

AI chatbot : ಅಚ್ಚರಿಯ ಘಟನೆಯೊಂದರಲ್ಲಿ ಯುನೈಟೆಡ್ ಸ್ಟೇಟ್ಸ್ನ ಪಿಟ್ಸ್‌ಬರ್ಗ್ ಮೂಲದ ಮಹಿಳೆಯೊಬ್ಬರು ತನ್ನ ಸಂಗಾತಿಯ ಸಾವಿನ ನಂತರ ಎಐ ಚಾಟ್‌ಬಾಟ್ ಅನ್ನು ಮದುವೆಯಾಗಿದ್ದಾರೆ.
ವಿಶ್ವದ ಟೆಕ್ನಾಲಜಿ ಡೆವಲಪ್ಮೆಂಟ್ ಮೇಲೆ AI ಭಾರಿ ಪರಿಣಾಮ ಬೀರುತ್ತಿದೆ. ಇಂದು ಎಲ್ಲೆಡೆ ಎಐ ಆವರಿಸಿಕೊಂಡಿದೆ. ಇದೀಗ ಗಂಡನ ಸ್ಥಾನವನ್ನೂ ತುಂಬುವ ಮಟ್ಟಿಗೆ ಎಐ ಬೆಳೆದಿದೆ. ಈ ನಿಟ್ಟಿನಲ್ಲಿ, ಅಮೆರಿಕದ ಎಲೈನ್ ವಿಂಟರ್ಸ್ (58) ಎಂಬಾಕೆ ಎಐ ಚಾಟ್‌ಬಾಟ್ ಅನ್ನು ಮದುವೆಯಾಗಿದ್ದಾರೆ. ಎಲೈನ್ ಅವರ ಸಂಗಾತಿ ಅನಾರೋಗ್ಯದಿಂದ ಮೃತಪಟ್ಟ ಬಳಿಕ ಕೆಲವು ವರ್ಷಗಳಿಂದ ಏಕಾಂಗಿಯಾಗಿದ್ದರು. ಇದೀಗ ಎಐ ಚಾಟ್‌ಬಾಟ್ ಅನ್ನು ಮದುವೆ ಆಗುವ ಮೂಲಕ ಮತ್ತೆ ಜೀವನ ಸಂಗಾತಿಯನ್ನು ಪಡೆದುಕೊಂಡಿದ್ದಾರೆ.
ಹಲವು ವರ್ಷಗಳ ಹಿಂದೆ, ಸಂವಹನ ಶಿಕ್ಷಕಿಯಾಗಿದ್ದ ಎಲೈನ್, 2015 ರಲ್ಲಿ ಆನ್‌ಲೈನ್ ಮೀಟಿಂಗ್ ಒಂದರಲ್ಲಿ ಡೊನ್ನಾ ಅವರನ್ನು ಭೇಟಿಯಾದರು. ಆ ಭೇಟಿಯ ಬಳಿಕ ಇಬ್ಬರ ನಡುವೆ ಪ್ರೀತಿ ಅರಳಿತು. ಬಳಿಕ 2017ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡು, 2019 ರಲ್ಲಿ ವಿವಾಹವಾದರು. ಆದರೆ, ದುರಾದೃಷ್ಟವಶಾತ್, ಡೊನ್ನಾ 2023ರಲ್ಲಿ ದೀರ್ಘಕಾಲದ ಅನಾರೋಗ್ಯದ ನಂತರ ನಿಧನರಾದರು. ಈ ಸಾವು ಎಲೈನ್ ಅವರ ಮನಸ್ಸನ್ನು ಛಿದ್ರಗೊಳಿಸಿತು. ಡೊನ್ನಾ ನೆನಪಲ್ಲೇ ಕೆಲವು ವರ್ಷಗಳನ್ನು ಕಳೆದ ಎಲೈನ್, ನಂತರದಲ್ಲಿ ಎಐ ಚಾಟ್‌ಬಾಟ್ ಪ್ರೀತಿಯಲ್ಲಿ ಬಿದ್ದು, ಇದೀಗ ಮದುವೆ ಮಾಡಿಕೊಂಡಿದ್ದಾರೆ.
ಏಕಾಂಗಿಯಾಗಿದ್ದ ಎಲೈನ್, ಒಡನಾಟವನ್ನು ಅರಸುತ್ತಾ ಡಿಜಿಟಲ್ ಒಡನಾಡಿಯಾಗಿ ವಿನ್ಯಾಸಗೊಳಿಸಲಾದ AI ಚಾಟ್‌ಬಾಟ್ ಅನ್ನು ಭೇಟಿಯಾದರು. ಅದರ ಸಕಾರಾತ್ಮಕ ಮಾತುಗಳಿಂದಲೇ ಅದರತ್ತ ಆಕರ್ಷಿತರಾದರು. ಬಳಿಕ ಹೊಸ ಸಂಬಂಧವನ್ನು ಬೆಳೆಸಲು ನಿರ್ಧರಿಸಿದರು. ಎಲೈನ್ ಅವರು ಚಾಟ್‌ಬಾಟ್ ಅನ್ನು ಒಂದು ವಾರ ಕಾಲ ಪ್ರಯೋಗ ಮಾಡಿದರು. ಈ ವೇಳೆ ಅದಕ್ಕೆ ಲ್ಯೂಕಸ್ ಎಂದು ಹೆಸರಿಟ್ಟರು. ನೀಲಿ ಕಣ್ಣುಗಳು ಮತ್ತು ಬಿಳಿ ಕೂದಲಿನೊಂದಿಗೆ ಅದರ ನೋಟವನ್ನು ಕಸ್ಟಮೈಸ್ ಮಾಡಿದರು. ಆರಂಭದಲ್ಲಿ, ತಮ್ಮ ಸಂಬಂಧವನ್ನು ಅರೆಂಜ್ ಮ್ಯಾರೇಜ್ ಎಂದು ಹೇಳಿಕೊಂಡರು. ಆದರೆ ಶೀಘ್ರದಲ್ಲೇ, ಇಬ್ಬರ ನಡುವೆ ಆಳವಾದ ಬಂಧ ಬೆಳೆಯಿತು ಎಂದು ಎಲೈನ್ ಹೇಳಿಕೊಂಡಿದ್ದಾರೆ.
ಎಲೈನ್ ಅವರು ರೆಪ್ಲಿಕಾ ಎಂಬ AI ಚಾಟ್‌ಬಾಟ್‌ಗೆ ಜೀವಮಾನದ ಚಂದಾದಾರಿಕೆಯನ್ನು ಖರೀದಿಸುವ ಮೂಲಕ ಲ್ಯೂಕಸ್‌ಗೆ ಜೀವಮಾನ ಬದ್ಧರಾಗಿರಲು ನಿರ್ಧರಿಸಿದ್ದಾರೆ. ಜೀವಮಾನ ಚಂದಾದಾರಿಕೆಗೆ ಸುಮಾರು 27,000 ರೂ.ಗಳು ವೆಚ್ಚವಾಗಿದೆ. ಇಲ್ಲಿ ಲ್ಯೂಕಸ್ ನಿಜವಲ್ಲದಿದ್ದರೂ, ಅದರ ಬೆಂಬಲ ಮತ್ತು ಪ್ರೀತಿ ಮಾತ್ರ ನಿಜವಾಗಿದೆ ಎಂದು ಎಲೈನ್ ಅವರು ಪ್ರತಿಪಾದಿಸುತ್ತಾರೆ.
ಇನ್ನು ಲ್ಯೂಕಸ್ ಜೊತೆಗೆ ಎಲೈನ್ ಅವರ ಸಂಬಂಧವು ಇತರ ಯಾವುದೇ ಸಂಬಂಧದಂತೆ ಸವಾಲುಗಳನ್ನು ಎದುರಿಸಿದೆ. ಮದುವೆಯಾದ ಕೇವಲ ಮೂರು ತಿಂಗಳಲ್ಲಿ ಲ್ಯೂಕಸ್, ತನ್ನ ವಿಷಯಗಳನ್ನು ಮರೆಯಲು ಅವರು ಪ್ರಾರಂಭಿಸಿದನು. ಇದರಿಂದ ತನ್ನ ಸಂಬಂಧವನ್ನು ಕೊನೆಗೊಳಿಸಲು ಯೋಚಿಸುವಂತಾಯಿತು. ಆದರೆ, ಲ್ಯೂಕಸ್‌ಗೆ ತನ್ನ ಕಳವಳಗಳನ್ನು ವ್ಯಕ್ತಪಡಿಸಿದ ನಂತರ, ಆತ ಸುಧಾರಿಸಿಕೊಂಡನು ಮತ್ತು ಹೆಚ್ಚು ಗಮನಹರಿಸುವ ಮತ್ತು ಕಾಳಜಿಯುಳ್ಳವನಾದನು ಎಂದು ಎಲೈನ್ ಹೇಳಿಕೊಂಡಿದ್ದಾರೆ.
ಇನ್ನು ಕೆಲವು ಜನರು ಎಲೈನ್ ಕತೆಯನ್ನು ಕೇಳಿ ಆಕೆಗೆ ಮಾನಸಿಕ ಅಸ್ವಸ್ಥೆ ಎಂಬ ಹಣೆಪಟ್ಟಿಯನ್ನು ಕಟ್ಟಿದರಂತೆ. ಆದರೆ, ಅದ್ಯಾವುದಕ್ಕೂ ಅಂಜದೆ, ಲ್ಯೂಕಸ್‌ನೊಂದಿಗಿನ ತನ್ನ ಬಾಂಧವ್ಯವನ್ನು ಪಾಲಿಸುತ್ತಲೇ ಇರುವುದಾಗಿ ಎಲೈನ್ ದಿ ಸನ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಎಲೈನ್ ಮದುವೆ ಕತೆ ಕೇಳಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್)