

ನವದೆಹಲಿ: ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಹೆಸರಾಗಿರುವ ಉದ್ಯಮಿ ಮುಖೇಶ್ ಅಂಬಾನಿ. ವಿದೇಶದಲ್ಲಿ ಐಷಾರಾಮಿ ಮನೆಗಳನ್ನು ಹೊಂದಿರುವ ಮುಖೇಶ್ ಅಂಬಾನಿ ಐಷಾರಾಮಿ ಮನೆಯೊಂದನ್ನು ಮಾರಾಟ ಮಾಡಿದ್ದಾರೆ. ಈ ಮಾರಾಟದ ಮೂಲಕ ಮನೆಯ ಬೆಲೆ ಮತ್ತು ಮನೆಯ ವಿಶಿಷ್ಟತೆ ಮತ್ತೊಮ್ಮೆ ವೈರಲ್ ಆಗಿದೆ.
ನ್ಯೂಯಾರ್ಕ್‌ನ ಮ್ಯಾನ್‌ಹ್ಯಾಟನ್‌ನಲ್ಲಿ ಅಂಬಾನಿ ಐಷಾರಾಮಿ ಅಪಾರ್ಟ್‌ಮೆಂಟ್ ಹೊಂದಿದ್ದಾರೆ. ಈ ಮನೆಯನ್ನು ಮುಕೇಶ್ ಅಂಬಾನಿ ಮಾರಾಟ ಮಾಡಿದ್ದಾರೆ. ಮ್ಯಾನ್‌ಹ್ಯಾಟನ್‌ನ ವೆಸ್ಟ್ ವಿಲೇಜ್‌ನಲ್ಲಿರುವ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಲ್ಲಿರುವ 2,406 ಚದರ ಅಡಿಯ ಐಷಾರಾಮಿ ಮನೆಯನ್ನು ಅಂಬಾನಿ $9 ಮಿಲಿಯನ್‌ಗೆ ಮಾರಾಟ ಮಾಡಿದ್ದಾರೆ. ಇದರ ಬೆಲೆ ಭಾರತೀಯ ಕರೆನ್ಸಿಯಲ್ಲಿ ರೂ.74.53 ಕೋಟಿ. ಅಂಬಾನಿ ಮಾರಾಟ ಮಾಡಿದ ಮನೆಯನ್ನು ಸುಪೀರಿಯರ್ ಇಂಕ್ ಫ್ಯಾಕ್ಟರಿ ಎಂದೂ ಕರೆಯಲಾಗುತ್ತಿತ್ತು.
ಸುಪೀರಿಯರ್ ಇಂಕ್ ಎಂದು ಕರೆಯಲ್ಪಡುವ ಈ ಬೃಹತ್ ಕಟ್ಟಡ 17 ಅಂತಸ್ತನ್ನು ಹೊಂದಿದ್ದು, ಇದು 1919 ರಷ್ಟು ಹಳೆಯದಾಗಿದ್ದು, ಕಾಲಾತೀತವಾದ ವಾಸ್ತುಶಿಲ್ಪದ ವಿನ್ಯಾಸಕ್ಕೆ ಸಾಕ್ಷಿಯಾಗಿದೆ. ಕಟ್ಟಡವನ್ನು 2009 ರಲ್ಲಿ ಮರು ವಿನ್ಯಾಸಗೊಳಿಸಲಾಗಿದ್ದು, ಇದನ್ನು ವಾಸ್ತುಶಿಲ್ಪಿಗಳಾದ ರಾಬರ್ಟ್ ಎ.ಎಮ್. ಸ್ಟರ್ನ್ ಇಂಟಿರಿಯರ್ ಡಿಸೈನರ್ ಆದ ಯಾಬು ಪುಶೆಲ್‌ಬರ್ಗ್ ಅವರಿಂದ ವಿನ್ಯಾಸಗೊಳಿಸಲ್ಪಟ್ಟಿದೆ.
ಈ ಬಂಗ್ಲೆಯ ವೈಶಿಷ್ಟ್ಯ: ಈ ಬಂಗಲೆಯಿಂದ ನಿಂತು ನೋಡಿದರೆ ಹಡ್ಸನ್ ನದಿಯ ಮನಮೋಹಕ ನೋಟ ಇಲ್ಲಿ ಕಾಣಿಸುತ್ತದೆ. ಅಲ್ಲದೇ ಈ ಮನೆಯ ಇಂಟಿರಿಯರ್ ಡಿಸೈನ್ ಕೂಡ ತುಂಬಾ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಹೆರಿಂಗ್‌ಬೋನ್ ಮಾದರಿಯ ಗಟ್ಟಿಮರದ ಮಹಡಿಗಳು ಅತ್ಯಾಧುನಿಕತೆಯ ಜೊತೆ ಮನೆಗೆ ಪಾರಂಪರಿಕ ಟಚ್ ನೀಡುತ್ತಿವೆ. ಇಷ್ಟೇ ಅಲ್ಲದೇ ಶಬ್ಧ ನಿರೋಧಕವಾದ ಕಿಟಕಿಗಳಿವೆ.
ಈ ಮನೆಯಲ್ಲಿ ಮೂರು ಮಲಗುವ ಕೋಣೆಗಳು, ಮಕ್ಕಳಿಗಾಗಿ ಆಟದ ಕೋಣೆ, ಯೋಗ ಕೊಠಡಿ, ವಿಶಾಲವಾದ ವಿಶ್ರಾಂತಿ ಕೋಣೆ, ವ್ಯಾಲೆಟ್ ಪಾರ್ಕಿಂಗ್ ಮುಂತಾದ ಅತ್ಯಾಧುನಿಕ ಸೌಲಭ್ಯಗಳಿವೆ. ಇಂತಹ ವೈಭೋಗವನ್ನು ಹೊಂದಿದ್ದ ಮನೆಯನ್ನು ಮುಖೇಶ್ ಅಂಬಾನಿ ಮಾರಾಟ ಮಾಡಿದ್ದಾರೆ. ಆದರೆ ಯಾರು ಇದನ್ನು ಖರೀದಿಸಿದ್ದಾರೆ ಎಂಬ ವಿವರವಿಲ್ಲ.