

ಚೆನ್ನೈ: ಟೀಮ್ ಇಂಡಿಯಾದ ಲೆಜೆಂಡರಿ ಆಟಗಾರ ಆರ್. ಅಶ್ವಿನ್ (Ashwin) ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ (Border-Gavaskar Trophy Test Series) ಮಧ್ಯದಲ್ಲೇ ನಿವೃತ್ತಿಯನ್ನು ಘೋಷಿಸುವ ಮೂಲಕ ಅಚ್ಚರಿಗೆ ಕಾರಣವಾಗಿದ್ದರು. ಇನ್ನೂಅಶ್ವಿನ್ ನಿವೃತ್ತಿ ಘೋಷಿಸಲು ಅವಮಾನವೇ ಕಾರಣ ಎಂದು ಹೇಳುವ ಮೂಲಕ ಅವರ ತಂದೆ ಹೊಸ ಚರ್ಚೆಯನ್ನೇ ಹುಟ್ಟು ಹಾಕಿದ್ದರು. ಈ ವಿಚಾರ ಕ್ರೀಡಾ ವಲಯದಲ್ಲಿ ಪರ-ವಿರೋಧಕ್ಕೆ ಆಸ್ಪದ ಮಾಡಿಕೊಟ್ಟಿತ್ತು. ಇದೀಗ ಈ ಬಗ್ಗೆ ಖುದ್ದು ಆರ್. ಅಶ್ವಿನ್ ಸ್ಪಷ್ಟನೆ ನೀಡಿದ್ದು, ಎದ್ದಿರುವ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಶ್ವಿನ್ (Ashwin), ನನ್ನ ತಂದೆಗೆ ಮಾಧ್ಯಮದ ಮುಂದೆ ಹೇಗೆ ಮಾತನಾಡಬೇಕು ಎಂಬುದು ಗೊತ್ತಿಲ್ಲ. ಅವರ ಹೇಳಿಕೆ ಇಷ್ಟೊಂದು ಮನ್ನಣೆ ಪಡೆಯುತ್ತದೆ ಎಂದು ನಾನು ಭಾವಿಸಿರಲಿಲ್ಲ. ನೀವೆಲ್ಲರೂ ಅವರನ್ನು ಕ್ಷಮಿಸಿ ಬಿಟ್ಟುಬಿಡಿ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮನವಿ ಮಾಡಿದ್ದಾರೆ. ಈ ಮೂಲಕ ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಶ್ವಿನ್ (Ashwin) ತಂದೆ, ಆತ ನಿವೃತ್ತಿ ಘೋಷಿಸುವ ವಿಚಾರ ನನಗೂ ಕೊನೆಯ ಕ್ಷಣದಲ್ಲಿ ಗೊತ್ತಾಯಿತು. ಆತನ ಮನಸ್ಸಿನಲ್ಲಿ ಏನಾಗುತ್ತಿದೆ ಎಂಬುದು ನನಗೆ ತಿಳಿದಿಲ್ಲ. ಆತ ನಿವೃತ್ತಿ ಘೋಷಿಸಿರುವ ವಿಚಾರವನ್ನು ನಾನು ಪೂರ್ಣಪ್ರಮಾಣದಲ್ಲಿ ಒಪ್ಪಿಕೊಳ್ಳುತ್ತೇನೆ. ಆದರೆ, ಆತ ನಿವೃತ್ತಿ ಘೋಷಿಸಿದ ರೀತಿ, ಒಂದು ಕಡೆ ನನಗೆ ತುಂಬಾ ಸಂತೋಷ ನೀಡಿದ್ದರೆ, ಮತ್ತೊಂದೆಡೆ ನನಗೆ ನೋವುಂಟು ಮಾಡಿದೆ. ಏಕೆಂದರೆ ಅವನು ತನ್ನ ಆಟವನ್ನು ಮುಂದುವರಿಸಬೇಕಾಗಿತ್ತು. ನಿವೃತ್ತಿ ಎಂಬುದು ಅಶ್ವಿನ್ ಅವರ ನಿರ್ಧಾರವಾಗಿದ್ದು, ನಾನು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ.
ಅಶ್ವಿನ್ ನಿವೃತ್ತಿ ತೆಗೆದುಕೊಂಡ ರೀತಿಗೆ ಹಲವು ಕಾರಣಗಳಿರಬಹುದು. ಅದು ಅಶ್ವಿನ್ಗೆ ಮಾತ್ರ ಗೊತ್ತು, ತಂಡದಲ್ಲಿ ಆತನಿಗೆ ಆಗುತ್ತಿದ್ದ ಅವಮಾನವೂ ಕಾರಣವಾಗಿರಬಹುದು. ಆತನ ನಿವೃತ್ತಿ ನಮಗೆ ಭಾವನಾತ್ಮಕ ಕ್ಷಣವಾಗಿದೆ ಏಕೆಂದರೆ ಅವರು 14-15 ವರ್ಷಗಳ ಕಾಲ ತಂಡದಲ್ಲಿ ಆಡಿದರು. ಹೀಗಾಗಿ ಅವರ ಹಠಾತ್ ನಿವೃತ್ತಿ ನಮಗೆ ಆಘಾತ ತಂದಿತು. ಆತನನ್ನು ನಿರಂತರವಾಗಿ ಅವಮಾನಿಸಲಾಗುತ್ತಿದೆ ಎಂದು ನಾವು ಭಾವಿಸುತ್ತೇವೆ. ಹೀಗಾಗಿ ಇದನ್ನೆಲ್ಲಾ ಇನ್ನೆಷ್ಟು ದಿನ ಸಹಿಸಿಕೊಳ್ಳಲು ಸಾಧ್ಯ ಹೇಳಿ ಹಾಗಾಗಿಯೇ ನಿವೃತ್ತಿ ನಿರ್ಧಾರ ಮಾಡಿರಬಹುದು ಎಂದು ಅಶ್ವಿನ್ ಅವರ ತಂದೆ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.