ಕರೊನಾ ಸಂಕಷ್ಟ- ಒಂದು ವರ್ಷ ಶೇ.30ರಷ್ಟು ಸಂಬಳ ಬಿಡಲಿದ್ದಾರೆ ರಾಷ್ಟ್ರಪತಿ: ಇತರ ಖರ್ಚುವೆಚ್ಚಕ್ಕೂ ಬ್ರೇಕ್​

kovindweb
Published on

ನವದೆಹಲಿ: ಕರೊನಾ ಸಂಕಷ್ಟದ ಈ ದಿನಗಳಲ್ಲಿ ನಿರುದ್ಯೋಗ ಸಮಸ್ಯೆ, ಉದ್ಯೋಗದಲ್ಲಿ ಕಡಿತ, ಸಂಬಳದಲ್ಲಿ ಕಡಿತ ಇವೆಲ್ಲವೂ ಮಾಮೂಲಾಗಿಬಿಟ್ಟಿವೆ. ಎಲ್ಲೆಡೆಯೂ ಸಂಕಷ್ಟದ ಸ್ಥಿತಿ ಇರುವಾಗ ಇದು ಅನಿವಾರ್ಯ ಕೂಡ ಎನಿಸಿಬಿಟ್ಟಿದೆ.

ಇಂಥ ಬಿಕ್ಕಟ್ಟು ಪರಿಸ್ಥಿತಿಯಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಒಂದು ದಿಟ್ಟ ಹೆಜ್ಜೆಯನ್ನಿಟ್ಟಿದ್ದು, ತಮ್ಮ ಸಂಬಳದ ಶೇ.30ರಷ್ಟು ಹಣವನ್ನು ಅವರು ತ್ಯಜಿಸಲು ನಿರ್ಧರಿಸಿದ್ದಾರೆ. ಅದೂ ಒಂದು ವರ್ಷದವರೆಗೆ ತಮ್ಮ ಸಂಬಳದಿಂದ ಶೇ.30ರಷ್ಟು ಹಣವನ್ನು ಬಿಟ್ಟುಕೊಡಲಿದ್ದು, ಇದನ್ನು ಪಿಎಂ ಕೇರ್‌ ಫಂಡ್‌ಗೆ ದೇಣಿಗೆ ನೀಡಲಾಗುವುದು. ಈ ಕುರಿತು ರಾಷ್ಟ್ರಪತಿ ಕಾರ್ಯಾಲಯದ ಟ್ವಿಟರ್​ನಲ್ಲಿ ಮಾಹಿತಿ ನೀಡಲಾಗಿದೆ.

ಇಷ್ಟೇ ಅಲ್ಲದೇ, ರಾಷ್ಟ್ರಪತಿ ಭವನದ ಖರ್ಚು ವೆಚ್ಚಗಳಲ್ಲೂ ಗಣನೀಯ ನಿಯಂತ್ರಣವನ್ನು ತರಲು ಕೋವಿಂದ್​ ಅವರು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದ ಬಜೆಟ್‌ನಲ್ಲಿ ಸುಮಾರು ಶೇಕಡಾ 20ರಷ್ಟು ಉಳಿತಾಯ ಆಗಬಹುದು ಎಂದು ಅಂದಾಜಿಸಲಾಗಿದೆ.

ಕೋವಿಂದ್​ ಅವರು ಇಂಥ ನಿರ್ಧಾರ ತೆಗೆದುಕೊಂಡಿದ್ದು ಇದೇ ಮೊದಲಲ್ಲ. ಕರೊನಾ ಭಾರತದಲ್ಲಿ ಕಾಲಿಟ್ಟು ಇಡೀ ದೇಶದಲ್ಲಿ ಆತಂಕ ಸೃಷ್ಟಿಯಾಗಿದ್ದ ಸಂದರ್ಭದಲ್ಲಿ ಅಂದರೆ ಮಾರ್ಚ್​ ತಿಂಗಳಿನಲ್ಲಿ ಪಿಎಂ ಕೇರ್ಸ್ ನಿಧಿಗೆ ಒಂದು ತಿಂಗಳ ಸಂಬಳವನ್ನು ದೇಣಿಗೆಯಾಗಿ ನೀಡಿದ್ದರು. ಇದೀಗ ಒಂದು ವರ್ಷದ ಸಂಬಳವನ್ನು ಭಾಗಶಃ ಪಡೆಯಲು ನಿರ್ಧರಿಸುವ ಮೂಲಕ ಕರೊನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿದ್ದಾರೆ.

ಸಾಮಾಜಿಕ ಅಂತರವನ್ನು ಪಾಲಿಸುವ ಹಾಗೂ ಖರ್ಚು ವೆಚ್ಚಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ದೇಶೀಯ ಪ್ರವಾಸ ಹಾಗೂ ಕಾರ್ಯಕ್ರಮಗಳಲ್ಲಿ ಗಣನೀಯವಾಗಿ ಇಳಿಕೆ ತರಲು ಯೋಚನೆ ರೂಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ತಂತ್ರಜ್ಞಾನದ ಮೊರೆ ಹೋಗಿ ಕುಳಿತ ಸ್ಥಳದಿಂದಲೇ ಹೆಚ್ಚೆಚ್ಚು ಕಾರ್ಯ ನಿರ್ವಹಿಸಲು ಯೋಜನೆ ರೂಪಿಸಲಾಗುತ್ತಿದೆ.

ಇದರ ಅಂಗವಾಗಿ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭಕ್ಕೂ ಹೆಚ್ಚಿನ ನಿಯಂತ್ರಣ ತರಲಾಗುವುದು, ಇಂಧನ ಹಾಗೂ ವಿದ್ಯುತ್ ಉಳಿಸಲು ಪ್ರಯತ್ನಿಸಲಾಗುವುದು. ರಾಷ್ಟ್ರಪತಿ ಭವನದಲ್ಲಿ ದುರಸ್ತಿ ಹಾಗೂ ನಿರ್ವಹಣಾ ಕಾರ್ಯಗಳನ್ನು ಕಡಿಮೆಗೊಳಿಸಲಾಗುವುದು ಎಂದು ಮೂಲಗಳು ಹೇಳಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net