ಒಂದು ಹುಟ್ಟುಹಬ್ಬದಿಂದ ಇಡೀ ಗ್ರಾಮವಾಯ್ತು ಸೀಲ್​ಡೌನ್​- ಆದದ್ದಾದರೂ ಏನು?

birthday_web
Published on

ಇಂದೋರ್: ಕರೊನಾ ವೈರಸ್​ ತೀವ್ರವಾಗಿ ಹರಡುತ್ತಿರುವ ಈ ಸಮಯದಲ್ಲಿ ಸಭೆ ಸಮಾರಂಭಗಳನ್ನು ಮಾಡಬೇಡಿ, ಒಟ್ಟಿಗೇ ಸೇರಬೇಡಿ ಎಂದೆಲ್ಲಾ ಸಾರಿ ಸಾರಿ ಹೇಳುತ್ತಿದ್ದರೂ ತಮಗೇನು ಆಗುವುದೇ ಇಲ್ಲ ಎಂದುಕೊಂಡು ಕಾರ್ಯಕ್ರಮ ಮಾಡುವವರೇ ಹೆಚ್ಚು.

ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಿಗೆ ಅಥವಾ ಒಂದೆಡೆ ಗುಂಪುಗುಂಪಾಗಿ ಸೇರುವವರಿಗೆ ಕರೊನಾ ಸೋಂಕು ಹರಡುತ್ತಿರುವುದು ಇತ್ತೀಚೆಗೆ ಮಾಮೂಲಾಗಿಬಿಟ್ಟಿದೆ. ಅಂಥದ್ದೇ ಒಂದು ಎಡವಟ್ಟು ಹುಟ್ಟುಹಬ್ಬದ ಪಾರ್ಟಿಯಲ್ಲಿ ನಡೆದಿದೆ.

ಇದು ನಡೆದಿರುವುದು ಇಂದೋರ್​ನಲ್ಲಿ. ಹುಟ್ಟುಹಬ್ಬಕ್ಕೆ ಬಂದವರಲ್ಲಿ 19 ಮಂದಿ ಕರೊನಾ ಸೋಂಕು ಅಂಟಿಸಿಕೊಂಡರೆ, ಒಬ್ಬ ಮಹಿಳೆ ಮೃತಪಟ್ಟಿದ್ದಾರೆ!

ಸುಮಾರು 10 ದಿನಗಳ ಹಿಂದೆ ಬಡೋದಿಯಾ ಖಾನ್ ಗ್ರಾಮದಲ್ಲಿ ಮಗುವೊಂದರ ಹುಟ್ಟುಹಬ್ಬದ ಪಾರ್ಟಿ ನಡೆದಿತ್ತು. ಅದರಲ್ಲಿ ಹಲವು ಮಂದಿ ಪಾಲ್ಗೊಂಡಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಕೂಡ ಈ ಕಾರ್ಯಕ್ರಮಕ್ಕೆ ಬಂದಿದ್ದರು. ಹುಟ್ಟುಹಬ್ಬಕ್ಕೆ ಪಾಲ್ಗೊಳ್ಳುವ ಸಲುವಾಗಿಯೇ ಇವರನ್ನು ಬೇರೆ ಊರಿನಿಂದ 15 ದಿನ ಮುಂಚಿತವಾಗಿ ಇಂದೋರ್​ಗೆ ಕುಟುಂಬದವರು ಕರೆತಂದಿದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಹಿಳೆಯ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿತು. ನಂತರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ವೈದ್ಯರು ಪರೀಕ್ಷೆ ಮಾಡಿದಾಗ ಕರೊನಾ ಪಾಸಿಟಿವ್​ ರಿಪೋರ್ಟ್​ ಬಂದಿದೆ. ಎರಡು ದಿನಗಳಲ್ಲಿಯೇ ಮಹಿಳೆ ಮೃತಪಟ್ಟರು.

ನಂತರ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದ ಜನರನ್ನು ಹುಡುಕಾಟುವ ಕಾರ್ಯ ಆರಂಭವಾದ ವೇಳೆ ಬರ್ತ್ ಡೇ ಪಾರ್ಟಿ ನಡೆದಿರುವ ವಿಚಾರ ಬಹಿರಂಗಗೊಂಡಿದೆ. . ಲಾಕ್'ಡೌನ್ ಇರುವಾಗಲೇ ಕಾರ್ಯಕ್ರಮವನ್ನು ನಡೆಸಲಾಗಿದ್ದು, ಸುಮಾರು 60ಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ವಿಷಯ ಆರೋಗ್ಯ ಸಿಬ್ಬಂದಿಗೆ ತಿಳಿಯಿತು. ಮೃತಪಟ್ಟಿರುವ ಮಹಿಳೆ ಕೂಡ ಭಾಗಿಯಾಗಿರುವುದ ತಿಳಿಯುತ್ತಲೇ ಎಲ್ಲರ ಬೆನ್ನತ್ತಿ ಹೋದರು. ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದಾಗ 19 ಮಂದಿಯಲ್ಲಿ ಕೊರೋನಾ ದೃಢಪಟ್ಟಿದೆ.

ಸುಮಾರು 2000 ಜನಸಂಖ್ಯೆಯನ್ನು ಹೊಂದಿರುವ ಬಡೋದಿಯಾ ಗ್ರಾಮವನ್ನು ಇದೀಗ ಸೀಲ್ ಡೌನ್ ಮಾಡಲಾಗಿದ್ದು, ಕಂಟೈನ್​ಮೆಂಟ್​ ಝೋನ್ (ನಿಷೇಧಿತ ಪ್ರದೇಶ) ಎಂದು ಘೋಷಣೆ ಮಾಡಲಾಗಿದೆ.ಕಾರ್ಯಕ್ರಮ ಆಯೋಜಿಸಿದ್ದ ಮೂವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಕಾರ್ಯಕ್ರಮ ಆಯೋಜಿಸಿದ್ದ ಮಗುವಿನ ಕುಟುಂಬದವರಲ್ಲಿಯೂ ಕರೊನಾ ದೃಢಪಟ್ಟಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇಂದೋರ್ ಜಿಲ್ಲೆಯ ಗಡಿಯಲ್ಲೂ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net