

ನವದೆಹಲಿ: ಅಬಕಾರಿ ನೀತಿಯಲ್ಲಿನ ಜಾರಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ,ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯ (ED) ದಾಖಲಿಸಿದ್ದ ದೂರಿಗೆ ಸಂಬಂಧಿಸಿದಂತೆ ರೋಸ್ ಅವೆನ್ಯೂ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ.
ಜಾಮೀನು ಅರ್ಜಿ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ದಿವ್ಯಾ ಮಲ್ಹೋತ್ರಾ ಅವರಿದ್ದ ಏಕಸದಸ್ಯ ಪೀಠವು ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿದ ಬಳಿಕ ₹10 ಸಾವಿರದ ಬಾಂಡ್ ಮತ್ತು ₹1 ಲಕ್ಷ ಶ್ಯೂರಿಟಿ ಆಧಾರದ ಮೇಲೆ ಅರವಿಂದ್ ಕೇಜ್ರಿವಾಲ್ಗೆ ಜಾಮೀನು ಮಂಜೂರು ಮಾಡಿದ್ದಾರೆ.
2020-21ರಲ್ಲಿ ದೆಹಲಿ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ಧೇಶನಾಲಯ ಅರವಿಂದ್ ಕೇಜ್ರಿವಾಲ್ಗೆ 8ಕ್ಕೂ ಹೆಚ್ಚು ಬಾರಿ ಸಮನ್ಸ್ ಜಾರಿ ಮಾಡಿದ್ದು, ಕೇಜ್ರಿವಾಲ್ ವಿಚಾರಣೆಗೆ ಹಾಜರಾಗದೆ ಸಮನ್ಸ್‌ಗಳನ್ನು ಕೈಬಿಟ್ಟಿದ್ದರು. ಈ ಸಮನ್ಸ್‌ಗಳು ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ. ಚುನಾವಣಾ ಪ್ರಚಾರಕ್ಕೆ ಹೋಗದಂತೆ ನನ್ನನ್ನು ತಡೆಯುವ ಉದ್ದೇಶದಿಂದ ಸಮನ್ಸ್ ನೀಡಲಾಗಿದೆ ಎಂದು ಕೇಜ್ರಿವಾಲ್ ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.