

ನವದೆಹಲಿ: ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಅವರ ಪತ್ನಿ ಸಫಾ ಬೇಗ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮುಖವನ್ನು ಬ್ಲರ್ ಚಿತ್ರವನ್ನು ಪ್ರಕಟಿಸಿದ್ದರು. ಇದರ ಬೆನ್ನಲ್ಲೇ ಸಫಾ ಬೇಗ್ ಅವರನ್ನು ಭಾರಿ ಟ್ರೋಲ್ ಮಾಡಲಾಗಿತ್ತು. ಇದಕ್ಕೆ ಪ್ರತಿಯಾಗಿ ಇರ್ಫಾನ್ ಪಠಾಣ್ ಇದೀಗ ಅದೇ ಚಿತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲೂ ಪ್ರಕಟಿಸುವ ಮೂಲಕ, ಟ್ರೋಲ್ ಮಾಡಿದವರಿಗೆ ದಿಟ್ಟ ಉತ್ತರವನ್ನೇ ನೀಡಿದ್ದಾರೆ.
ಪುತ್ರನ ಇನ್ಸ್ಟಾಗ್ರಾಂನಲ್ಲಿ ಈ ಚಿತ್ರವನ್ನು ಪೋಸ್ಟ್ ಮಾಡಿದ್ದ ಇರ್ಫಾನ್ ಪಠಾಣ್ ಪತ್ನಿ ಸಫಾ ಬೇಗ್, ತಮ್ಮ ಮುಖವನ್ನು ಬಹುತೇಕ ಬ್ಲರ್ ಮಾಡಿದ್ದರು. ಇರ್ಫಾನ್ ಪಠಾಣ್ ಕೂಡ ಇದ್ದ ಫ್ಯಾಮಿಲಿ ಫೋಟೋ ಇದಾಗಿತ್ತು. ಆದರೆ ಇದರಲ್ಲಿ ಸಫಾ ಬೇಗ್ ಮುಖ ಮಾತ್ರ ಬ್ಲರ್ ಆಗಿದ್ದಕ್ಕೆ ಅಭಿಮಾನಿಗಳು ಅವರನ್ನು ಟೀಕಿಸಿ ಟ್ರೋಲ್ಗಳನ್ನು ಮಾಡಿದ್ದರು. ತಮ್ಮ ಮುಖವನ್ನು ತೋರಿಸುವ ಸ್ವಾತಂತ್ರ ಇಲ್ಲವೇ ಎಂಬ ಪ್ರಶ್ನೆಯೊಂದಿಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಜತೆಗೆ ಮದುವೆಗೆ ಮುನ್ನ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದ ಚಿತ್ರಗಳನ್ನೂ ಮತ್ತೆ ಪೋಸ್ಟ್ ಮಾಡಲಾಗಿದೆ. ಇದಲ್ಲದೆ ಸಾಕಷ್ಟು ದ್ವೇಷಪೂರಿತ ಮತ್ತು ಅಸಭ್ಯ ಸಂದೇಶಗಳನ್ನು ಅವರ ವಿರುದ್ಧ ಪ್ರಕಟಿಸಲಾಗಿತ್ತು.
ಪತ್ನಿಯ ಬಗೆಗಿನ ನೆಟ್ಟಿಗರ ಟೀಕೆಗಳಿಗೆ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿರುವ 36 ವರ್ಷದ ಇರ್ಫಾನ್ ಪಠಾಣ್, ಈ ಚಿತ್ರವನ್ನು ನನ್ನ ಮಗನ ಖಾತೆಯಿಂದ ನನ್ನ ರಾಣಿ ಪೋಸ್ಟ್ ಮಾಡಿದ್ದಳು. ಇದಕ್ಕಾಗಿ ನಮ್ಮ ವಿರುದ್ಧ ಸಾಕಷ್ಟು ದ್ವೇಷಪೂರಿತ ಸಂದೇಶಗಳು ಬರುತ್ತಿವೆ. ಈ ಚಿತ್ರವನ್ನು ನಾನು ಇಲ್ಲಿ ಮತ್ತೆ ಪೋಸ್ಟ್ ಮಾಡುತ್ತೇನೆ. ಅವಳು ಈ ಚಿತ್ರವನ್ನು ಬ್ಲರ್ ಮಾಡಿರುವುದು ಅದು ಅವಳ ಆಯ್ಕೆ. ಹೌದು, ನಾನು ಅವಳ ಗಂಡ, ಆಕೆಯ ಮಾಸ್ಟರ್ ಅಲ್ಲ ಎಂದು ಹೇಳಿದ್ದಾರೆ. ಜತೆಗೆ ಅವಳ ಜೀವನ ಅವಳ ಆಯ್ಕೆ (ಹರ್ ಲೈಫ್ ಹರ್ ಚಾಯ್ಸ್) ಎಂಬ ಹ್ಯಾಷ್ ಟ್ಯಾಗ್ ಕೂಡ ನೀಡಿದ್ದಾರೆ.
ಭಾರತ ಪರ 29 ಟೆಸ್ಟ್, 120 ಏಕದಿನ ಮತ್ತ 24 ಟಿ20 ಪಂದ್ಯಗಳನ್ನು ಆಡಿರುವ ಪಠಾಣ್, ಐಪಿಎಲ್ನಲ್ಲಿ ಚೆನ್ನೈ ಸೂಪರ್ಕಿಂಗ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಡೆಲ್ಲಿ ಡೇರ್ಡೆವಿಲ್ಸ್, ಕೊಚ್ಚಿ ಟಸ್ಕರ್ಸ್, ಪುಣೆ ಸೂಪರ್ಜೈಂಟ್ಸ್ ಮತ್ತು ಸನ್ರೈಸರ್ಸ್ ತಂಡಗಳನ್ನು ಪ್ರತಿನಿಧಿಸಿದ್ದಾರೆ.