

ಮುಂಬೈ: ಅಂತಾರಾಷ್ಟ್ರೀಯ ಉದ್ಯೋಗ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಸೈಬರ್ ಕ್ರೈಮ್ ಪೊಲೀಸರು ಮುಂಬೈನ ಮಹಿಳೆಯೊಬ್ಬಳನ್ನು ಬಂಧಿಸಿರುವ ಘಟನೆ ನಡೆದಿದೆ.
ಉದ್ಯೋಗ ನೀಡುವ ಆಮಿಷದಲ್ಲಿ ಉದ್ಯೋಗಾಕಾಂಕ್ಷಿಗಳನ್ನು ಕಾಂಬೋಡಿಯಾಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಡಿ ಮುಂಬೈನ ಚೆಂಬೂರ್‌ನ ಪ್ರಿಯಾಂಕಾ ಶಿವಕುಮಾರ್ ಸಿದ್ದು (30) ಎಂಬಾಕೆಯನ್ನು ಬಂಧಿಸಲಾಗಿದೆ. ತೆಲಂಗಾಣ ಸೈಬರ್ ಸೆಕ್ಯುರಿಟಿ ಬ್ಯೂರೋ (ಟಿಜಿಸಿಎಸ್‌ಬಿ) ಪ್ರಕಾರ, ಉದ್ಯೋಗಾಕಾಂಕ್ಷಿಗಳಿಗೆ ಕಠಿಣ ಷರತ್ತುಗಳನ್ನು ವಿಧಿಸುವ ಮೂಲಕ ಉದ್ಯೋಗ ನೀಡುವ ಮೂಲಕ ಭರವಸೆ ನೀಡುತ್ತಿದ್ದಳು ಎಂದು ತಿಳಿಸಿದೆ.
ಪ್ರಿಯಾಂಕ ತನ್ನದೇ ಆದ ಪರವಾನಿಗೆ ರಹಿತ ಏಜೆನ್ಸಿಯನ್ನು ಆರಂಭಿಸಿ ಇದರ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಕಾನೂನುಬದ್ಧ ಉದ್ಯೋಗ ವೀಸಾಗಳ ಭರವಸೆ ನೀಡಿ ದಾರಿ ತಪ್ಪಿಸುತ್ತಿದ್ದರು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ವರದಿಯ ಪ್ರಕಾರ, ಈ ವಂಚನೆ ಜಾಲದಲ್ಲಿ ಜಿತೇಂದ್ರ ಷಾ ಹಾಗೂ ಕಾಂಬೋಡಿಯಾದಲ್ಲಿನ ಚೀನಾ ಮೂಲದ ಕಂಪನಿಯ ನಿರ್ದೇಶಕರಾದ ಅಮೇರ್ ಖಾನ್ ಎಂದು ಕರೆಯಲ್ಪಡುವ ಜಿತೇಂದರ್ ಷಾ ಪ್ರಮುಖ ರುವಾರಿಯಾಗಿದ್ದರು.
ಉದ್ಯೋಗಾವಕಾಶದ ಮಾಹಿತಿಗಾಗಿ ಪ್ರಿಯಾಂಕಾ ಕಾಂಬೋಡಿಯಾಗೆ ಭೇಟಿ ನೀಡಿದ್ದರು ಜತೆಗೆ ಪ್ರತಿ ಒಂದು ಉದ್ಯೋಗದ ಆಫರ್ಗಾಗಿ ಆಕೆಗೆ 42,000 ರೂಪಾಯಿ ಕಮೀಷನ್ ನೀಡಲಾಗುತ್ತಿತ್ತು. ಈಕೆ ವಿರುದ್ಧ ತೆಲಂಗಾಣ ಸೈಬರ್ ಕ್ರೈಂ ಪೊಲೀಸರು ಮಾನವ ಕಳ್ಳಸಾಗಣೆ ಮತ್ತು ಸೈಬರ್ ಕ್ರೈಂ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಿರುವುದಾಗಿ ವರದಿ ತಿಳಿಸಿದೆ.