FACT CHECK: ಮುನ್ನೂರು ಮುಸ್ಲಿಮರ ಮನೆಗಳ ಸುಟ್ಟಿದ್ಯಾರು? ಇಲ್ಲಿದೆ ನೋಡಿ ಅಸಲಿಯತ್ತು!

fact_web
Published on

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ 300ಕ್ಕೂ ಅಧಿಕ ಮುಸ್ಲಿಮರ ಮನೆಗಳನ್ನು ಹಿಂದೂ ಸಮುದಾಯದವರು ಸುಟ್ಟುಹಾಕಿರುವುದಾಗಿ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹರಿದಾಡುತ್ತಿದೆ. ಮಕ್ಕಳು ಮತ್ತು ಮಹಿಳೆಯರು ತಮ್ಮ ಮನೆಯ ಸಾಮಗ್ರಿಗಳನ್ನು ಹಿಡಿದುಕೊಂಡು ರಸ್ತೆಯ ಬದಿ ಅಳುತ್ತಿರುವ ದೃಶ್ಯ ಈ ವೀಡಿಯೋದಲ್ಲಿದೆ!

ಇದಾಗಲೇ ಸಾವಿರಾರು ಶೇರ್​ಗಳನ್ನು ಕಂಡಿರುವ ಈ ವೀಡಿಯೋ ನೋಡಿದವರೆಲ್ಲಾ ಹಿಂದೂಗಳನ್ನು ವಾಚಾಮಗೋಚರವಾಗಿ ಬೈದು ಕಮೆಂಟ್​ಗಳನ್ನು ಹಾಕುತ್ತಿದ್ದಾರೆ.

ಆದರೆ ಅಮ್ಜದ್​ ಅನ್ಸಾರಿ ಎಂಬಾತ ತನ್ನ ಫೇಸ್​ಬುಕ್​ ಪುಟದಲ್ಲಿ ಈ ವೀಡಿಯೋ ಹಂಚಿಕೊಂಡಿದ್ದಾನೆ. ತನ್ನ ಫೇಸ್​ಬುಕ್​ನಲ್ಲಿ ಈತ, ಪಶ್ಚಿಮ ಬಂಗಾಳದ ಗಲಭೆಯ ಸಂದರ್ಭದಲ್ಲಿ 300 ಮುಸ್ಲಿಂ ಮನೆಗಳನ್ನು ಹಿಂದೂಗಳು ಸುಟ್ಟುಹಾಕಿದ್ದಾರೆ ಎಂದು ಬರೆದುಕೊಂಡಿದ್ದಾನೆ!

ಹಿಂದೂಗಳು ಹೀಗೆ ಮುಸ್ಲಿಂ ಮನೆಗಳನ್ನು ಸುಟ್ಟುಹಾಕಿರುವುದು ತುಂಬಾ ದುಃಖದ ವಿಷಯ, ಸಮಾಜ ವಿರೋಧಿ ವ್ಯಕ್ತಿಗಳು ಪಶ್ಚಿಮ ಬಂಗಾಳದ 300 ಮುಸ್ಲಿಂ ಮನೆಗಳನ್ನು ಸುಟ್ಟು ಬೂದಿ ಮಾಡಿವೆ. ತೆಲಿನಿಪರಾ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 7 ಗಂಟೆಗೆ ಇದು ಸಂಭವಿಸಿದೆ. ಹಿಂದೂ-ಮುಸ್ಲಿಂ ದ್ವೇಷದಿಂದ ಭಾರತ ಉರಿಯುತ್ತಿದೆ. ಇದು ಇನ್ನೂ ಎಷ್ಟು ದಿನ ಮುಂದುವರಿಯುತ್ತದೆ?'' ಎಂಬ ಬರಹದೊಂದಿಗೆ ವೀಡಿಯೋ ಅಪ್​ಲೋಡ್​ ಮಾಡಲಾಗಿದೆ.

ಇದರ ಜತೆಗೆ #Islamophobia_In_India, #Islamophobia ಮತ್ತು #StopTargetingMuslim ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಹಾಕಲಾಗಿದೆ.

ಎಂಡಿ ತಬ್ರೆಜ್ ಆಲಮ್ ಎಂಬಾತ ಇದನ್ನು ತನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ಇದಾಗಲೇ ಹಲವಾರು ಮಂದಿ ಇದನ್ನು ಶೇರ್​ ಮಾಡಿದ್ದಾರೆ!

ಆದರೆ ಇದರ ನಿಜಾಂಶವೇ ಬೇರೆಯದ್ದಾಗಿದೆ. ಈ ವೀಡಿಯೋ ಪಶ್ಚಿಮ ಬಂಗಾಳದ್ದೂ ಅಲ್ಲ. ಮುಸ್ಲಿಮರ ಮನೆಯನ್ನು ಹಿಂದೂಗಳು ಸುಟ್ಟಿದ್ದೂ ಅಲ್ಲ. ಬದಲಿಗೆ ಈ ವೀಡಿಯೋ ಬಾಂಗ್ಲಾದೇಶದ್ದು. ಅಲ್ಲಿನ ರೋಹಿಂಗ್ಯಾ ನಿರಾಶ್ರಿತರ ಶಿಬಿರದಲ್ಲಿನ 312 ಮನೆಗಳು 2020 ರ ಮೇ 12 ರಂದು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.

ಆದರೆ ಹಿಂದೂ-ಮುಸ್ಲಿಮರ ನಡುವೆ ಕೋಮುದ್ವೇಷ ಹರಡುವಂತೆ ಈ ವೀಡಿಯೋ ಹರಿಬಿಡಲಾಗಿದೆ! (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net