ಸೌರವ್​ ಗಂಗೂಲಿ-ರಾಹುಲ್​ ದ್ರಾವಿಡ್​ ಅಮೋಘ ಜತೆಯಾಟಕ್ಕೆ 22 ವರ್ಷ!

dravid ganguly web
Published on

ಬೆಂಗಳೂರು: ಸೌರವ್​ ಗಂಗೂಲಿ ಈಗ ಬಿಸಿಸಿಐ ಅಧ್ಯಕ್ಷರಾಗಿದ್ದರೆ, ರಾಹುಲ್​ ದ್ರಾವಿಡ್​ ಎನ್​ಸಿಎ ಮುಖ್ಯಸ್ಥರಾಗಿದ್ದಾರೆ. ಈ ಮೂಲಕ ಇವರಿಬ್ಬರೂ ಮೈದಾನದ ಹೊರಗೆ ಭರ್ಜರಿ ಜತೆಯಾಟದ ಮೂಲಕ ಕ್ರಿಕೆಟ್​ ಬೆಳವಣಿಗೆಗೆ ಅಮೋಘ ಕೊಡುಗೆ ನೀಡುತ್ತಿದ್ದಾರೆ. 1996ರಲ್ಲಿ ಲಾರ್ಡ್ಸ್​ನಲ್ಲಿ ಜತೆಯಾಗಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಗಂಗೂಲಿ-ದ್ರಾವಿಡ್​ ಜೋಡಿ ಅನಂತರದಲ್ಲಿ ಆಡಿದ್ದ ಅದ್ಭುತ ಜತೆಯಾಟವೊಂದಕ್ಕೆ ಬುಧವಾರ 22 ವರ್ಷ ಪೂರ್ಣಗೊಂಡಿದೆ.

1999ರ ಏಕದಿನ ವಿಶ್ವಕಪ್​ನಲ್ಲಿ ಮೇ 26ರಂದು ಟೌಂಟನ್​ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಲೀಗ್​ ಪಂದ್ಯದಲ್ಲಿ ಎಡಗೈ-ಬಲಗೈ ಜೋಡಿಯಾದ ಗಂಗೂಲಿ-ದ್ರಾವಿಡ್​ 318 ರನ್​ಗಳ ಭರ್ಜರಿ ಜತೆಯಾಟವಾಡಿ ಭಾರತಕ್ಕೆ ನಿರ್ಣಾಯಕ ಗೆಲುವು ತಂದುಕೊಟ್ಟಿದ್ದರು. ಗಂಗೂಲಿ 158 ಎಸೆತಗಳಲ್ಲಿ 17 ಬೌಂಡರಿ ಮತ್ತು 7 ಸಿಕ್ಸರ್​ ಒಳಗೊಂಡ ಜೀವನಶ್ರೇಷ್ಠ 183 ರನ್​ ಬಾರಿಸಿದ್ದರೆ, ಅವರಿಗೆ ಸಮರ್ಥ ಸಾಥ್​ ನೀಡಿದ್ದ ದ್ರಾವಿಡ್​ 129 ಎಸೆತಗಳಲ್ಲಿ 17 ಬೌಂಡರಿ ಮತ್ತು 1 ಸಿಕ್ಸರ್​ ಒಳಗೊಂಡ 145 ರನ್​ ಸಿಡಿಸಿದ್ದರು. 1996ರಲ್ಲಿ ಲಾರ್ಡ್ಸ್​ ಮೈದಾನದಲ್ಲಿ ಜತೆಯಾಗಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಬಳಿಕ ಗಂಗೂಲಿ-ದ್ರಾವಿಡ್​ ಜೋಡಿ ಮತ್ತೊಮ್ಮೆ ಸಾಮರ್ಥ್ಯ ನಿರೂಪಿಸಿದ್ದ ಅಪೂರ್ವ ದಿನ ಅದಾಗಿತ್ತು.

ಈಗಲೂ ಏಕದಿನ ಕ್ರಿಕೆಟ್​ ಚರಿತ್ರೆಯ 4ನೇ ಗರಿಷ್ಠ ಜತೆಯಾಟ ಇದಾಗಿದೆ. ಅಲ್ಲದೆ ಗಂಗೂಲಿ ಗಳಿಸಿದ 183 ರನ್​ ಈಗಲೂ ವಿಶ್ವಕಪ್​ನಲ್ಲಿ ಭಾರತೀಯ ಬ್ಯಾಟ್ಸ್​ಮನ್​ನ ಗರಿಷ್ಠ ಗಳಿಕೆಯಾಗಿದೆ. ಭಾರತ ತಂಡವೆಂದರೆ ಸಚಿನ್​ ತೆಂಡುಲ್ಕರ್​ ಎಂಬಂತಿದ್ದ ಕಾಲದಲ್ಲಿ ಗಂಗೂಲಿ&ದ್ರಾವಿಡ್​ ಜೋಡಿ, ಸಚಿನ್​ ಕಣಕ್ಕಿಳಿಯುವ ಮೊದಲೇ ತಂಡದ ಮೊತ್ತವನ್ನು 300ರ ಗಡಿ ದಾಟಿಸಿತ್ತು. ಈ ಪಂದ್ಯದಲ್ಲಿ ಸಚಿನ್​ ಕೇವಲ 2 ರನ್​ಗೆ ಔಟಾಗಿದ್ದರು. ಕೊನೆಯ 20 ಓವರ್​ಗಳಲ್ಲಿ ಭಾರತ ತಂಡ 201 ರನ್​ ಕಸಿಯುವ ಮೂಲಕ ಕ್ರಿಕೆಟ್​ ಜಗತ್ತಿನಲ್ಲಿ ಅಚ್ಚರಿ ಮೂಡಿಸಿತ್ತು. ಆಗಿನ್ನೂ ಟಿ20 ಕ್ರಿಕೆಟ್​ ಶುರುವಾಗಿರದ ಕಾರಣ ಈ ಸಾಧನೆ ಅಪೂರ್ವವೆನಿಸಿತ್ತು. ಗಂಗೂಲಿ ಏಕದಿನ ಕ್ರಿಕೆಟ್​ ಇತಿಹಾಸದ ಚೊಚ್ಚಲ ದ್ವಿಶತಕವನ್ನು ದಾಖಲಿಸಲು ಸಾಧ್ಯವಾಗದಿದ್ದುದು ಈ ಪಂದ್ಯದಲ್ಲಿ ಭಾರತ ಎದುರಿಸಿದ ಏಕೈಕ ನಿರಾಸೆ.

ಹೇಗಿತ್ತು ಆ ಪಂದ್ಯ?

ಟಾಸ್​ ಗೆದ್ದು ಬ್ಯಾಟಿಂಗ್​ಗೆ ಇಳಿದಿದ್ದ ಭಾರತ ತಂಡ ಆರಂಭಿಕ ಸಡಗೋಪನ್​ ರಮೇಶ್​ (5) ವಿಕೆಟ್​ಅನ್ನು ಮೊದಲ ಓವರ್​ನಲ್ಲೇ ಕಳೆದುಕೊಂಡಿತ್ತು. ಆಗ ಜತೆಗೂಡಿದ ಗಂಗೂಲಿ-ದ್ರಾವಿಡ್​ ಜೋಡಿ ಶ್ರೀಲಂಕಾ ಬೌಲರ್​ಗಳಾದ ಚಮಿಂಡಾ ವಾಸ್​, ಮುತ್ತಯ್ಯ ಮುರಳೀಧರನ್​, ವಿಕ್ರಮಸಿಂಘೆ, ಉಪಶಾಂತಾ ಮತ್ತು ಜಯಸೂರ್ಯ ದಾಳಿಯನ್ನು ಸಮರ್ಥವಾಗಿ ಎದುರಿಸಿ 46ನೇ ಓವರ್​ವರೆಗೂ ಭಾರತ ತಂಡಕ್ಕೆ ಆಸರೆಯಾಗಿತ್ತು. ಈ ಮೂಲಕ ಭಾರತ ತಂಡ 6 ವಿಕೆಟ್​ಗೆ 373 ರನ್​ಗಳ ಭರ್ಜರಿ ಮೊತ್ತ ಕೂಡಿ ಹಾಕಿತ್ತು. ಪ್ರತಿಯಾಗಿ ಅರ್ಜುನ ರಣತುಂಗ ನೇತೃತ್ವದ ಶ್ರೀಲಂಕಾ ತಂಡ ರಾಬಿನ್​ ಸಿಂಗ್​ (31ಕ್ಕೆ 5) ದಾಳಿಗೆ ಕುಸಿದು 42.3 ಓವರ್​ಗಳಲ್ಲಿ 216 ರನ್​ಗಳಿಗೆ ಸರ್ವಪತನ ಕಂಡಿತ್ತು. ಈ ಮೂಲಕ ಮೊಹಮ್ಮದ್​ ಅಜರುದ್ದೀನ್​ ಸಾರಥ್ಯದ ಭಾರತ ತಂಡ 157 ರನ್​ಗಳ ಭರ್ಜರಿ ಗೆಲುವು ದಾಖಲಿಸಿ, ಟೂರ್ನಿಯ ನಾಕೌಟ್​ ಪ್ರವೇಶದ ಆಸೆಯನ್ನು ಜೀವಂತ ಉಳಿಸಿಕೊಂಡಿತ್ತು. ಗಂಗೂಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net