

ಚೆನ್ನೈ: 18ನೇ ಆವೃತ್ತಿಯ ಐಪಿಎಲ್ (IPL) ಆರಂಭವಾಗುವುದ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಈಗಾಗಲೇ ಅದಕ್ಕೆ ಸಂಬಂಧಿಸಿದ ಕೆಲಸಗಳು ಪ್ರಾರಂಭವಾಗಿದೆ. ಮುನ್ನುಡಿ ಎಂಬಂತೆ ಅಕ್ಟೋಬರ್ 31ರಂದು ತಂಡಗಳು ರಿಟೇನ್ (Retain) ಪಟ್ಟಿ ಬಿಡುಗಡೆ ಮಾಡಲಿದ್ದು, ಇದಾದ ಬಳಿಕ ವರ್ಷಾಂತ್ಯದಲ್ಲಿ ಮೆಗಾ ಹರಾಜು ಕಾರ್ಯಕ್ರಮ ನಡೆಯಲಿದೆ. ರಿಟೇನ್ಗೆ ಸಂಬಂಧಿಸಿದಂತೆ ಯಾವುದಾದರು ಒಂದು ಹೆಸರು ಕ್ರೀಡಾ ವಲಯದಲ್ಲಿ ಸಖತ್ ಸೌಂಡ್ ಮಾಡುತ್ತಿದೆ ಎಂದರೆ ಅದು ಮಹೇಂದ್ರ ಸಿಂಗ್ ಧೋನಿ (Dhoni) ಈ ಬಾರಿಯ ಐಪಿಎಲ್ನಲ್ಲಿ ಆಡುತ್ತಾರಾ ಇಲ್ಲವಾ ಎಂದು. ಆದರೆ, ಈ ಬಗ್ಗೆ ಇದೀಗ ಸುದ್ದಿಯೊಂದು ಹೊರಬಿದ್ದಿದ್ದು, ಈ ವಿಚಾರವನ್ನು ಕೇಳಿ ಧೋನಿ (Dhoni) ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಈ ಬಗ್ಗೆ ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥನ್ ಹೇಳಿಕೆಯನ್ನು ನೀಡಿದ್ದು, 18ನೇ ಆವೃತ್ತಿಯ ಐಪಿಎಲ್ ಆಡಲು ಧೋನಿ (Dhoni) ಸಜ್ಜಾಗಿದ್ದು, ಈ ವಿಚಾರವನ್ನು ಹಂಚಿಕೊಳ್ಳಲು ಸಂತಸವಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ, ಧೋನಿ (Dhoni) ರಿಟೇನ್ (Reatin) ಆಟಗಾರನಾಗಿ ಉಳಿಯುತ್ತಾರಾ ಅಥವಾ ಅನ್ಕ್ಯಾಪ್ಡ್ ಪ್ಲೇಯರ್ ಆಗಿ ಕಣಕ್ಕಿಳಿಯಲಿದಾರಾ ಎಂಬ ವಿಚಾರವನ್ನು ಮಾತ್ರ ಬಹಿರಂಗಪಡಿಸಿಲ್ಲ.
ಇತ್ತೀಚಿಗೆ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಧೋನಿ (Dhoni) ನಾನು ಇನ್ನೂ ಕೆಲವು ವರ್ಷಗಳ ಕಾಲ ಕ್ರಿಕೆಟ್ಅನ್ನು ಆನಂದಿಸಬೇಕು ಎಂದುಕೊಂಡಿದ್ದೇನೆ. ನೀವು ಕ್ರಿಕೆಟ್ ಅನ್ನು ವೃತ್ತಿಪರ ಕ್ರೀಡೆಯಂತೆ ಆಡಿದಾಗ, ಅದನ್ನು ಆಟದಂತೆ ಆನಂದಿಸಲು ಕಷ್ಟವಾಗುತ್ತದೆ. ನಾನು ಅದನ್ನು ಮಾಡಲು ಬಯಸುತ್ತೇನೆ. ಅದು ಸುಲಭವಲ್ಲ ಎಂದು ಧೋನಿ ಹೇಳಿದ್ದರು. ಈ ಮೂಲಕ ತಾವು 18ನೇ ಆವೃತ್ತಿಯ ಐಪಿಎಲ್ನಲ್ಲಿ ಆಡುವುದಾಗಿ ಮುನ್ಸೂಚನೆ ನೀಡಿದ್ದರು.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ರವೀಂದ್ರ ಜಡೇಜಾ, ಋತುರಾಜ್ ಗಾಯಕ್ವಾಡ್, ಮಥೀಶ ಪತಿರಾನ, ಶಿವಂ ದುಬೆ, ಡೆವೊನ್ ಕಾನ್ವೆ ಮತ್ತು ಸಮೀರ್ ರಿಜ್ವಿ ಅವರನ್ನು ತಂಡ ರಿಟೇನ್ ಮಾಡಬಹುದು ಎಂದು ಹೇಳಲಾಗಿದೆ. ಐಪಿಎಲ್ ಮೆಗಾ ಹರಾಜು ಹಿನ್ನೆಲೆಯಲ್ಲಿ ಇದೇ ಅಕ್ಟೋಬರ್ 31ರಂದು ಸಂಜೆ 4:30ರ ವೇಳೆಗೆ ಎಲ್ಲಾ ಫ್ರಾಂಚೈಸಿಗಳು ತಂಡದ ರಿಟೇನ್ (Retain) ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಿವೆ.