

ಹೈದರಾಬಾದ್: ಸೌತ್ ಸಿನಿಮಾ ಕಲ್ಕಿ 2898 ಎಡಿಯಲ್ಲಿ ಪ್ರಭಾಸ್ ನಟನೆಯ ಬಗ್ಗೆ ಬಾಲಿವುಡ್ ನಟ ಅರ್ಷದ್ ವಾರ್ಸಿ ನೀಡಿರುವ ಹೇಳಿಕೆಯಿಂದ ಉಂಟಾಗಿರುವ ವಿವಾದ ಚಿತ್ರರಂಗದ ನಡುವೆ ಬಿರುಕನ್ನು ಉಂಟುಮಾಡುವಷ್ಟರ ಮಟ್ಟಿಗೆ ಹೋಗಿದೆ. ಹೌದು ಸೌತ್ ವರ್ಸಸ್ ಬಾಲಿವುಡ್ ಎಂದು ಮಾತನಾಡುವಂತೆ ಮಾಡಿದೆ. ಪ್ರಭಾಸ್ ಪರ ಬ್ಯಾಟಿಂಗ್ ಮಾಡಿರುವ ಸೌತ್ ಸ್ಟಾರ್ಗಳು ಅರ್ಷದ್ ವಾರ್ಸಿ ಹೇಳಿಕೆಯನ್ನು ಟೀಕಿಸಿದ್ದಾರೆ.
ನಟ ಸುಧೀರ್ ಬಾಬು, ನ್ಯಾಚ್ಯುರಲ್ ಸ್ಟಾರ್ ನಾನಿ, ಮಂಚು ವಿಷ್ಣು ಬಳಿಕ ಇದೀಗ ಕಲ್ಕಿ 2898 ಎಡಿ ಸಿನಿಮಾ ನಿರ್ದೇಶಕ ನಾಗ್ ಅಶ್ವಿನ್ ಅರ್ಷದ್ ಅವರ ಕಾಮೆಂಟ್ ಬಗ್ಗೆ ಮೌನಮುರಿದ್ದಿದ್ದಾರೆ. ಕಲ್ಕಿ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಪ್ರಭಾಸ್ ಕರ್ಣನಾಗಿ ಎಂಟ್ರಿ ಕೊಡುವ ದೃಶ್ಯವನ್ನು ನೆಟ್ಟಿಗರೊಬ್ಬರು ಪೋಸ್ಟ್ ಮಾಡಿ, ಬಾಲಿವುಡ್‌ಗಿಂತಲೂ ಚೆನ್ನಾಗಿದೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ನಾಗ್ ಅಶ್ವಿನ್, ಹಳೆಯದಕ್ಕೆ ಹಿಂತಿರುಗಬೇಡಿ, ಸೌತ್ ವರ್ಸಸ್ ನಾರ್ತ್, ಬಾಲಿವುಡ್ ವರ್ಸಸ್ ಟಾಲಿವುಡ್ ಎಂಬುದಿಲ್ಲ. ಈಗೇನಿದ್ದರೂ ಭಾರತೀಯ ಚಿತ್ರರಂಗ ಎನ್ನುವುದರ ಕಡೆ ಗಮನವಿರಬೇಕು. ಅರ್ಷದ್ ಸಾಬ್ ನೀವೊಮ್ಮೆ ನೋಡಿ ಮಾತಾಡಬೇಕು. ಆದರೂ ಸರಿ, ನಾನು ನಿಮ್ಮ ನಾಲ್ಕು ಮಕ್ಕಳಿಗೆ ಬುಜ್ಜಿ ಆಟಿಕೆಗಳನ್ನು ಕಳುಹಿಸುತ್ತಿದ್ದೇನೆ. ಅದೇ ರೀತಿ ಕಲ್ಕಿ 2ರಲ್ಲಿ ಪ್ರಭಾಸ್ ಇನ್ನೂ ಚೆನ್ನಾಗಿ ಕಾಣಿಸುತ್ತಾರೆ ಎಂದಿದ್ದಾರೆ.
ಜಗತ್ತು ಈಗಾಗಲೇ ತುಂಬಾ ದ್ವೇಷದಿಂದ ತುಂಬಿದೆ. ಅದನ್ನು ಹೆಚ್ಚಿಸುವ ಕೆಲಸ ನಾವು ಮಾಡುವುದಿಲ್ಲ. ನಾನಲ್ಲ, ಪ್ರಭಾಸ್ ಕೂಡ ಅದನ್ನೇ ಹೇಳುತ್ತಾರೆ ಎಂದು ನಾಗ್ ಅಶ್ವಿನ್ ಮತ್ತೊಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅರ್ಷದ್, ನನಗೆ ಇಷ್ಟವಾಗದ ಕಲ್ಕಿ ಸಿನಿಮಾವನ್ನು ನಾನು ನೋಡಿದೆ. ಸಿನಿಮಾದಲ್ಲಿ ಅಮಿತ್ ಜೀ ಅವರ ನಟನೆ ಅದ್ಭುತವಾಗಿದೆ. ಅವರಲ್ಲಿರುವ ಶಕ್ತಿಯಲ್ಲಿ ಸ್ವಲ್ಪವಾದರೂ ನಮಗೆ ಸಿಕ್ಕಿದರೆ ಜೀವನವು ಉತ್ತಮವಾಗಿರುತ್ತದೆ. ಆದರೆ ಪ್ರಭಾಸ್ ನಟನೆಯನ್ನು ನೋಡಿ ನನಗೆ ನಿಜವಾಗಿಯೂ ಬೇಜರಾಗಿದೆ. ಪ್ರಭಾಸ್ ಜೋಕರ್ನಂತೆ ಕಾಣುತ್ತಿದ್ದಾರೆ. ನಾನು ಮ್ಯಾಡ್ಮ್ಯಾಕ್ಸ್, ಗಿಬ್ಸನ್ ಅವರಂತೆ ನೋಡಲು ಇಷ್ಟಪಡುತ್ತೇನೆ. ಅವರು ಏಕೆ ಹೀಗೆ ನಟಿಸಿದ್ದಾರೆ ಎಂದು ನನಗೆ ಅರ್ಥವಾಗುತಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್)