

ಬೆಂಗಳೂರು: ಭಾರತೀಯ ಜನಸಂಘದ ಸ್ಥಾಪಕ ಡಾ. ಶ್ಯಾಮಪ್ರಸಾದ್ ಮುಖರ್ಜಿ ಕನಸನ್ನು ಪ್ರಧಾನಿ ನರೇಂದ್ರ ಮೋದಿ ನನಸಾಗಿಸಿದ್ದಾರೆ. ರಾಷ್ಟ್ರೀಯವಾದಿ ಭಾರತೀಯರಿಗೆ ಹೆಮ್ಮೆಯ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅಭಿಪ್ರಾಯ ವ್ಯಕ್ತಪಡಿಸಿದರು.
ಡಾ. ಶ್ಯಾಮಪ್ರಸಾದ್ ಮುಖರ್ಜಿ ಜನ್ಮದಿನ ಪ್ರಯುಕ್ತ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಯಡಿಯೂರಪ್ಪ ಗೌರವ ಸಲ್ಲಿಸಿದರು.
ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಶ್ಯಾಮಪ್ರಸಾದ್ ಮುಖರ್ಜಿ ಅವರ ಜೀವನವೇ ಒಂದು ಸಂದೇಶ. ಅವರ ಚಿಂತನೆಗಳಿಂದ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತ ಧೈರ್ಯವಂತರಾಗಿ ದೇಶ ಮೊದಲು ಎಂಬ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ ಎಂದು ತಿಳಿಸಿದರು.
ದೇಶದ ಏಕತೆ, ಸಮಗ್ರತೆ, ಸಾಂಸ್ಕತಿಕ ಹಿರಿಮೆಗಾಗಿ ಡಾ. ಮುಖರ್ಜಿ ಜೀವನವನ್ನೇ ಮುಡಿಪಾಗಿಟ್ಟ ಶ್ರೇಷ್ಠ ರಾಷ್ಟ್ರೀಯ ನಾಯಕ. ಬಿಜೆಪಿಗೆ ಸೈದ್ಧಾಂತಿಕ ಅಡಿಪಾಯ ಹಾಕಿದವರು. 370ನೇ ವಿಧಿಯನ್ನು ವಿರೋಧಿಸಿ ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಂದಿಗೆ ಸಂಪೂರ್ಣವಾಗಿ ಒಗ್ಗೂಡಿಸಲು ಗಟ್ಟಿಯಾಗಿ ನಿಂತು, ಪ್ರಾಣವನ್ನೇ ಸಮರ್ಪಿಸಿದ ಧೀಮಂತ ನಾಯಕ.
ಈ ನೆಲದ ಸಾಂಸ್ಕತಿಕ ಮೌಲ್ಯಗಳನ್ನು ಎತ್ತಿಹಿಡಿದವರು, ತುಷ್ಟೀಕರಣದ ವಿರುದ್ಧ ಮಾತನಾಡುವ, ಎಲ್ಲದಕ್ಕಿಂತ ಹೆಚ್ಚಾಗಿ ರಾಷ್ಟ್ರೀಯ ಹಿತಾಸಕ್ತಿಗಾಗಿ ಧ್ವನಿ ಎತ್ತುವ ಧೈರ್ಯ ಹೊಂದಿದವರು ಎಂದು ಯಡಿಯೂರಪ್ಪ ಸ್ಮರಿಸಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಶ್ಯಾಮಪ್ರಸಾದ್ ಮುಖರ್ಜಿ ಕ್ವಿಟ್ ಇಂಡಿಯ ಚಳವಳಿಯ ರುವಾರಿಯಾಗಿದ್ದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ಆದರೆ, ಕಾಂಗ್ರೆಸ್ಸಿನವರು, ಆರ್‌ಎಸ್‌ಎಸ್ ಮತ್ತು ಬಿಜೆಪಿಯವರು ಸ್ವಾತಂತ್ರ್ಯಕ್ಕೆ ಕೆಲಸ ಮಾಡಿಲ್ಲ. ಸತ್ತಿಲ್ಲ ಎನ್ನುತ್ತಾರೆ.
ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ವಿಪಕ್ಷ ನಾಯಕ