಮಲ್​​ ಮತ್ತು ಜವಾನ್ ಚಿತ್ರಗಳನ್ನು ದಕ್ಷಿಣದ ನಿರ್ದೇಶಕರು ನಿರ್ದೇಶಿಸಿದ್ದಾರೆ. ಹಿಂದಿ ಚಿತ್ರರಂಗ ಮುಂಬೈಗೆ ಸೀಮಿತ ಎಂದು ನಾಗವಂಶಿ ಮಾತನ್ನು ಬೋನಿ ಕಪೂರ್ ಒಪ್ಪಲಿಲ್ಲ. ಈ ಮಾತುಕತೆ ನಂತರ ವಿವಾದವಾಗಿ ಮಾರ್ಪಟಿತ್ತು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net