

ಚೆನ್ನೈ: ಬಹುಭಾಷಾ ನಟಿ ಅಮಲಾ ಪೌಲ್ ಬಗ್ಗೆ ಕನ್ನಡಿಗರಿಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ನಟ ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಹೆಬ್ಬುಲಿ ಸಿನಿಮಾ ನೋಡಿದವರಿಗೆ ಅಮಲಾ ಪೌಲ್ ಪರಿಚಯ ಇದ್ದೇ ಇರುತ್ತದೆ. ಕೇರಳ ಮೂಲದ ಅಮಲಾ, ನೀಲತಾಮರನ್ ಹೆಸರಿನ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗ ಪದಾರ್ಪಣೆ ಮಾಡಿದರು. ಆದರೆ, ಕಾಲಿವುಡ್ನ “ಮೈನಾ” ಚಿತ್ರದ ಬಳಿಕ ಅಮಲಾ ಅದೃಷ್ಟವೇ ಬದಲಾಯಿತು. ವಿಜಯ್, ವಿಕ್ರಮ್, ಸೂರ್ಯ, ಆರ್ಯ, ಜಯಂ ರವಿ, ಧನುಷ್ ಸೇರಿದಂತೆ ಕಾಲಿವುಡ್ ಸೂಪರ್ಸ್ಟಾರ್ಗಳ ಜೊತೆ ನಟಿಸಿದ್ದಾರೆ.
ಸಿನಿಮಾದಿಂದ ಕೊಂಚ ಬಿಡುವು ಪಡೆದುಕೊಂಡಿರುವ ಅಮಲಾ, ಪ್ರವಾಸಿಗರ ಸ್ವರ್ಗ ಇಂಡೋನೇಷ್ಯಾದ ಬಾಲಿಯಲ್ಲಿ ಬೀಡುಬಿಟ್ಟಿದ್ದಾರೆ. ಬಿಡುವಿನ ಸಮಯವನ್ನು ಅಮಲಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಅಮಲಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು, ವೈರಲ್ ಆಗಿದೆ.
ವಿಡಿಯೋದಲ್ಲಿ ಬಿಕಿನಿ ಉಡುಗೆಯಲ್ಲಿ ಬಾಲಿಯಲ್ಲಿರುವ ಸ್ವಾಭಾವಿಕ ಜಲಪಾತ ಮುಂದಿನ ಗುಡ್ಡವನ್ನು ಏರಿ ಜಿಗಿಯುತ್ತಿರುವ, ಜಲಪಾತದ ಮುಂದೆ ವಿವಿಧ ಭಂಗಿಯಲ್ಲಿ ಪೋಸ್ ನೀಡಿರುವುದು ಮತ್ತು ಉಯ್ಯಾಲೆ ಆಡುತ್ತಿರುವ ದೃಶ್ಯಗಳಿವೆ. ವಿಡಿಯೋಗೆ 2 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ. ಅಮಲಾ ಅವರ ಸೌಂದರ್ಯಕ್ಕೆ ಮರುಳಾಗಿರುವ ಅಭಿಮಾನಿಗಳು ಕಾಮೆಂಟ್ಗಳ ಸುರಿಮಳೆಗೈಯುತ್ತಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ, ಇತ್ತೀಚೆಗಷ್ಟೇ ಅಮಲಾ ಅಭಿನಯದ ಕ್ರಿಸ್ಟೋಫರ್ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಮುಮ್ಮಟ್ಟಿ ಅವರು ನಾಯಕರಾಗಿ ನಟಿಸಿದ್ದಾರೆ. (ಏಜೆನ್ಸೀಸ್)