

ಬೆಂಗಳೂರು: ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ಚಿತ್ರದ ಟೀಸರ್ ಬಿಡುಗಡೆಯಾಗಿ, ಎರಡು ದಿನಗಳ ಅಂತರದಲ್ಲಿ 60 ಮಿಲಿಯನ್ಗೂ ಹೆಚ್ಚು ವೀಕ್ಷಣೆ ಕಂಡಿದೆ. ಟೀಸರ್ ನೋಡಿದವರೆಲ್ಲರೂ ಮೇಕಿಂಗ್, ಗ್ರಾಫಿಕ್ಸ್ ಮತ್ತು ಧ್ರುವ ಸರ್ಜಾ ಬಗ್ಗೆ ಮಾತನಾಡುತ್ತಿದ್ದಾರೆ.
ಈ ಟೀಸರ್ನಲ್ಲಿ ಗಮನಸೆಳೆಯುವ ಇನ್ನೊಂದು ಅಂಶವೆಂದರೆ, ಆ ಇಬ್ಬರು ದೈತ್ಯರು. ಒಂದು ದೃಶ್ಯದಲ್ಲಿ ಇಬ್ಬರು ದೈತ್ಯರ ಜತೆಗೆ ಧ್ರುವ ಸರ್ಜಾ ಹೊಡೆದಾಡುವುದನ್ನು ತೋರಿಸಲಾಗಿದೆ. ಈ ಹೊಡೆದಾಟದಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಚಿತ್ರ ನೋಡಿದ ಮೇಲೆ ಗೊತ್ತಾಗುತ್ತದೆ. ಆದರೆ, ಅದಕ್ಕೂ ಮೊದಲು ಧ್ರುವ ಜತೆಗೆ ಹೊಡೆದಾಡಿದ ಅವರಿಬ್ಬರು ಯಾರು? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಅಂದಹಾಗೆ, 'ಮಾರ್ಟಿನ್'ನಲ್ಲಿ ಧ್ರುವ ಸರ್ಜಾ ಜತೆಗೆ ಫೈಟ್ ಮಾಡಿರುವವರು ನಾಥನ್ ಜೋನ್ಸ್ ಮತ್ತು ರೂಬಿಲ್ ಮೊಸ್ಕ್ಯುರಾ. ಬಾಡಿ ಬಿಲ್ಡಿಂಗ್ ಮತ್ತು ಕುಸ್ತಿಯಲ್ಲಿ ಗುರುತಿಸಿಕೊಂಡಿರುವ ಅವರಿಬ್ಬರೂ ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದರಲ್ಲಿ ನಟಿಸಿರುವುದು ವಿಶೇಷ.
ನಾಥನ್ ಜೋನ್ಸ್ಗೆ ಚಿತ್ರರಂಗ ಹೊಸದೇನಲ್ಲ. ಈಗಾಗಲೇ ಅವರು, 'ದಿ ಪ್ರೊಟೆಕ್ಟರ್', 'ಫಸ್ಟ್ ಸ್ಟ್ರೈಕ್', 'ಮ್ಯಾಡ್ ಮ್ಯಾಕ್ಸ್: ಫ್ಯೂರಿ ರೋಡ್' ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು, ತಮಿಳಿನ 'ಭೂಲೋಕಂ' ಮತ್ತು ಹಿಂದಿಯ 'ದಿ ಫ್ಲೈಯಿಂಗ್ ಜಾಟ್' ಚಿತ್ರಗಳಲ್ಲೂ ಅವರು ನಟಿಸಿದ್ದಾರೆ. ಇನ್ನು, ರೂಬಿಲ್ ಮೂಲತಃ ಕೊಲಂಬಿಯಾ ದೇಶದವರು. ಕತ್ತಿನ ಭಾಗಕ್ಕಾಗಿಯೇ ವಿಶೇಷ ವ್ಯಾಯಾಮ ಮತ್ತು ಲಿಫ್ಟಿಂಗ್ ಮಾಡುವ ಅವರು, ಇದೇ ಮೊದಲ ಬಾರಿಗೆ ಈ ಚಿತ್ರದಲ್ಲಿ ನಟಿಸಿದ್ದಾರೆ.