

ಮುಂಬೈ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಿನಿಮಾ ಮತ್ತು ರಾಜಕಾರಣ ಎರಡರಲ್ಲೂ ಸಕ್ರಿಯರಾಗಿರುವ ನಟಿ ಕಂಗನಾ ಒಂದಲ್ಲ ಒಂದು ಕಾರಣಕ್ಕೆ ಅವರು ಸಾಮಾಜಿಕ ಜಾಲತಾಣದಲ್ಲಿ ಹಲವು ಬಾರಿ ಟ್ರೋಲ್ ಆಗಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಬಾಲಿವುಡ್ನ ಮೂವರು ಖಾನ್ಗಳ ಸಿನಿಮಾ ನಿರ್ದೇಶನ ಮಾಡುವ ಆಸೆಯಿದೆ ಎಂದು ಕಂಗನಾ ರಣಾವತ್ ಹೇಳಿದ್ದರು. ಈ ಬಾರಿ ಅವರು ಸಲ್ಮಾನ್ಖಾನ್ ಅವರು ತಮಗೆ ನೀಡಿದ ಸಿನಿಮಾ ಆಫರ್ಗಳ ಬಗ್ಗೆ ಮಾತನಾಡಿ ಸುದ್ದಿಯಲ್ಲಿದ್ದಾರೆ.
ಹೌದು ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಕಂಗನಾ ರಣಾವತ್, ಸಲ್ಮಾನ್ ಖಾನ್ ಅವರು ನನಗೆ ಸುಲ್ತಾನ್ ಮತ್ತು ಬಜರಂಗಿ ಭಾಯಿಜಾನ್ ಸಿನಿಮಾಗಳಿಗೆ ಆಫರ್ ನೀಡಿದ್ದರು. ಆದರೆ ನಾನು ‘ಯೇ ಕ್ಯಾ ರೋಲ್ ದಿಯಾ ಹೈ?’ (ಯಾವ ಪಾತ್ರಗಳನ್ನು ನೀಡಿದ್ದೀರಿ) ಎಂದು ಹೇಳಿ ತಿರಸ್ಕರಿಸಿದೆ. ಸುಲ್ತಾನ್ ಚಿತ್ರದ ಪಾತ್ರವೊಂದಕ್ಕೆ ನನ್ನನ್ನು ಸಂಪರ್ಕಿಸಿದರು. ಆದರೆ ನಾನು ಅದನ್ನು ನಾನು ತೆಗೆದುಕೊಳ್ಳಲಿಲ್ಲ ಎಂದು ಹೇಳಿದ್ದಾರೆ.
ನನ್ನ ಪ್ರತಿಕ್ರಿಯೆಗೆ ಸಲ್ಮಾನ್ ಅವರು, ನಾನು ನಿಮಗೆ ಬೇರೆ ಯಾವ ಪಾತ್ರ ನೀಡಲಿ ಎಂದು ಹೇಳಿದರು. ಎರಡು ಸಿನಿಮಾದಲ್ಲಿ ನನಗೆ ನೀಡಿದ ಪಾತ್ರಗಳನ್ನು ತಿರಸ್ಕರಿಸಿದ ಬಳಿಕವೂ ಸಲ್ಮಾನ್ಖಾನ್ ಅವರು ನನ್ನನ್ನು ಚೆನ್ನಾಗಿಯೇ ಮಾತನಾಡಿಸುತ್ತಾರೆ. ಅಲ್ಲದೆ ಅವರು ನನ್ನ ಮುಂದಿನ ಸಿನಿಮಾ ಎಮರ್ಜೆನ್ಸಿ ನೋಡಲು ಉತ್ಸುಕರಾಗಿದ್ದಾರೆ ಎಂದು ಕಂಗನಾ ರಣಾವತ್ ತಿಳಿಸಿದರು.
ಕಂಗನಾ ಅವರ ಮುಂದಿನ ಸಿನಿಮಾ ಎಮರ್ಜೆನ್ಸಿ, ದೇಶದಲ್ಲಿನ ತುರ್ತು ಪರಿಸ್ಥಿತಿ ಹೇರಿದ ಅವಧಿಯನ್ನು ಆಧರಿಸಿದೆ. ಕಂಗನಾ ರಣಾವತ್ ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ 2024 ಸೆಪ್ಟೆಂಬರ್ 6ರಂದು ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್ ಮತ್ತು ದಿವಂಗತ ಸತೀಶ್ ಕೌಶಿಕ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್)