ಸದ್ಯದಲ್ಲೇ ದೇಶ ಮಾತ್ರವಲ್ಲ, ವಿದೇಶದಲ್ಲೂ ಕಾಫಿ ಬೆಲೆ ಏರಿಕೆ ಸಂಭವ; ಇದೇ ನೋಡಿ ಕಾರಣ

coffee
Published on

ಬೆಂಗಳೂರು: ಇತ್ತೀಚಿನವರೆಗೂ ಟೊಮ್ಯಾಟೊ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಒಂದು ಕೆಜಿ ಟೊಮ್ಯಾಟೊಗೆ 260 ರೂ. ದಾಖಲಾಗಿದೆ. ಟೊಮ್ಯಾಟೊ ಬೆಲೆ ಜನಸಾಮಾನ್ಯರ ಕೈಗೆ ಸಿಗದಷ್ಟು ಗಗನಕ್ಕೇರಿದೆ. ಟೊಮ್ಯಾಟೊ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ಅನೇಕರು ಟೊಮ್ಯಾಟೊ ಸೇವನೆಯನ್ನು ಕಡಿಮೆ ಮಾಡಿದ್ದಾರೆ. ಮನೆಯಲ್ಲಿಯೂ ಟೊಮ್ಯಾಟೊ ಇಲ್ಲದೆ ಅಡುಗೆ ಮಾಡಿದ್ದಾರೆ. ಆದರೂ ಬೆಲೆ ಏರಿಕೆಯಿಂದ ತಿನಿಸು ಮತ್ತು ಜನರ ಮೇಲೆ ಹೆಚ್ಚು ಪರಿಣಾಮ ಬೀರಿಲ್ಲ.

ಆದರೆ ಹೆಚ್ಚಿನ ಭಾರತೀಯರಿಗೆ ಬೆಳಗ್ಗೆ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸವಿದೆ. ಬೆಳಗ್ಗೆ ಎದ್ದು ಕಾಫಿ ಕುಡಿಯದೆ ದಿನ ಆರಂಭವಾಗುವುದಿಲ್ಲ. ವಿಶೇಷವಾಗಿ ಕಾಫಿ ಬಹುತೇಕರ ಫೇವರಿಟ್. ಟೊಮ್ಯಾಟೊ ಬೆಲೆ ಹೆಚ್ಚಾದಾಗ ಅದಿಲ್ಲದೆ ಅಡುಗೆ ಮಾಡಿದ್ದಾರೆ. ಆದರೆ ಕಾಫಿ ಇಲ್ಲದೆ ಇದ್ದರೆ...ಹೌದು, ಸದ್ಯ ಕಾಫಿ ಬೀಜದ ಕೊರತೆ ಜಗತ್ತನ್ನು ಕಾಡುತ್ತಿದೆ.

ಕಾಫಿ ಬೀಜದ ಕೊರತೆಯಿಂದ ಕಾಫಿ ಬೆಲೆ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಎಂದು ವ್ಯಾಪಾರ ಮೂಲಗಳು ತಿಳಿಸಿವೆ. ಕಾಫಿ ಬೆಲೆ ಏರಿಕೆ ಯಾವುದೇ ಒಂದು ದೇಶಕ್ಕೆ ಸೀಮಿತವಾಗದೆ, ವಿಶ್ವದ ಹಲವು ದೇಶಗಳು ಈ ಬೆಲೆಯ ಪರಿಣಾಮವನ್ನು ಎದುರಿಸಲಿದೆ ಎಂದು ಮಾರುಕಟ್ಟೆಯ ಮೂಲಗಳು ಹೇಳುತ್ತವೆ. ಸದ್ಯದಲ್ಲೇ ಟೊಮ್ಯಾಟೊ ದರದಂತೆ ಕಾಫಿ ಬೆಲೆಯೂ ಗಗನಕ್ಕೇರಲಿದೆ ಎನ್ನಲಾಗಿದೆ.

ಬ್ರೆಜಿಲ್ ಮತ್ತು ವಿಯೆಟ್ನಾಂನಲ್ಲಿ ಕಾಫಿ ಬೀಜಗಳ ಕೊರತೆ
ಭಾರತದಲ್ಲಿ ಅಕಾಲಿಕ ಮಳೆಯಿಂದಾಗಿ ಕಾಫಿ ಬೆಳೆಗೆ ತೀವ್ರ ಹಾನಿಯಾಗಿದೆ ಮತ್ತು ಕಾಫಿ ಬೀಜಗಳ ಇಳುವರಿ ಕುಸಿದಿದೆ. ಕಾಫಿ ಬೀಜಗಳಿಗೆ ಯಾವಾಗಲೂ ಹೆಚ್ಚಿನ ಬೇಡಿಕೆ ಇರುತ್ತದೆ. ಪೂರೈಕೆಯೂ ಇರುತ್ತದೆ. ಆದರೆ ಈಗ ಪೂರೈಕೆ ಕಡಿಮೆಯಾಗಿ ಬೆಲೆ ಹೆಚ್ಚಾಗಲಿದೆ ಎನ್ನುತ್ತಾರೆ. ಸಾಮಾನ್ಯವಾಗಿ ಕಾಫಿ ಬೀಜಗಳು ಕೆಜಿಗೆ 580 ರೂಗೆ ಮಾರಾಟವಾಗುತ್ತವೆ. ಆದರೆ ಪ್ರಸ್ತುತ 650ಕ್ಕೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇವುಗಳ ಬೆಲೆ ಮತ್ತಷ್ಟು ಹೆಚ್ಚಾಗಲಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಸಕಾಲಕ್ಕೆ ಮಳೆ ಬಾರದೆ ಬೆಳೆ ಹಾನಿ
ಸಾಮಾನ್ಯವಾಗಿ ಪ್ರತಿ ವರ್ಷ ಜನವರಿಯಲ್ಲಿ ಕಾಫಿ ಬೀಜದ ಬೆಲೆ ಹೆಚ್ಚುತ್ತಿದ್ದು, ಈ ವರ್ಷ ಕಾಫಿ ಬೀಜದ ಇಳುವರಿ ಶೇ.20ಕ್ಕಿಂತ ಹೆಚ್ಚು ಕುಸಿದಿರುವುದರಿಂದ ಜುಲೈ ಮತ್ತು ಆಗಸ್ಟ್‌ನಲ್ಲಿ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು. ಕಳೆದ ವರ್ಷ 200 ಗ್ರಾಂ ಜಾರ್ ಬೆಲೆ 280 ರೂ., ಆದರೆ ಈಗ ರೂ. 360ಕ್ಕೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಶೇ.10ರಷ್ಟು ಹೆಚ್ಚಾಗಲಿದೆ ಎಂದು ಕಾಂಟಿನೆಂಟಲ್ ಬ್ರಾಂಡ್ ನಲ್ಲಿ ಕಾಫಿ ಮಾರಾಟ ಮಾಡುತ್ತಿರುವ ಸಿಸಿಎಲ್ ಉತ್ಪನ್ನ ಕಂಪನಿ ಹೇಳಿದೆ.

ಭಾರತದ ಶೇಕಡ 70 ರಷ್ಟು ಕಾಫಿಯನ್ನು ಕರ್ನಾಟಕವು ಉತ್ಪಾದಿಸುತ್ತದೆ. ಕೇರಳ ಮತ್ತು ತಮಿಳುನಾಡು ಕೂಡ ಕಾಫಿ ಬೆಳೆಯುತ್ತವೆ. ಕರ್ನಾಟಕ ರಾಜ್ಯದ ಪ್ರತಿಕೂಲ ಹವಾಮಾನದಿಂದಾಗಿ ಕಾಫಿ ಇಳುವರಿ ಗಣನೀಯವಾಗಿ ಕಡಿಮೆಯಾಗಿದೆ. ಚಿಕ್ಕಮಗಳೂರು ಭಾಗದಲ್ಲಿ ಹವಾಮಾನ ಬದಲಾವಣೆ ಪರಿಣಾಮ ಬೀರಿದೆ. ಸಕಾಲಕ್ಕೆ ಮಳೆ ಬಾರದೆ ಬೆಳೆ ಹಾನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net