

ಚೆನ್ನೈ: ಕಾಲಿವುಡ್ನ ಜನಪ್ರಿಯ ಕಾಂಬಿನೇಷನ್ಗಳಲ್ಲೊಂದು ವಿಜಯ್ ಮತ್ತು ನಿರ್ದೇಶಕ ಮುರುಗದಾಸ್ ಅವರ ಜೋಡಿ. ಈ ಜೋಡಿ ಇದುವರೆಗೂ, 'ತುಪಾಕಿ', 'ಕತ್ತಿ' ಮತ್ತು 'ಸರ್ಕಾರ್' ಚಿತ್ರಗಳಲ್ಲಿ ಜತೆಯಾಗಿ ಕೆಲಸ ಮಾಡಿತ್ತು. ಈ ಮೂರೂ ಚಿತ್ರಗಳು ಹಿಟ್ ಆಗುವುದರ ಜತೆಗೆ, ಇಬ್ಬರಿಗೂ ಒಳ್ಳೆಯ ಹೆಸರನ್ನು ಸಹ ತಂದುಕೊಟ್ಟಿತ್ತು.
ಈ ಯಶಸ್ಸಿನ ಹಿನ್ನೆಲೆಯಲ್ಲಿ, ವಿಜಯ್ ಅಭಿನಯದ ಹೊಸ ಚಿತ್ರವೊಂದನ್ನು ನಿರ್ದೇಶಿಸುವುದಾಗಿ ಮುರುಗದಾಸ್ ಘೋಷಿಸಿದ್ದರು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಚಿತ್ರ ಮುಗಿದರಬೇಕಿತ್ತು. ಆದರೆ, ಲಾಕ್ಡೌನ್ನಿಂದಾಗಿ ಚಿತ್ರ ಇದುವರೆಗೂ ಶುರುವಾಗಲೇ ಇಲ್ಲ.
ಈಗ ನೋಡಿದರೆ, ಈ ಚಿತ್ರದಿಂದ, ಮುರುಗದಾಸ್ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು, ವಿಜಯ್ ಆಗಲೀ, ಮುರುಗದಾಸ್ ಆಗಲೀ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡದಿದ್ದರೂ, ವಿಜಯ್ ಚಿತ್ರಕ್ಕೆ ಮುರುಗದಾಸ್ ಗುಡ್ಬೈ ಹೇಳಿದ್ದಾರೆ ಎಂಬ ಸುದ್ದಿಯೊಂದು ಕಾಲಿವುಡ್ನಲ್ಲಿ, ಶುಕ್ರವಾರದಿಂದ ಕೇಳಿ ಬರುತ್ತಲೇ ಇದೆ.
ಮೂರು ಹಿಟ್ ಚಿತ್ರಗಳನ್ನು ಜತೆಯಾಗಿ ನೀಡುವುದರ ಜತೆಗೆ ಒಳ್ಳೆಯ ಸ್ನೇಹಿತರೆಂದು ಗುರುತಿಸಿಕೊಂಡವರು ವಿಜಯ್ ಮತ್ತು ಮುರುಗದಾಸ್. ಇದೀಗ, ವಿಜಯ್ ಅವರ ಅಭಿನಯದ ಚಿತ್ರವೊಂದನ್ನು ಮುರುಗದಾಸ್ ನಿರ್ದೇಶಿಸುವುದಕ್ಕೆ ಹಿಂದೇಟು ಹಾಕುತ್ತಿರುವುದೇಕೆ ಎಂಬ ಪ್ರಶ್ನೆಗೆ ಎರಡು ಅಂತೆ-ಕಂತೆಗಳನ್ನು ಹೇಳಲಾಗುತ್ತಿದೆ.
ಪ್ರಮುಖವಾಗಿ, ವಿಜಯ್ಗೆ ಚಿತ್ರದ ಸೆಕೆಂಡ್ ಹಾಫ್ ಸರಿಬರುತ್ತಿಲ್ಲವಂತೆ. ಮೊದಲಾರ್ಧವನ್ನು ಒಪ್ಪಿರುವ ವಿಜಯ್, ದ್ವಿತೀಯಾರ್ಧವನ್ನು ಸ್ವಲ್ಪ ಬದಲಾಯಿಸಿ ಎಂದು ನಿರ್ದೇಶಕರಿಗೆ ಸಲಹೆ ನೀಡಿದಾಗ, ಅವರು ನೋ ಎಂದು ಸ್ಪಷ್ಟವಾಗಿ ಹೇಳಿದರಂತೆ. ಈ ವಿಷಯವದಲ್ಲಿ ಇಬ್ಬರಿಗೂ ಭಿನ್ನಾಭಿಪ್ರಾಯವಿರುವುದರಿಂದ ಮುರುಗದಾಸ್ ಚಿತ್ರದಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಎರಡನೆಯದಾಗಿ, ಚಿತ್ರದ ಸಂಭಾವನೆ ವಿಚಾರವಾಗಿ ಮುರುಗದಾಸ್ ಮತ್ತು ನಿರ್ಮಾಪಕರ ನಡುವೆ ಭಿನ್ನಾಭಿಪ್ರಾಯವಿದ್ದು, ತಾವು ಕೇಳಿದಷ್ಟು ನಿರ್ಮಾಪಕರು ಕೊಡುತ್ತಿಲ್ಲ ಎಂಬ ಬೇಸರದಿಂದ ಮುರುಗದಾಸ್ ಚಿತ್ರ ನಿರ್ದೇಶಿಸುವುದಕ್ಕೆ ನಿರಾಕರಿಸುತ್ತಿದ್ದಾರೆ ಎಂಬ ಸುದ್ದಿ ಇದೆ. ಇದಕ್ಕೂ ಮುನ್ನ, ಚಿತ್ರದಲ್ಲಿ ನಟಿಸುವುದಕ್ಕೆ ವಿಜಯ್ಗೆ ನೂರು ಕೋಟಿ ಮತ್ತು ನಿರ್ದೇಶನ ಮಾಡುವುದಕ್ಕೆ ಮುರುಗದಾಸ್ಗೆ 30 ಕೋಟಿ ಸಂಭಾವನೆ ಫಿಕ್ಸ್ ಆಗಿತ್ತಂತೆ. ಆದರೆ, ಕೋವಿಡ್ ಕಾರಣದಿಂದಾಗಿ ಚಿತ್ರದ ಬಜೆಟ್ನಲ್ಲಿ ಇಳಿಕೆಯಾಗಿದ್ದು, ವಿಜಯ್ಗೆ 70 ಕೋಟಿ ಮತ್ತು ಮುರುಗದಾಸ್ಗೆ 10 ಕೋಟಿ ಎಂದು ಫಿಕ್ಸ್ ಮಾಡಲಾಗಿದೆಯಂತೆ. ಹೀಗೆ ತಮ್ಮ ಸಂಭಾವನೆಯಲ್ಲಿ ದೊಡ್ಡ ಮಟ್ಟದ ಇಳಿಕೆ ಮಾಡಿದ್ದರಿಂದ ಬೇಸರಗೊಂಡು, ಮುರುಗದಾಸ್ ಇಂಥದ್ದೊಂದು ತೀರ್ಮಾನಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ, ವಿಜಯ್ ಮತ್ತು ಮುರುಗದಾಸ್ ಅವರ ಹೊಸ ಚಿತ್ರದ ಬಗ್ಗೆ ಹಲವು ಗೊಂದಲಗಳಿದ್ದು, ಈ ಗೊಂದಲಗಳು ಯಾವಾಗ ಬಗೆಹರಿಯುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದೆ.