

ಮುಂಬೈ: ಲಾಕ್ಡೌನ್ ನಿಯಮ ಉಲ್ಲಂಘಿಸಬೇಡಿ ಎಂದು ಹೇಳಿದರೂ ಎಷ್ಟೋ ಜನರು ಇದನ್ನು ಕಿವಿಯ ಮೇಲೆ ಹಾಕಿಕೊಳ್ಳುವುದೇ ಇಲ್ಲ. ಇದು ಎಲ್ಲಾ ರಾಜ್ಯಗಳು, ಎಲ್ಲಾ ದೇಶವಾಸಿಗಳ ಸ್ವಭಾವವೇ.
ದಂಡಂ ದಶಗುಣಂ ಎಂಬಂತೆ ಹಲವು ಕಡೆಗಳಲ್ಲಿ ಪೊಲೀಸರು ನಿಯಮ ಉಲ್ಲಂಘಿಸಿದವರಿಗೆ ದಂಡವನ್ನೂ (ಶಿಕ್ಷೆ) ನೀಡಿಯಾಗಿದೆ. ಆದರೂ ಯಾಕೋ ಹಲವರಿಗೆ ಇದು ಕೂಡ ತಲೆಗೆ ಹೋದಂತಿಲ್ಲ. ಆದ್ದರಿಂದ ದಂಡವನ್ನು ವಸೂಲಿ ಮಾಡಲು ಹಲವು ರಾಜ್ಯಗಳ ಪೊಲೀಸರು ಮುಂದಾಗಿದ್ದಾರೆ.
ಇದಾಗಲೇ ಕರ್ನಾಟಕ ಸೇರಿದಂತೆ ಸಾಮಾನ್ಯವಾಗಿ ಎಲ್ಲಾ ರಾಜ್ಯಗಳಲ್ಲಿಯೂ ಲಾಕ್ಡೌನ್ ನಿಯಮ ಉಲ್ಲಂಘಿಸಿರುವವರಿಂದ ದಂಡವನ್ನು ವಸೂಲಿ ಮಾಡಲಾಗುತ್ತಿದೆ. ಆದರೆ ಅಚ್ಚರಿ ಎಂದರೆ ಮುಂಬೈ ಒಂದರಲ್ಲಿಯೇ ಪೊಲೀಸರು ಇಲ್ಲಿಯವರೆಗೆ ಬರೋಬ್ಬರಿ 9 ಕೋಟಿ ರೂಪಾಯಿಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಿದ್ದಾರೆ!
ಲಾಕ್ಡೌನ್ ನಿಯಮವನ್ನು ಅತ್ಯಂತ ಕಠಿಣ ರೀತಿಯಲ್ಲಿ ಪಾಲಿಸುತ್ತಿರುವ ಮಹಾರಾಷ್ಟ್ರ ಸರ್ಕಾರ, ಯಾರೇ ನಿಯಮ ಉಲ್ಲಂಘಿಸಿದರೂ ಅವರಿಂದ ದಂಡವನ್ನು ವಸೂಲಿ ಮಾಡಲು ಪೊಲೀಸರಿಗೆ ಆದೇಶಿಸಿದೆ.
ವಾಹನ ಸಂಚಾರ ನಿಷೇಧ ಇರುವ ವೇಳೆಗೆ ಈ ನಿಯಮ ತಮಗೆ ಅನ್ವಯ ಆಗುವುದಿಲ್ಲ ಎಂದು ನಿರಾತಂಕವಾಗಿ ಗಾಡಿಯ ಮೇಲೆ ವಾಹನ ಇಳಿಸಿದ ಸವಾರರು ಹಾಗೂ ಅನಾವಶ್ಯಕವಾಗಿ ರೋಡಿಗಿಳಿದಿದ್ದ ಸಾರ್ವಜನಿಕರಿಂದ ಮುಂಬೈ ಪೊಲೀಸರು 9 ಕೋಟಿ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಮಾರ್ಚ್ 20ರಿಂದ ಮೇ 13ರವರೆಗೆ ಲಾಕ್ ಡೌನ್ ನಿಯಮ ಉಲ್ಲಂಘಿಸಿದವರಿಂದ ಚಲನ್ ನೀಡುವ ಮೂಲಕ 9 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಇದನ್ನೂ ಓದಿ: ಕರೊನಾ ಗಲಾಟೆ: ಮೇ 17ರಂದು ಇಂಟರ್ನೆಟ್ ಸೇವೆ ಸ್ಥಗಿತ
ಮಾರ್ಚ್ 23ರಿಂದ ಮೇ 12ರವರೆಗೆ ಮುಂಬೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮುಂಬೈನಲ್ಲಿ 18 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಕೆಲವರು ಲಾಕ್ಡೌನ್ ನಿಯಮ ಉಲ್ಲಂಘಿಸಿ ಎರ್ರಾಬಿರ್ರಿ ಗಾಡಿ ಓಡಿಸಿದವರಾಗಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಹೆಲ್ಮೆಟ್ ಧರಿಸದ ಸುಮಾರು 73,735 ಬೈಕ್ ಸವಾರರಿಗೆ, ಸಾರ್ವಜನಿಕ ನಿಯಮ ಉಲ್ಲಂಘಿಸಿದ 36,248, ಪೊಲೀಸರು ಕೇಳಿದ ದಾಖಲೆ ನೀಡದ 11,611, ಚಾಲನಾ ಪರವಾನಗಿ ಇಲ್ಲದ 6,354 ಜನರಿಂದ ದಂಡ ವಸೂಲಿ ಮಾಡಲಾಗಿದೆ ಎಂದಿದ್ದಾರೆ ಪೊಲೀಸರು.
ಇದರಿಂದ ಮುಂಬೈನ ನಿಯಮ ಉಲ್ಲಂಘನೆ ಮಾಡುವವರ ಎದೆಯಲ್ಲಿ ಡವಡವ ಶುರುವಾಗಿದ್ದು, ಆದಷ್ಟು ನಿಯಮ ಪಾಲನೆ ಮಾಡಲು ಮುಂದಾಗಿದ್ದಾರೆ.
ಕರ್ನಾಟಕದಲ್ಲಿಯೂ ಕಳೆದ ತಿಂಗಳೊಂದರಲ್ಲಿಯೇ 50 ಲಕ್ಷಕ್ಕೂ ಅಧಿಕ ದಂಡ ವಸೂಲಿಯಾಗಿದೆ. ಇಲ್ಲಿಯೂ ಮುಂಬೈನಂಥ ಕಟ್ಟುನಿಟ್ಟಿನ ನಿಯಮ ಜಾರಿಗೆ ಬರುವ ಮುನ್ನ ಎಚ್ಚೆತ್ತುಕೊಳ್ಳಿ ಎನ್ನುತ್ತಿದ್ದಾರೆ ಪೊಲೀಸರು. (ಏಜೆನ್ಸೀಸ್)