Mysuru Riot : ಬೆಂಗಳೂರಿನ ಡಿಜೆಹಳ್ಳಿ, ಕೆಜಿ ಹಳ್ಳಿಯಲ್ಲಿ 2020ರಲ್ಲಿ ನಡೆದಿದ್ದ ದಾಳಿಯ ರೀತಿಯಲ್ಲೇ ಮೈಸೂರಿನ ಉದಯಗಿರಿಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಮಾಡಿದ ಅವಹೇಳನಕಾರಿ ಪೋಸ್ಟ್ನಿಂದಾಗಿ ಗಲಭೆ ಸೃಷ್ಟಿಯಾಗಿದ್ದು, ಕೆಲ ಕಿಡಿಗೇಡಿಗಳು ಪೊಲೀಸ್ ಠಾಣೆ ಮತ್ತು ಡಿಸಿಪಿ ವಾಹನಗಳಿಗೆ ಕಲ್ಲು ತೂರಿದ್ದಾರೆ.
ಮೈಸೂರಿನ ಕಲ್ಯಾಣಿಗಿರಿ ನಿವಾಸಿ ಸುರೇಶ್ ಎಂಬಾತ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡಿದ್ದಕ್ಕೆ ಈ ಗಲಭೆ ಸೃಷ್ಟಿಯಾಗಿದೆ.
ಪೋಸ್ಟ್ನಲ್ಲಿ ಏನಿದೆ?
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ದೆಹಲಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಫೋಟೋಗಳನ್ನು ವಿವಸ್ತ್ರಗೊಳಿಸಿ, ತಲೆಯ ಮೇಲೆ ಅನ್ಯಧರ್ಮದ ವೇಷ ಭೂಷಣವನ್ನು ತಪ್ಪಾಗಿ ಎಡಿಟ್ ಮಾಡಿದ್ದಲ್ಲದೆ, ಕೆಲ ಆಕ್ಷೇಪಾರ್ಹ ಪದಗಳನ್ನು ಬರೆದು ಸುರೇಶ್ ಹರಿಬಿಟ್ಟಿದ್ದ.
ಪೊಲೀಸ್ ಠಾಣೆಗೆ ದಾಳಿ
ಸುರೇಶ್ ಪೋಸ್ಟ್ ನೋಡಿದ ಒಂದು ಸಮುದಾಯದ ಜನರು ಆಕ್ರೋಶಗೊಂಡು ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ ಕಲ್ಲು ತೂರಾಟವೂ ನಡೆಯಿತು. ಯಾವಾಗ ಕಲ್ಲು ತೂರಾಟವಾಯ್ತೋ ಆಗ ಪೊಲೀಸರು ಲಾಠಿ ಚಾರ್ಜ್ ಮಾಡಿ, ಅಶ್ರುವಾಯು ಸಿಡಿಸಿದರು. ಉದ್ರಿಕ್ತ ಪ್ರತಿಭಟನಾಕಾರರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಸದ್ಯ ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಾಗಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಇದರ ನಡುವೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಆರೋಪಿ ಸುರೇಶ್ ವಿರುದ್ಧ ದೂರು ದಾಖಲಿಸಲಾಗಿದೆ. ಉದಯಗಿರಿ ಠಾಣೆಯ ಪೊಲೀಸರು ಆತನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣ
2020ರಲ್ಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಸಹದೋರಳಿಯ ನವೀನ್ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದ ವಿವಾದಾತ್ಮಕ ಪೋಸ್ಟ್ ಅನ್ನೇ ಟಾರ್ಗೆಟ್ ಮಾಡಿಕೊಂಡು ಬೇರೆ ಸಮುದಾಯದವರು ಗಲಭೆ ಎಬ್ಬಿಸಿದ್ದರು. ಈ ವೇಳೆ ಪೊಲೀಸರು ನಡೆಸಿದ ಗೋಲಿಬಾರ್‌ನಿಂದ ಮೂವರು ಗಲಭೆಕೋರರು ಮೃತಪಟ್ಟಿದ್ದರು. ಶಾಸಕರ ಮನೆ, ದೇವರಜೀವನಹಳ್ಳಿ ಠಾಣೆ ಮತ್ತು ಸಾರ್ವಜನಿಕರ ಮನೆಗಳಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದರು. ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿದ್ದರು. ಬೆಂಗಳೂರು ಸಿಸಿಬಿ ಪೊಲೀಸರ ತನಿಖೆ ವೇಳೆ ಎನ್‌ಡಿಪಿಐ ಮತ್ತು ಪಿಎಫ್ಐ ಕಾರ್ಯಕರ್ತರ ಕೈವಾಡ ಇರುವುದು ಬೆಳಕಿಗೆ ಬಂದಿತ್ತು. ಅಲ್ಲದೆ, 360ಕ್ಕೂ ಅಧಿಕ ಗಲಭೆಕೋರರನ್ನು ಬಂಧಿಸಲಾಗಿತ್ತು. ಡಿಜೆ ಹಳ್ಳಿ, ಕೆಜಿ ಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದವು.