ಸರ್ಕಾರದ ವಿರುದ್ಧ ಮಾತನಾಡಿದರೆ ಕಠಿಣ ಶಿಕ್ಷೆ : ಹೊರಟಿದೆ ಹೊಸ ಆದೇಶ

Uddhava
Published on

ಮುಂಬೈ: ಮುಂಬೈನಲ್ಲಿ ಇದಾಗಲೇ ಹಲವಾರು ನಿಷೇಧಗಳು ಮೂರು ದಶಕಗಳಿಂದ ಜಾರಿಯಲ್ಲಿದ್ದು, ಅದಕ್ಕೆ ಇನ್ನೊಂದು ನಿಷೇಧ ಸೇರ್ಪಡೆಯಾಗಿದೆ. ಅದೇನೆಂದರೆ ಯಾರೇ ಆಗಲಿ ಮಹಾರಾಷ್ಟ್ರ ಸರ್ಕಾರವನ್ನು ಇನ್ನು ಮುಂದೆ ಟೀಕಿಸುವಂತಿಲ್ಲ!

ಹೌದು. ಇಂಥದ್ದೊಂದು ಆದೇಶ ಹೊರಬಿದ್ದಿದ್ದು, ಇದೀಗ ಭಾರಿ ಟೀಕೆಗೆ ಒಳಗಾಗಿದೆ. ರಾಜ್ಯ ಸರ್ಕಾರದ ಕಾರ್ಯವೈಖರಿಯ ವಿರುದ್ಧ ಮಾತನಾಡುವ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಆದೇಶ ಇದಾಗಿದೆ.

ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಪ್ರಸಾರ, ಆಕ್ಷೇಪಾರ್ಹ ವಿಷಯಗಳನ್ನು ಶೇರ್​ ಮಾಡುವುದು ಸೇರಿದಂತೆ ಸರ್ಕಾರದ ವಿರುದ್ಧ ಏನೇನು ನಡೆಯುತ್ತಿವೆಯೋ ಅವುಗಳ ಪಟ್ಟಿಯನ್ನು ಮುಂಬೈ ಪೊಲೀಸರು ಪಟ್ಟಿ ಮಾಡಿದ್ದಾರೆ. ಆ ಕುರಿತ ವರದಿಯನ್ನು ಉಪ ಆಯುಕ್ತ ಪ್ರಾಣಾಯ ಅಶೋಕ್ ಅವರು ಬಿಡುಗಡೆ ಮಾಡಿದ್ದಾರೆ. ಇನ್ನು ಮುಂದೆ ಇಂಥ ಯಾವುದೇ ಅಪಪ್ರಚಾರ ನಡೆದರೆ ಅಥವಾ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿಯೂ ದನಿ ಎತ್ತಿದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ತಪ್ಪಿತಸ್ಥರ ವಿರುದ್ಧ ಭಾರತೀಯ ದಂಡ ಸಂಹಿತೆಯ 188ನೇ ಕಲಮಿನ ಅಡಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ (ಸಾರ್ವಜನಿಕ ಸೇವೆಯಲ್ಲಿ ಇರುವವರ ವಿರುದ್ಧ ಕೆಟ್ಟದಾಗಿ ಮಾತನಾಡುವುದು- ಇಂಥವರಿಗೆ ಆರು ತಿಂಗಳವರೆಗೆ ಶಿಕ್ಷೆ, ಒಂದು ಸಾವಿರ ರೂಪಾಯಿ ದಂಡ ಇದೆ).

ಕರೊನಾ ವೈರಸ್​ ಬಿಕ್ಕಟ್ಟಿನ ಈ ದಿನಗಳಲ್ಲಿ ಇಂಥ ಸುಳ್ಳು ಪ್ರಚಾರದಿಂದ ಸಮಸ್ಯೆ ಉಂಟಾಗುವ ನಿಟ್ಟಿನಲ್ಲಿ ಇಂಥದ್ದೊಂದು ಆದೇಶ ಹೊರಡಿಸಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ಮೇ 25ರಿಂದ ಜೂನ್​ 8ರವರೆಗೆ ಸದ್ಯ ಈ ಅದೇಶ ಸೇರಿದಂತೆ ಈಗಾಗಲೇ ಹೊರಡಿಸಿರುವ ನಿಯಮಾವಳಿಗಳು ಚಾಲ್ತಿಯಲ್ಲಿ ಇರುತ್ತದೆ. ಇದನ್ನು ಯಾರೇ ಆದರೂ ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗಿದೆ.

ಇಂಥ ನಿಷೇಧಿತ ಆದೇಶಗಳು ಮುಂಬೈನಲ್ಲಿ ಹೊಸತಲ್ಲ. 1992-93ರಿಂದಲೂ ಒಂದಲ್ಲೊಂದು ಈ ರೀತಿಯ ಆದೇಶಗಳು ಹೊರಡುತ್ತಲೇ ಇವೆ. ಹೈಕೋರ್ಟ್​, ಸುಪ್ರೀಂಕೋರ್ಟ್​ ಸೇರಿದಂತೆ ಹಲವು ಕಡೆಗಳಲ್ಲಿ ಕೆಲವು ಆದೇಶಗಳು ಟೀಕೆಗೆ ಒಳಗಾಗುತ್ತಿದ್ದರೂ ಇಂಥ ಆದೇಶಗಳು ಮಾತ್ರ ನಿಂತಿಲ್ಲ.

ಇದೀಗ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿವೆ. ಬಿಜೆಪಿ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಸೇರಿದಂತೆ ವಿವಿಧ ಪಕ್ಷಗಳು ಠಾಕ್ರೆ ಅವರ ರಾಜೀನಾಮೆಗೆ ಒತ್ತಾಯಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net