More

  ಸಿಎಂ ತವರಲ್ಲಿ ಕೈ-ಕಮಲ ಜಿದ್ದಾಜಿದ್ದಿ

  ಅಭಿವೃದ್ಧಿಯ ‘ಕ್ರೆಡಿಟ್ ವಾರ್’ ನಡೆಯುತ್ತಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವು ಸಿಎಂ ಸಿದ್ದರಾಮಯ್ಯ ಅವರಿಗೆ ತವರು ಜಿಲ್ಲೆಯೂ ಆಗಿರುವುದರಿಂದ ಪ್ರತಿಷ್ಠೆಯ ಕಣವಾಗಿದೆ. ಪ್ರಧಾನಿ ಮೋದಿ ವರ್ಚಸ್ಸನ್ನು ಮೆಟ್ಟಿ, ಪ್ರತಾಪಸಿಂಹ ಅವರ ಗೆಲುವಿಗೆ ತಡೆಯೊಡ್ಡಿ, ಕ್ಷೇತ್ರವನ್ನು ಮರಳಿ ಪಡೆಯುವ ಪ್ರಯತ್ನ ಕಾಂಗ್ರೆಸ್​ನಿಂದ ನಡೆಯುತ್ತಿದೆ.

  ಆರ್.ಕೃಷ್ಣ ಮೈಸೂರು
  ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ರಾಜಕೀಯ ರಂಗು ಹೆಚ್ಚುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಸಸ್ ಹಾಲಿ ಸಂಸದ ಪ್ರತಾಪಸಿಂಹ ನಡುವೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಅಚ್ಚರಿಯ ಅಭ್ಯರ್ಥಿಯಾಗಿ 2014ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದ ಪ್ರತಾಪಸಿಂಹ, ಎರಡು ಅವಧಿಗೆ ಸತತ ಆಯ್ಕೆಯಾಗಿ ಹ್ಯಾಟ್ರಿಕ್ ಗೆಲುವಿಗಾಗಿ ಕಸರತ್ತು ಆರಂಭಿಸಿದ್ದಾರೆ.

  ಪ್ರತಾಪಸಿಂಹ ಗೆಲುವಿನ ಓಟಕ್ಕೆ ಕಡಿವಾಣ ಹಾಕಬೇಕು ಎಂದು ಪಣ ತೊಟ್ಟಿರುವ ಸಿದ್ದರಾಮಯ್ಯ, ಸಮಯ ಸಿಕ್ಕಾಗಲೆಲ್ಲ ವಾಗ್ದಾಳಿ ಮಾಡುತ್ತಲೇ ಬಂದಿದ್ದಾರೆ. ಅಲ್ಲದೆ, ಬೆಂಗಳೂರು-ಮೈಸೂರು ಹೆದ್ದಾರಿಯ ಕ್ರೆಡಿಟ್ ವಾರ್ ಕೂಡ ನಡೆಯುತ್ತಿದ್ದು, ಇಬ್ಬರ ನಡುವೆ ಆರೋಪ-ಪ್ರತ್ಯಾರೋಪ ಸಾಮಾನ್ಯವಾಗಿದೆ.

  1952ರಲ್ಲಿ ಆರಂಭಗೊಂಡ ಮೈಸೂರು ಲೋಕಸಭಾ ಕ್ಷೇತ್ರ ಇದುವರೆಗೆ 17 ಚುನಾವಣೆ ಕಂಡಿದ್ದು, 12 ಬಾರಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಕ್ಷೇತ್ರ ಮರು ವಿಂಗಡಣೆ ಬಳಿಕ ಬಿಜೆಪಿ ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು, ನಾಲ್ಕು ಬಾರಿ ಗೆದ್ದಿದೆ. ಆರಂಭದಲ್ಲಿ ಕಿಸಾನ್ ಮಜ್ದೂರ್ ಪ್ರಜಾಪಾರ್ಟಿ ಗೆಲುವು ಕಂಡಿತ್ತು.

  ಅಂತಿಮಗೊಳ್ಳದ ಅಭ್ಯರ್ಥಿಗಳು: ಸತತ ಎರಡು ಬಾರಿ ಗೆಲುವು ಸಾಧಿಸಿರುವ ಪ್ರತಾಪಸಿಂಹ ಮೂರನೇ ಬಾರಿಯೂ ಟಿಕೆಟ್ ಖಚಿತ ಎನ್ನುವ ವಿಶ್ವಾಸದಲ್ಲಿದ್ದಾರೆ. ಮಾಜಿ ಸಚಿವ ಅಪ್ಪಚ್ಚು ರಂಜನ್ ಈ ಬಾರಿ ತಮಗೆ ಅವಕಾಶ ನೀಡುವಂತೆ ವರಿಷ್ಠರದಲ್ಲಿ ಮನವಿ ಮಾಡಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಭಾಸ್ಕರ್​ರಾವ್ ಸಹ ಅಲ್ಲಲ್ಲಿ ಸಭೆಗಳನ್ನು ನಡೆಸಿ ತಾವು ಆಕಾಂಕ್ಷಿ ಎನ್ನುವ ಸಂದೇಶ ನೀಡುತ್ತಿದ್ದಾರೆ. ಮೈತ್ರಿ ಮಾಡಿಕೊಂಡಿದ್ದರೂ ಕ್ಷೇತ್ರ ಯಾವುದು ಎಂಬ ನಿರ್ಧಾರ ಇನ್ನೂ ಆಗದಿರುವುದರಿಂದ ಜೆಡಿಎಸ್ ಸಹ ಮೈಸೂರು -ಕೊಡಗು ಕ್ಷೇತ್ರದ ಮೇಲೂ ಕಣ್ಣಿಟ್ಟಿದೆ. ಮಂಡ್ಯ ಕ್ಷೇತ್ರದಲ್ಲಿ ಹಾಲಿ ಸಂಸದರಿಗೆ ಬಿಜೆಪಿ ಮಣೆ ಹಾಕಿದರೆ, ಮೈಸೂರು ಜೆಡಿಎಸ್ ಪಾಲಾಗಲಿದೆ ಎನ್ನಲಾಗುತ್ತಿದೆ. ಜಯದೇವ ಆಸ್ಪತ್ರೆ ಮಾಜಿ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅಥವಾ ಮಾಜಿ ಸಚಿವ ಸಾ.ರಾ. ಮಹೇಶ್ ಅವರನ್ನು ಕಣಕ್ಕೆ ಇಳಿಸಬೇಕು ಎನ್ನುವ ಚರ್ಚೆ ನಡೆದಿದೆ.

  ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಹೆಸರು ಕೇಳಿ ಬರುತ್ತಿದೆ. ಅಲ್ಲದೆ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ಹೈಕೋರ್ಟ್ ವಕೀಲ ಚಂದ್ರಮೌಳಿ, ವೈದ್ಯ ಡಾ.ಸುಶ್ರುತ್ ಸೇರಿ ಹಲವರ ಹೆಸರು ಕೇಳಿ ಬರುತ್ತಿದೆ. ಬಿಜೆಪಿಯಿಂದ ಮಾನಸಿಕವಾಗಿ ದೂರವಾಗಿರುವ ಬೆಂಗಳೂರಿನ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಅವರನ್ನು ಕಾಂಗ್ರೆಸ್​ಗೆ ಕರೆತಂದು ಕಣಕ್ಕಿಳಿಸಲಾಗುತ್ತದೆ ಎನ್ನುವ ಚರ್ಚೆ, ಲೆಕ್ಕಾಚಾರ ನಡೆದಿದೆ. ಇದರೊಂದಿಗೆ ಮಾಜಿ ಸಂಸದ ಎಚ್.ವಿಶ್ವನಾಥ್ ಕೂಡ ಸ್ಪರ್ಧಿಸುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

  ಜೆಡಿಎಸ್ ಬಲ ನಿರ್ಣಾಯಕ: ಹಿಂದಿನ ಚುನಾವಣೆಗಳಲ್ಲಿ ಬಹುತೇಕ ತ್ರಿಕೋನ ಸೆಣಸಾಟ ನಡೆದು ಬಂದಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಪ್ರಬಲ ಪೈಪೋಟಿ ಇದೆ. ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಶಾಸಕರು ಹೆಚ್ಚು ಇದ್ದಾಗಲೂ ಬಿಜೆಪಿ ಅದರ ಲಾಭ ಪಡೆದು ಗೆಲುವು ಸಾಧಿಸಿರುವ ಉದಾಹರಣೆಗಳಿವೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಸ್ಪರ್ಧೆ ಮಾಡಿದ್ದರೂ ಬಿಜೆಪಿಗೆ ಜಯ ಒಲಿದಿತ್ತು. ಆದರೆ ಈಗ ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ. ಕಾಂಗ್ರೆಸ್ ಮಣಿಸಲು ಅಥವಾ ರಾಜಕೀಯ ಉದ್ದೇಶಕ್ಕಾಗಿ ಜಿಲ್ಲೆಯ ಜೆಡಿಎಸ್ ನಾಯಕರು, ಪರೋಕ್ಷವಾಗಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದದ್ದು ಗುಟ್ಟಾಗೇನು ಉಳಿದಿಲ್ಲ. ಈಗ ಬಹಿರಂಗವಾಗಿಯೇ ಕಣಕ್ಕೆ ಇಳಿಯಲಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದ್ದರೂ ಜೆಡಿಎಸ್ ಬಲವೂ ನಿರ್ಣಾಯಕ.

  ವಿಶೇಷ ಅನುದಾನದ ರೂವಾರಿ: ಪ್ರತಾಪಸಿಂಹ ಸಂಸದರ ಅನುದಾನದ ಜತೆಗೆ ಕೇಂದ್ರದ ವಿಶೇಷ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಹಲವು ಕಾಮಗಾರಿಗಳು ಪೂರ್ಣಗೊಂಡಿದ್ದರೆ, ಮತ್ತೆ ಕೆಲವು ಪ್ರಗತಿ ಹಂತದಲ್ಲಿವೆ. 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ಮೈಸೂರು-ಬೆಂಗಳೂರು ದಶಪಥ ರಸ್ತೆ ನಿರ್ವಣ, ಕುಶಾಲನಗರಕ್ಕೆ ಶ್ರೀರಂಗಪಟ್ಟಣ ಬಳಿಯಿಂದ ಬೈಪಾಸ್, ಮೈಸೂರá–ಕುಶಾಲನಗರ ನಡುವೆ 4130 ಕೋಟಿ ರೂ. ವೆಚ್ಚದ ನಾಲ್ಕು ಪಥದ ಹೆದ್ದಾರಿ, ಮುಡಾ ವ್ಯಾಪ್ತಿಯ 43.5 ಕಿಮೀ ಉದ್ದದ ಮೈಸೂರು ರಿಂಗ್ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಉನ್ನತೀಕರಿಸಿ, 147.7 ಕೋಟಿ ರೂ. ವೆಚ್ಚದಲ್ಲಿ ಡಾಂಬರೀಕರಣ ಮಾಡಲಾಗಿದೆ.

  ಮೈಸೂರು ವಿವಿ ಕ್ರಾಫರ್ಡ್ ಭವನ ಬಳಿ ರೈಲ್ವೆ ಅಂಡರ್ ಪಾಸ್ ನಿರ್ವಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 45.35 ಕೋಟಿ ರೂ. ಬಿಡುಗಡೆ. ಮೈಸೂರು ಕೇಂದ್ರ ರೈಲ್ವೆ ನಿಲ್ದಾಣವನ್ನು 356 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಕಾಮಗಾರಿ, ಕೆಲ ಹೊಸ ರೈಲುಗಳ ಸಂಚಾರ, ವಿಸ್ತರಣೆ. ಅಶೋಕಪುರಂ ರೈಲು ನಿಲ್ದಾಣ ಮೇಲ್ಡರ್ಜೆಗೆ, ರೈಲ್ವೆ ಯಾರ್ಡ್ ಅನ್ನು 37.5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಸೇರಿ ಇತರ ಕಾರ್ಯಕ್ರಮಗಳು.

  ಕ್ರೆಡಿಟ್ ವಾರ್: ಈ ಬಾರಿಯ ಚುನಾವಣೆಯಲ್ಲಿ ಅಭಿವೃದ್ಧಿ ಕೆಲಸಗಳ ‘ಕ್ರೆಡಿಟ್ ವಾರ್’ ಜೋರಾಗಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ‘ಅಭಿವೃದ್ಧಿ ನಮ್ಮ ಅವಧಿಯಲ್ಲಿ ಅಗಿದ್ದು’ ಎನ್ನುವ ವಾಗ್ವಾದ ಆರಂಭಗೊಂಡಿವೆ. ಇದರೊಂದಿಗೆ ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಆಗಿರುವುದರಿಂದ ರಾಜಕೀಯ ಪ್ರತಿಷ್ಠೆ ಹೆಚ್ಚಾಗಿದೆ.

  ಪ್ರಭಾವ ಬೀರುವ ಅಂಶಗಳು: ಸಿಎಂ ಸಿದ್ದರಾಮಯ್ಯ ಅವರ ‘ಪಂಚ ಗ್ಯಾರಂಟಿ’ ಹೆಸರಲ್ಲಿ ಕಾಂಗ್ರೆಸ್ ಹಾಗೂ ‘ಮೋದಿ ಗ್ಯಾರಂಟಿ’ ಹೆಸರಿನಲ್ಲಿ ಬಿಜೆಪಿ ಈಗಾಗಲೆ ಪ್ರಚಾರ ಶುರು ಮಾಡಿಕೊಂಡಿವೆ. ಜತೆಗೆ ಮೈಸೂರು ಜಿಲ್ಲೆಯಿಂದ ಆಯೋಧ್ಯೆ ಶ್ರೀರಾಮಲಲ್ಲಾ ವಿಗ್ರಹಕ್ಕೆ ಕಲ್ಲು ಹೋಗಿರುವುದು, ರಾಮಮಂದಿರ ವಿಷಯ ಸೇರಿಕೊಂಡಿವೆ. ಜಿಲ್ಲೆಯ ಮಟ್ಟಿಗೆ ಸಿದ್ದರಾಮಯ್ಯ ಹಾಗೂ ಪ್ರಧಾನಿ ನರೇಂದ್ರ ಮೋದಿ ಪ್ರಭಾವವೂ ಕೆಲಸ ಮಾಡಲಿದೆ.

  ಸದನದಲ್ಲಿ ಹಾಜರಾತಿ: ಸಂಸದ ಪ್ರತಾಪಸಿಂಹ ಲೋಕಸಭೆ ಕಲಾಪದಲ್ಲಿ ಶೇ.86 ಹಾಜರಾತಿ ಹೊಂದಿದ್ದಾರೆ. 8 ಬಾರಿ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. 355 ಪ್ರಶ್ನೆಗಳನ್ನು ಕೇಳಿದ್ದಾರೆ.

  ಮತ ಲೆಕ್ಕಾಚಾರ: ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ 6,88,974 ಮತ ಪಡೆಯುವ ಮೂಲಕ ಪ್ರತಿಸ್ಪರ್ಧಿಯನ್ನು 1,38,647 ಮತಗಳ ಅಂತರದಿಂದ ಮಣಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ 5,50,327 ಮತ ಪಡೆದರೆ, ಬಿಎಸ್​ಪಿ ಅಭ್ಯರ್ಥಿ ಡಾ.ಬಿ.ಚಂದ್ರು 24,597 ಮತ ಪಡೆದಿದ್ದರು. 5,346 ನೋಟಾ ಚಲಾವಣೆಗೊಂಡಿದ್ದವು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts