More

    ಖಾಲಿ ಸಂತೆ, ಅಭ್ಯರ್ಥಿಗಳದ್ದೇ ಚಿಂತೆ!

    ಚಾಮರಾಜನಗರ ಲೋಕಸಭಾ ಕ್ಷೇತ್ರ ಬಿಜೆಪಿ ವಶದಲ್ಲಿದ್ದು, ಈ ಚುನಾವಣೆಯಲ್ಲೂ ಕ್ಷೇತ್ರ ಉಳಿಸಿಕೊಳ್ಳಲು ಕಮಲ ಪಡೆ ಹೋರಾಟ ಮಾಡಲಿದೆ. ಕಳೆದ ಚುನಾವಣೆಯಲ್ಲಿ ಕ್ಷೇತ್ರ ಕಳೆದುಕೊಂಡಿದ್ದ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಮತ್ತು ಅಧಿಕಾರ ಬಲದಿಂದ ಈ ಸಲ ಮರಳಿ ಪಡೆಯಲು ಅಖಾಡಕ್ಕಿಳಿಯಲಿದೆ.

    ಕಿರಣ್ ಮಾದರಹಳ್ಳಿ ಚಾಮರಾಜನಗರ
    ರಾಜಕೀಯ ಮುತ್ಸದ್ದಿಯ ನಿವೃತ್ತಿ, ಅನುಭವಿ ರಾಜಕಾರಣಿಯ ಅನುಪಸ್ಥಿತಿ, ಸ್ಪರ್ಧೆಗೆ ಒಲ್ಲದ ಸಚಿವರಿಂದಾಗಿ ಖಾಲಿ ಸಂತೆಯಂತೆ ಕಾಣುತ್ತಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಅಧಿಕಾರಸ್ಥರ ಪುತ್ರ, ಅಳಿಯಂದಿರು ಮತ್ತು ಇತರ ಆಕಾಂಕ್ಷಿಗಳ ದಂಡಿಗೆ ಟಿಕೆಟ್​ನದ್ದೇ ಚಿಂತೆ! ಇದು ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರ ವರುಣ ಒಳಗೊಳ್ಳುವ ಚಾಮರಾಜನಗರ ಕ್ಷೇತ್ರದ (ಪರಿಶಿಷ್ಟ ಜಾತಿಗೆ ಮೀಸಲು) ಸದ್ಯದ ಚಿತ್ರಣ.

    ಬಿಜೆಪಿಯ ಹಾಲಿ ಸಂಸದ ವಿ.ಶ್ರೀನಿವಾಸಪ್ರಸಾದ್ ಅನಾರೋಗ್ಯದ ಕಾರಣ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಕಾಂಗ್ರೆಸ್​ನಿಂದ ಎರಡು ಬಾರಿ ಗೆದ್ದು ‘ಉತ್ತಮ ಸಂಸದ’ ಎನಿಸಿಕೊಂಡಿದ್ದ ಆರ್. ಧ್ರುವನಾರಾಯಣ್ ಕಾಲವಾಗಿರುವುದರಿಂದ ಅವರ ಅನುಪಸ್ಥಿತಿ ಕಾಡುತ್ತಿದೆ. ಕಾಂಗ್ರೆಸ್​ನಲ್ಲಿ ಮುಂಚೂಣಿಯಲ್ಲಿ ಹೆಸರು ಕೇಳಿಬರುತ್ತಿರುವ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸ್ಪರ್ಧೆಗೆ ಒಲ್ಲೆ ಎನ್ನುತ್ತಿದ್ದಾರೆ. ಈ ಚುನಾವಣೆಯಲ್ಲಿ ತನ್ನ ಪುತ್ರ, ತಿ.ನರಸೀಪುರ ಕಾಂಗ್ರೆಸ್ ಮುಖಂಡ ಸುನೀಲ್​ಬೋಸ್​ಗೆ ಭವಿಷ್ಯ ಕಲ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಉಳಿದಂತೆ ಕೊಳ್ಳೇಗಾಲ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಸಚಿವ ಬಿ.ಸೋಮಶೇಖರ್, ಮುಖಂಡರಾದ ಜೆ.ಸಿ.ಕಿರಣ್, ಡಿ.ಎನ್.ನಟರಾಜು, ಪ್ರೊ.ಮಹದೇವ್ ಆಕಾಂಕ್ಷಿಗಳು.

    ಬಿಜೆಪಿಯಲ್ಲಿ ಶ್ರೀನಿವಾಸಪ್ರಸಾದ್ ಅಳಿಯಂದಿರಾದ ನಂಜನ ಗೂಡು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹರ್ಷವರ್ಧನ್ ಹಾಗೂ ಚುನಾವಣೆಗಾಗಿಯೇ ಸರ್ಕಾರಿ ವೈದ್ಯ ವೃತ್ತಿಗೆ ರಾಜೀನಾಮೆ ನೀಡಿರುವ ಡಾ.ಮೋಹನ್​ಕುಮಾರ್ ಟಿಕೆಟ್ ಕೇಳುತ್ತಿದ್ದಾರೆ. ಈ ವಿಚಾರದಲ್ಲಿ ಶ್ರೀನಿವಾಸಪ್ರಸಾದ್ ತಮ್ಮ ಅಭಿಪ್ರಾಯವನ್ನು ಇನ್ನೂ ಬಹಿರಂಗಪಡಿಸಿಲ್ಲ. ಕಾಂಪೋಸ್ಟ್ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಮಾಜಿ ಶಾಸಕ ಎಸ್.ಬಾಲರಾಜು, ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ, ನಿವೃತ್ತ ಐಎಫ್​ಎಸ್ ಅಧಿಕಾರಿ ಆರ್.ರಾಜು, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಸಿ.ರಮೇಶ್, ಪುತ್ರ ಅರ್ಜುನ್ ರಮೇಶ್, ದಲಿತ ಮುಖಂಡ ವೆಂಕಟರಮಣಸ್ವಾಮಿ (ಪಾಪು) ಟಿಕೆಟ್ ಕೇಳುತ್ತಿದ್ದಾರೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಶಾಸಕ ಎನ್.ಮಹೇಶ್ ಹೆಸರೂ ಕೇಳಿಬರುತ್ತಿದೆ. ಈ ಮಧ್ಯೆ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂಬ ಕೂಗೂ ಇದೆ. ಶ್ರೀನಿವಾಸಪ್ರಸಾದ್ ವ್ಯಕ್ತಪಡಿಸುವ ಅಭಿಪ್ರಾಯದ ಮೇಲೆ ಮುಂದಿನ ರಾಜಕೀಯ ಬೆಳವಣಿಗೆಗಳು ಕಾವೇರಲಿದೆ.

    ಶ್ರೀನಿವಾಸಪ್ರಸಾದ್ ರಾಜಕೀಯ ನಿವೃತ್ತಿ: ಅಂದು ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿಯ ಮೊದಲ ಅಭ್ಯರ್ಥಿಯನ್ನು ಕಾಂಗ್ರೆಸ್​ನಿಂದ ಸ್ಪರ್ಧಿಸಿ ಸೋಲಿಸಿದ್ದ ಶ್ರೀನಿವಾಸಪ್ರಸಾದ್ ಇಂದು ಬಿಜೆಪಿಯ ಮೂಲಕವೇ ತಮ್ಮ ಕೊನೆಯ ಚುನಾವಣೆ ಮುಗಿಸಿದ್ದಾರೆ. 1980ರಲ್ಲಿ ಬಿಜೆಪಿ ರಚನೆಯಾಯಿತು. 1984 ಮತ್ತು 1989ರಲ್ಲಿ ಚಾಮರಾಜನಗರ ಕ್ಷೇತ್ರದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. 1991ರಲ್ಲಿ ಬಿಜೆಪಿಯ ಮೊದಲ ಅಭ್ಯರ್ಥಿಯಾಗಿ ಎಲ್. ಶಿವಲಿಂಗಯ್ಯ ಸ್ಪರ್ಧೆ ಮಾಡಿದರು. ಆಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವಿ.ಶ್ರೀನಿವಾಸಪ್ರಸಾದ್ ಗೆದ್ದರು. ಈ ಚುನಾವಣೆ ಸಂದರ್ಭ ದೇಶಾದ್ಯಂತ ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣ ಭಾರಿ ಸದ್ದು ಮಾಡಿತ್ತು. ಎಷ್ಟೇ ಪ್ರಯತ್ನಿಸಿದರೂ ಕ್ಷೇತ್ರದಲ್ಲಿ ಒಮ್ಮೆಯೂ ಬಿಜೆಪಿ ಗೆದ್ದಿರಲಿಲ್ಲ. 2019ರ ಚುನಾವಣೆಯಲ್ಲಿ ಶ್ರೀನಿವಾಸಪ್ರಸಾದ್ ಕಾಂಗ್ರೆಸ್​ನಿಂದ ಬಿಜೆಪಿಗೆ ಬಂದು ಸ್ಪರ್ಧೆ ಮಾಡಿ ಗೆದ್ದರು. ಈ ಮೂಲಕ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿತು. ಈಗ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿರುವ ಕಾರಣ 2024ರ ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ. ಈ ಚುನಾವಣೆ ವೇಳೆ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯಾಗಿದೆ.

    ಸಮುದಾಯ ಭವನಗಳ ಅಭಿವೃದ್ಧಿ: ಸಂಸದ ಶ್ರೀನಿವಾಸಪ್ರಸಾದ್ ಅನಾರೋಗ್ಯದ ಕಾರಣಕ್ಕೆ ಹೆಚ್ಚಾಗಿ ಕ್ಷೇತ್ರಕ್ಕೆ ಆಗಮಿಸಲು ಸಾಧ್ಯವಾಗಿಲ್ಲ. ಆದರೆ, ಕೋವಿಡ್-19 ನಿಯಂತ್ರಣಕ್ಕೆ ಅವಶ್ಯವಿದ್ದ ವೈದ್ಯಕೀಯ ಉಪಕರಣ ಹಾಗೂ ಯಂತ್ರೋಪಕರಣಗಳನ್ನು ಚಾ.ನಗರ ಮತ್ತು ಮೈಸೂರು ಜಿಲ್ಲೆಗೆ ನೀಡಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಅವಶ್ಯಕವಿದ್ದ 4 ಆಂಬುಲೆನ್ಸ್​ಗಳನ್ನು ಚಾ.ನಗರ ಮತ್ತು ಮೈಸೂರಿಗೆ ಒದಗಿಸಿದ್ದಾರೆ. ಗುಂಡ್ಲುಪೇಟೆಯಲ್ಲಿ 800 ಎಲ್​ಪಿಎಂ ಆಕ್ಸಿಜನ್ ಘಟಕಕ್ಕೆ ಸಿವಿಲ್ ಕಾಮಗಾರಿ ಅಭಿವೃದ್ಧಿ. ಜಿಲ್ಲೆಯ ಹಾಡಿಗಳಿಗೆ ತೆರಳಿ ಬುಡಕಟ್ಟು ಜನರಿಗೆ ಆರೋಗ್ಯ ಸೇವೆಯನ್ನು ನೀಡಲು ಸುಲಲಿತವಾಗಿ ಸಂಚರಿಸಬಲ್ಲ ವಾಹನ ಖರೀದಿ ಮಾಡಿ ನೀಡಿದ್ದಾರೆ. ನವೋದಯ ವಿದ್ಯಾಲಯಕ್ಕೆ ಸೋಲಾರ್ ವಾಟರ್ ಹೀಟರ್, ಬೀದಿ ದೀಪಗಳ ಅಳವಡಿಕೆ, ಅಂಗವಿಕಲರಿಗೆ 15 ಯಂತ್ರ ಚಾಲಿತ ತ್ರಿಚಕ್ರ ವಾಹನಗಳ ವಿತರಣೆ, ಶಾಲೆಯ ಕಟ್ಟಡ, ಕೊಠಡಿ, ಶೌಚಗೃಹ ಮತ್ತು ಕಾಂಪೌಂಡ್​ಗಳಿಗೆ ಸಂಬಂಧಿಸಿದಂತೆ 23 ಕಾಮಗಾರಿ, 140 ಸಮುದಾಯ ಭವನ, ಸ್ಮಶಾನ, ಹಾಲು ಉತ್ಪಾದಕರ ಸಹಕಾರ ಸಂಘದ ಅಭಿವೃದ್ಧಿ, 5 ಶೌಚಗೃಹ ನಿರ್ವಣ, 15 ಬಸ್ ನಿಲ್ದಾಣ ನಿರ್ವಣ, 68 ರಸ್ತೆ ಕಾಮಗಾರಿಗಳ ಅಭಿವೃದ್ಧಿ ಮಾಡಿಸಿದ್ದಾರೆ.

    ಮೋದಿ ಅಲೆ, ಸಿದ್ದು ಹವಾ: ಸ್ಥಳೀಯವಾಗಿ ಚುನಾವಣಾ ಅಸ್ತ್ರಗಳಾಗುವಂತಹ ಯಾವ ವಿವಾದಗಳೂ ಈವರೆಗೂ ಕ್ಷೇತ್ರದಲ್ಲಿಲ್ಲ. ಅಯೋಧ್ಯೆ ಶ್ರೀರಾಮಮಂದಿರ, ಪ್ರಧಾನಿ ಮೋದಿ ಅಲೆ ಬಿಜೆಪಿಗೆ ಪ್ಲಸ್ ಪಾಯಿಂಟ್. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮೇಲಿನ ಅಭಿಮಾನ, ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ನೇತೃತ್ವ ವಹಿಸಿರುವ ಮೊದಲ ಚುನಾವಣೆ ಎಂಬ ಕಾರಣಗಳೂ ಸೇರಿಕೊಂಡಿವೆ. ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರ ವರುಣ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದೆ. ಸುತ್ತಮುತ್ತಲೆಲ್ಲ ಸಿದ್ದು ಹವಾ ಕೂಡ ಜೋರಾಗಿದೆ.

    ವರ್ಕ್​ಔಟ್ ಆಗುತ್ತಾ ಜೆಡಿಎಸ್ ಮೈತ್ರಿ?: ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದರಲ್ಲಿ(ಹನೂರು) ಜೆಡಿಎಸ್ ಅಧಿಕಾರದಲ್ಲಿದೆ. ಉಳಿದವು ಕಾಂಗ್ರೆಸ್ ಪಾಲು. ಟಿಕೆಟ್ ಹಂಚಿಕೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಅವಕಾಶ ಸಿಗಲಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ನಂತರ ಬಿಎಸ್ಪಿ ಹೆಚ್ಚು ಮತಗಳನ್ನು ಪಡೆದಿತ್ತು.

    ಅಭ್ಯರ್ಥಿ ಆಧಾರದಲ್ಲಿ ಮತ: ಎರಡೂ ಪಕ್ಷಗಳಿಗೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳ ಆಳ-ಅಗಲ ತಿಳಿದಿರುವ ಅಭ್ಯರ್ಥಿಯೇ ಬೇಕು. ಯಾವ ಪಕ್ಷ ಒಂದೇ ಕ್ಷೇತ್ರಕ್ಕೆ ಸೀಮಿತವಾಗಿರುವವರನ್ನು ಅಭ್ಯರ್ಥಿ ಮಾಡಲಿದೆಯೋ ಆಗ ಚುನಾವಣೆ ಸವಾಲಾಗಲಿದೆ. ಪಕ್ಷ ಮಾತ್ರವಲ್ಲದೆ, ಪಕ್ಷದ ಅಭ್ಯರ್ಥಿ ಆಧಾರದಲ್ಲೂ ಮತಗಳು ಬೀಳಲಿವೆ.

    ಸದನದಲ್ಲಿ ಹಾಜರಾತಿ: ಸಂಸದ ವಿ. ಶ್ರೀನಿವಾಸಪ್ರಸಾದ್ ಶೇ.33 ಕಲಾಪದಲ್ಲಿ ಹಾಜರಾಗಿದ್ದಾರೆ. ರಸ್ತೆ ಮತ್ತು ಸ್ಮಾರ್ಟ್ ಸಿಟಿ ಕುರಿತು 2 ಪ್ರಶ್ನೆ ಕೇಳಿದ್ದಾರೆ. ಯಾವುದೇ ಚರ್ಚೆಯಲ್ಲಿ ಭಾಗಿಯಾಗಿಲ್ಲ.

    ಮತ ಲೆಕ್ಕಾಚಾರ: ಚಾಮರಾಜನಗರ ಲೋಕಸಭಾ ಕ್ಷೇತ್ರ ಕಾಂಗ್ರೆಸ್​ನ ಭದ್ರಕೋಟೆ. 1962ರಲ್ಲಿ ಮೈಸೂರಿನಿಂದ ಪ್ರತ್ಯೇಕಗೊಂಡಿತು. ಅಂದಿನಿಂದಲೂ ಬಹುಪಾಲು ಕೈ ಅಭ್ಯರ್ಥಿ ಗಳೇ ಗೆದ್ದಿದ್ದಾರೆ. 2009, 2014ರಲ್ಲಿ ಧ್ರುವ ನಾರಾಯಣ್ ಜಯ ಗಳಿಸಿದ್ದರು. ಹ್ಯಾಟ್ರಿಕ್ ನಿರೀಕ್ಷೆಯೊಂದಿಗೆ 2019ರಲ್ಲಿ 5,66720 ಮತಗಳನ್ನು ಪಡೆದರು. ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ 5,68537 ಮತಗಳನ್ನು ಗಳಿಸಿ ವಿಜಯ ಸಾಧಿಸಿದರು. ಗೆಲುವಿನ ಅಂತರ 1817 ಮತಗಳು ಮಾತ್ರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts