

ಬೆಂಗಳೂರು: ಈ ವಾರ ಕನ್ನಡದ 11 ಚಿತ್ರಗಳು ಬಿಡುಗಡೆಯಾಗಿವೆ ಅಂತಂದುಕೊಂಡರೆ ತಪ್ಪು. ಈ 11 ಚಿತ್ರಗಳ ಜತೆಗೆ ಇನ್ನೂ ಒಂದು ಚಿತ್ರ ಸದ್ದಿಲ್ಲದೆ ಬಿಡುಗಡೆಯಾಗಿದೆ. ಈ ಚಿತ್ರ ನೇರವಾಗಿ ನಮ್ಮ ಫ್ಲಿಕ್ಸ್ ಎಂಬ ಓಟಿಟಿಯಲ್ಲಿ ಬಿಡುಗಡೆಯಾಗಿರುವುದು ವಿಶೇಷ.
ಈ ಚಿತ್ರದ ಹೆಸರು 'ಮ್ಯೂಟ್'. 'ಕೆಜಿಎಫ್' ಚಿತ್ರಗಳಲ್ಲಿ ಅಮ್ಮನ ಪಾತ್ರದಲ್ಲಿ ನಟಿಸಿದ್ದ ಅರ್ಚನಾ ಜೋಯಿಸ್ ಈ ಚಿತ್ರದ ನಾಯಕಿ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿ ಐದು ಭಾಷೆಗಳಲ್ಲಿ ತೆರೆ ಕಾಣಲಿದೆ. ಮೊದಲ ಹಂತವಾಗಿ ಕನ್ನಡದಲ್ಲಿ ಮಾತ್ರ ಈಗ ಬಿಡುಗಡೆಯಾಗಿದೆ. ಇದಕ್ಕೂ ಮುನ್ನ ಬಾಲಿವುಡ್ ನಟಿ ರವೀನಾ ಟಂಡನ್ ಏಕಕಾಲದಲ್ಲಿ ಕನ್ನಡ, ತೆಲುಗು, ಮಾಲಯಾಳಂ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ 'ಮ್ಯೂಟ್" ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದರು.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ದಿವ್ಯಾ ಎನ್ನುವ ಸ್ವಾವಲಂಬಿ ಮಹಿಳೆ ಸುತ್ತ ಸುತ್ತುತ್ತದೆ. ತನ್ನ ಗಂಡನ ಮೋಸ ಗೊತ್ತಾದಾಗ ಕುಸಿದು ಹೋಗಿರುವ ದಿವ್ಯಾ, ಕಾಸ್ಮೋ ಎಂಬ ನಾಯಿಯನ್ನು ಸಾಕಿಕೊಂಡಾಗ ಅವಳ ಜೀವನ ಬದಲಾಗುತ್ತದೆ. ಒಂದು ದಿನ ಇದ್ದಕ್ಕಿದ್ದಂತೆ, ಆ ನಾಯಿ ಕಳೆದು ಹೋಗುತ್ತದೆ. ಅದನ್ನು ಹುಡುಕುವ ಹಾದಿಯಲ್ಲಿ ಆಕೆ ಏನೆಲ್ಲ ಅನುಭವಿಸುತ್ತಾಳೆ ಎನ್ನುವುದು ಚಿತ್ರದ ಕಥೆ.
'ಮ್ಯೂಟ್' ಚಿತ್ರವನ್ನು ಇ.ಕೆ.ಫಿಕ್ಚರ್ಸ್ ಬ್ಯಾನರ್ನಡಿ ಜಿ. ಗಂಗಾಧರ್ ನಿರ್ಮಿಸಿದ್ದಾರೆ. 'ಮುಂಗಾರು ಮಳೆ' ಮತ್ತು 'ಮೊಗ್ಗಿನ ಮನಸ್ಸು' ಚಿತ್ರಗಳಿಗೆ ಕಾರ್ಯಕಾರಿ ನಿರ್ಮಾಪಕರಾಗಿದ್ದ ಗಂಗಾಧರ್, ಆ ನಂತರ 'ಮುಂಗಾರು ಮಳೆ 2' ಚಿತ್ರವನ್ನು ನಿರ್ಮಿಸಿದ್ದರು. ಈಗ ಪ್ರಶಾಂತ್ ಚಂದ್ರ ನಿರ್ದೇಶನದಲ್ಲಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅರ್ಚನಾ ಜೋಯಿಸ್ ಜತೆಗೆ ತಮಿಳಿನ ಪ್ರಖ್ಯಾತ ನಟ 'ಆಡುಕಲಂ' ನರೇನ್ ಕೂಡಾ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿದ್ದಾರ್ಥ್ ಮಾಧ್ಯಮಿಕ, ತೇಜಸ್ ವೆಂಕಟೇಶ್ ಮುಂತಾದವರು ನಟಿಸಿದ್ದಾರೆ.