

ಹೈದರಾಬಾದ್: ಬಾಲಿವುಡ್ ಮತ್ತು ದಕ್ಷಿಣ ಚಿತ್ರರಂಗದ ಬಗ್ಗೆ ತೆಲುಗು ಚಿತ್ರ ನಿರ್ಮಾಪಕ ನಾಗ ವಂಶಿ(Naga Vamsi ) ನೀಡಿರುವ ಹೇಳಿಕೆಯು ವೈರಲ್ ಆಗಿದ್ದು, ವಿವಾದದ ಕುರಿತು ನಿರ್ಮಾಪಕ ನಾಗ ವಂಶಿ ಮೌನ ಮುರಿದಿದ್ದಾರೆ. ಬೋನಿ ಕಪೂರ್ ಮತ್ತು ನಾಗ ವಂಶಿ ನಡುವಿನ ಮಾತುಕತೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಆ ಚರ್ಚೆಗೆ ಸಂಬಂಧಿಸಿದಂತೆ ನಾಗ ವಂಶಿ ನಾನು ಬೋನಿ ಕಪೂರ್ ಅವರನ್ನು ಅವಮಾನಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಚರ್ಚೆಯಲ್ಲಿ ನಾಗ ವಂಶಿ, ಬೋನಿ ಕಪೂರ್ ಅವರಿಗೆ ದಕ್ಷಿಣ ಚಿತ್ರರಂಗವು ಬಾಲಿವುಡ್ ತನ್ನ ದೃಷ್ಟಿಕೋನವನ್ನು ಬದಲಾಯಿಸುವಂತೆ ಮಾಡಿದೆ ಎಂದು ಹೇಳುತ್ತಾರೆ. ಇದನ್ನು ಒಪ್ಪದ ಬೋನಿ ಕಪೂರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಕ್ಲಿಪ್ ವೈರಲ್ ಆಗುತ್ತಿದ್ದರಂತೆ ಬೋನಿ ಕಪೂರ್ ಅವರಂತಹ ಹಿರಿಯ ನಿರ್ಮಾಪಕರನ್ನು ನಾಗ ಅವಮಾನಿಸಿದ್ದಾರೆ ಎಂದು ಹಲವರು ಆರೋಪಿಸಿದರು.
ಅವರ ಹೇಳಿಕೆಯನ್ನು ಸ್ಪಷ್ಟಪಡಿಸಿದ ನಾಗ ವಂಶಿ, ಹಿರಿಯರನ್ನು ಹೇಗೆ ಗೌರವಿಸಬೇಕೆಂದು ನೀವು ನಮಗೆ ಕಲಿಸಬೇಕಾಗಿಲ್ಲ. ನಾವು ನಿಮ್ಮ ಹುಡುಗರಿಗಿಂತ ಹೆಚ್ಚಾಗಿ ಬೋನಿ ಜಿ ಅವರನ್ನು ಗೌರವಿಸುತ್ತೇವೆ. ಆ ಸಂಭಾಷಣೆಯಲ್ಲಿ ಬೋನಿ ಜಿ ಬಗ್ಗೆ ಯಾವುದೇ ಅಗೌರವ ಇರಲಿಲ್ಲ. ಅದು ಒಂದು ಆರೋಗ್ಯಕರ ಚರ್ಚೆ ಅಷ್ಟೆ. ನಾನು ಮತ್ತು ಬೋನಿ ಜೀ ಚೆನ್ನಾಗಿ ನಗುತ್ತಿದ್ದೆವು ಮತ್ತು ಒಬ್ಬರನ್ನೊಬ್ಬರು ತಬ್ಬಿಕೊಂಡೆವು. ಆದ್ದರಿಂದ ದಯವಿಟ್ಟು ಆ ಕ್ಲಿಪ್ ನೋಡಿ ಯಾವುದೇ ತೀರ್ಮಾನಕ್ಕೆ ಬರಬೇಡಿ ಎಂದು ಹೇಳಿದ್ದಾರೆ.
ಈ ಚರ್ಚೆ ವೈರಲ್ ಆದ ನಂತರ ಚಲನಚಿತ್ರ ನಿರ್ದೇಶಕರಾದ ಸಂಜಯ್ ಗುಪ್ತಾ, ಹಂಸಲ್ ಮೆಹ್ತಾ ಮತ್ತು ಸಿದ್ಧಾರ್ಥ್ ಆನಂದ್ ಅವರು ನಾಗ ವಂಶಿಯನ್ನು ಟೀಕಿಸಿದರು. ಸಾಮಾಜಿಕ ಜಾಲತಾಣಲದಲ್ಲಿ ಅನೇಕ ಬಳಕೆದಾರರು ನಾಗ ವಂಶಿ ವರ್ತನೆ ಸರಿಯಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.(ಏಜೆನ್ಸೀಸ್)