ಹಿರಿಯ ಆಟಗಾರರು... Team India ಪ್ರದರ್ಶನಕ್ಕೆ ಕಿಡಿಕಾರಿದ ಮಾಜಿ ಕ್ರಿಕೆಟಿಗ

Team India
Published on

ನವದೆಹಲಿ: 12 ವರ್ಷಗಳ ತವರು ನೆಲದಲ್ಲಿ ಸರಣಿ ಸೋಲುವ ಮೂಲಕ ಟೀಮ್​ ಇಂಡಿಯಾ (Team India) ಭಾರೀ ಟೀಕೆಗೆ ಗುರಿಯಾಗಿದ್ದು, ಅನೇಕರು ತಂಡದ ನೀರಸ ಪ್ರದರ್ಶನದ ವಿರುದ್ಧ ಕಿಡಿಕಾರುತ್ತಿದ್ದಾರೆ. ಕೋಚ್​ ಗೌತಮ್​ ಗಂಭೀರ್​ ಹಾಗೂ ನಾಯಕ ರೋಹಿತ್​ ಶರ್ಮ ತೆಗೆದುಕೊಂಡಿರುವ ನಿರ್ಧಾರಗಳೇ ಸರಣಿ ಸೋಲಿಗೆ ಕಾರಣ ಎಂದು ಹೇಳಲಾಗಿದ್ದು, ಫ್ಯಾನ್ಸ್​ ಕಿಡಿಕಾರುತ್ತಿದ್ದಾರೆ. ಮುಂಬರುವ ಟೂರ್ನಿಗಳಲ್ಲೂ ಈ ನೀರಸ ಪ್ರದರ್ಶನ ತಂಡದ ಮೇಲೆ ಪ್ರಭಾವ ಬೀರುತ್ತೆ ಎಂದು ಹೇಳಲಾಗಿದ್ದು, ಬದಲವಾಣೆಯ ಕೂಗು ಕೇಳಿ ಬರುತ್ತಿದೆ.

ತಂಡದ ಪ್ರದರ್ಶನದ ಕುರಿತು ಮಾಜಿ ಕ್ರಿಕೆಟಿಗ ಇರ್ಫಾನ್​ ಪಠಾಣ್​ ಟ್ವೀಟ್​ ಮಾಡಿ ಆತಂಕ ವ್ಯಕ್ತಪಡಿಸಿದ್ದು, ಮುಂಬರುವ ದಿನಗಳಲ್ಲಿ ಇದು ತಂಡಕ್ಕ ನಿರ್ಣಾಯಕವೆನ್ನಿಸಲಿದೆ ಎಂದು ಹೇಳಲಾಗಿದೆ.

ಭಾರತದ ನೆಲದಲ್ಲಿ ಸರಣಿಯನ್ನು ಗೆದ್ದಿರುವ ನ್ಯೂಜಿಲೆಂಡ್​ಗೆ ಅಭಿನಂದನೆಗಳು. ಟೀಮ್​ ಇಂಡಿಯಾಗಿ ಪ್ರತಿಬಿಂಬಿಸಲು ಸಾಕಷ್ಟಿದ್ದು, ಹಿರಿಯ ಆಟಗಾರರು ಆಟದ ಅಂತಿಮ ಸ್ವರೂಪದಲ್ಲಿ ತಂಡಕ್ಕೆ ಆಸರೆಯಾಗಬೇಕು ಮತ್ತು ಮುಂದಿನ ಮೂರು ತಿಂಗಳು ತಂಡಕ್ಕೆ ನಿರ್ಣಾಯಕವಾಗಿದ್ದು, ಈ ಬಗ್ಗೆ ಯೋಚಿಸಬೇಕಿದೆ ಎಂದು ಟ್ವೀಟ್​ ಮಾಡಿದ್ದಾರೆ.

ಬ್ಯಾಟ್ಸ್​ಮನ್​ಗಳ ಪೆವಿಲಿಯನ್​ ಪೆರೇಡ್​ 

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ದುಕೊಂಡ ನ್ಯೂಜಿಲೆಂಡ್​ (NewZealand) ತಂಡವು ವಾಷಿಂಗ್ಟನ್​ ಸುಂದರ್​. ಆರ್​. ಅಶ್ವಿನ್​ ಆಫ್​ಸ್ಪಿನ್​​ ದಾಳಿಗೆ ನಲುಗಿ 259 ರನ್​ಗಳಿಗೆ ಆಲೌಟ್​ ಆಗಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್​ ಮಾಡಿದ ಟೀಮ್​ ಇಂಡಿಯಾ (Team India) 156 ರನ್‌ಗಳಿಗೆ ಆಲೌಟ್ ಆಗಿತ್ತು.  103 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ನ್ಯೂಜಿಲೆಂಡ್​ ತಂಡವು ನಾಯಕ ಟಾಮ್​ ಲಾಥಮ್​ (86 ರನ್​, 133 ಎಸೆತ, 10 ಬೌಂಡರಿ) ದಿಟ್ಟ ಬ್ಯಾಟಿಂಗ್​ ಫಲವಾಗಿ 255 ರನ್​ಗಳಿಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ 359 ರನ್​ಗಳ ಗುರಿ ನೀಡಿತು.

ಗುರಿ ಬೆನ್ನತ್ತಿದ್ದ ಭಾರತ ತಂಡವನ್ನು ಇನ್ನಿಲ್ಲದಂತೆ ಕಾಡಿದ ಕಿವೀಸ್​ ಬೌಲರ್​​ಗಳು (NewZealand) ಪೆವಿಲಿಯನ್​ ದಾರಿ ತೋರಿಸಿದರು. ಮೊದಲ ಇನ್ನಿಂಗ್ಸ್​ನಂತೆ ಎರಡನೇ ಇನ್ನಿಂಗ್ಸ್​ನಲ್ಲೂ ಬ್ಯಾಟ್ಸ್​ಮನ್​ಗಳು ಕೈಕೊಟ್ಟ ಪರಿಣಾಮ ಟೀಮ್​ ಇಂಡಿಯಾ ಸೋಲಿಗೆ ಕೊರಳೊಡ್ಡಬೇಕಾಯಿತು. ತಂಡದ ಪರ ರವೀಂದ್​ ಜಡೇಜಾ 42 ರನ್​ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.

ಸ್ಯಾಂಟ್ನರ್​ ಮಿಂಚು 

ನ್ಯೂಜಿಲೆಂಡ್ ಪರ ಎರಡನೇ ಇನ್ನಿಂಗ್ಸ್‌ನಲ್ಲೂ ಮಾರಕ ಬೌಲಿಂಗ್ ಪ್ರದರ್ಶಿಸಿದ ಮಿಚೆಲ್ ಸ್ಯಾಂಟ್ನರ್ ತಂಡದ ಗೆಲುವಿನ ಪ್ರಮುಖ ರೂವಾರಿ ಎನಿಸಿಕೊಂಡರು.  ಮೊದಲ ಇನ್ನಿಂಗ್ಸ್​ನಲ್ಲಿ ಪ್ರಮುಖ 7 ವಿಕೆಟ್ ಉರುಳಿಸಿದ್ದ ಸ್ಯಾಂಟ್ನರ್, ಎರಡನೇ ಇನ್ನಿಂಗ್ಸ್​ನಲ್ಲೂ 6 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಕಿವೀಸ್ ತಂಡ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದು, ಭಾರತದಲ್ಲಿ ಚೊಚ್ಚಲ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net