ಈ ಐಪಿಎಲ್ ತಂಡ ನನಗಿನ್ನೂ ವೇತನ ನೀಡಿಲ್ಲ ಎಂದ ಆಸೀಸ್ ಕ್ರಿಕೆಟಿಗ ಬ್ರಾಡ್ ಹಾಡ್ಜ್!

hodge web
Published on

ಮೆಲ್ಬೋರ್ನ್: ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಬ್ರಾಡ್ ಹಾಡ್ಜ್ ಐಪಿಎಲ್ ಟೂರ್ನಿಯಲ್ಲಿ ವಿವಿಧ ತಂಡಗಳ ಪರ ಆಡಿದ್ದಾರೆ. ಆದರೆ ಈ ಪೈಕಿ ಕೊಚ್ಚಿ ಟಸ್ಕರ್ಸ್‌ ಕೇರಳ ತಂಡದಿಂದ ತಮಗೆ ಈಗಲೂ ಶೇ. 35ರಷ್ಟು ವೇತನ ಬಾಕಿ ಇದೆ ಎಂದು ಹಾಡ್ಜ್ ಹೇಳಿದ್ದಾರೆ. ಅಲ್ಲದೆ ಆ ಹಣ ಎಲ್ಲಿದೆ ಎಂದು ಹುಡುಕಿ ಕೊಡುವಂತೆಯೂ ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ.

ಬ್ರಾಡ್ ಹಾಡ್ಜ್ 2010ರ ಆವೃತ್ತಿಯಲ್ಲಿ ಕೊಚ್ಚಿ ಟಸ್ಕರ್ಸ್‌ ಪರ 14 ಪಂದ್ಯ ಆಡಿ 285 ರನ್ ಗಳಿಸಿದ್ದರು. ಆ ವರ್ಷದ ಹರಾಜಿನಲ್ಲಿ ಕೊಚ್ಚಿ ತಂಡ ಅವರನ್ನು 3 ಕೋಟಿ ರೂ. ಮೊತ್ತಕ್ಕೆ ಖರೀದಿಸಿತ್ತು. ‘10 ವರ್ಷಗಳ ಹಿಂದೆ ಐಪಿಎಲ್‌ನಲ್ಲಿ ಕೊಚ್ಚಿ ಟಸ್ಕರ್ಸ್‌ ಪರ ಆಡಿದ್ದ ಆಟಗಾರರಿಗೆ ಇನ್ನೂ ಶೇ. 35ರಷ್ಟು ಸಂಭಾವನೆ ಬಾಕಿ ಉಳಿದಿದೆ. ಆ ಹಣ ಎಲ್ಲಿದೆ ಎಂದು ಬಿಸಿಸಿಐ ಪತ್ತೆ ಹಚ್ಚಿ ನೀಡುವ ಅವಕಾಶವಿದೆಯೇ?’ ಎಂದು 46 ವರ್ಷದ ಬ್ರಾಡ್ ಹಾಡ್ಜ್ ಸೋಮವಾರ ಟ್ವೀಟಿಸಿದ್ದಾರೆ. ಅವರು ಐಪಿಎಲ್‌ನಲ್ಲಿ ಕೆಕೆಆರ್ ಮತ್ತು ರಾಜಸ್ಥಾನ ರಾಯಲ್ಸ್ ಪರವಾಗಿಯೂ ಆಡಿದ್ದರು.

ಟ್ವೀಟ್ ಪ್ರಕಾರ ಕೊಚ್ಚಿ ಟಸ್ಕರ್ಸ್‌ನಿಂದ ಹಾಡ್ಜ್‌ಗೆ ಇನ್ನೂ 92 ಲಕ್ಷ ರೂ. ಸಂಭಾವನೆ ಬಾಕಿ ಉಳಿದಿದೆ. ಕೊಚ್ಚಿ ಟಸ್ಕರ್ಸ್‌ 2011ರಲ್ಲಿ ವಾರ್ಷಿಕ ಪಾವತಿಯ ಮೊತ್ತ 155.3 ಕೋಟಿ ರೂ. ಬಾಕಿ ಉಳಿಸಿಕೊಂಡ ಕಾರಣದಿಂದಾಗಿ ಬಿಸಿಸಿಐ, ಐಪಿಎಲ್‌ನಿಂದ ಅದನ್ನು ಹೊರದಬ್ಬಿತ್ತು. ಎಸ್. ಶ್ರೀಶಾಂತ್, ಮಹೇಲ ಜಯವರ್ಧನೆ, ವಿನಯ್ ಕುಮಾರ್ ಮುಂತಾದ ಆಟಗಾರರೂ ಕೊಚ್ಚಿ ಟಸ್ಕರ್ಸ್‌ ಪರ ಆಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net