ಅಬಕಾರಿ ನೀತಿ ಹಗರಣ; ನನ್ನನ್ನು ಅಕ್ರಮವಾಗಿ ಬಂಧಿಸಲಾಗಿದೆ: ಕೆ. ಕವಿತಾ

K Kavitha
Published on

ನವದೆಹಲಿ: 2020-21ರಲ್ಲಿ ದೆಹಲಿ ಸರ್ಕಾರ ಜಾರಿಗೆ ತರಬೇಕು ಎಂದು ಉದ್ಧೇಶಿಸಿದ್ದ ಅಬಕಾರಿ ನೀತಿಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನನ್ನನ್ನು ಕಾನೂನು ಬಾಹಿರವಾಗಿ ಬಂಧಿಸಿದ್ದಾರೆ ಎಂದು ತೆಲಂಗಾಣ ಮಾಜಿ ಸಿಎಂ ಕೆಸಿಆರ್​ ಪುತ್ರಿ, ವಿಧಾನಪರಿಷತ್​ ಸದಸ್ಯೆ ಕೆ. ಕವಿತಾ ಆರೋಪಿಸಿದ್ದಾರೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕವಿತಾ ಅವರನ್ನು ಶನಿವಾರ (ಮಾರ್ಚ್​ 16) ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದಾರೆ.

ಕವಿತಾ ಅವರನ್ನು ಕಾನೂನುಬಾಹಿರವಾಗಿ ಬಂಧಿಸುವ ಮೂಲಕ ಇ.ಡಿ ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಅವರು (ಇ.ಡಿ ಅಧಿಕಾರಿಗಳು) ಸುಪ್ರೀಂ ಕೋರ್ಟ್ ಆದೇಶವನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ ಎಂದು ಕವಿತಾ ಪರ ವಕೀಲರು ಆರೋಪಿಸಿದ್ದಾರೆ.

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರ ನೈತಿಕಸ್ಥೈರ್ಯ ಕುಸಿಯುವಂತೆ ಮಾಡಲು ಬಿಜೆಪಿ ಹೆಣೆದಿರುವ ರಾಜಕೀಯ ಪಿತೂರಿಯ ಭಾಗವಾಗಿದೆ. ಕವಿತಾ ಅವರ ಬಂಧನ ಕಾನೂನು ಬಾಹಿರವಾಗಿದ್ದು, ಈ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಭಾರತ ರಾಷ್ಟ್ರ ಸಮಿತಿ ಪಕ್ಷ ಆಗ್ರಹಿಸಿದೆ.

ಕಾರ್ಯಕ್ರಮದ ನಿಮಿತ್ತ ಶುಕ್ರವಾರ ತೆಲಂಗಾಣದ ಹೈದರಾಬಾದ್​​ಗೆ ಭೇಟಿ ನೀಡಿ್ದ ಪ್ರಧಾನಿ ಮೋದಿ ರೋಡ್​ ಶೋ ನಡೆಸಿದ್ದರು. ರೋಡ್​ ಶೋ ನಡೆಸಿದ ಕೆಲವೇ ಗಂಟೆಗಳ ನಂತರ ಅವರನ್ನು ಬಂಧಿಸಿರುವುದು ಬಿಜೆಪಿ ಹಾಗೂ ಬಿಆರ್​ಎಸ್​ ನಡುವಿನ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net