

Virender Sehwag : ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ವಿಶ್ವದ ಅತ್ಯುತ್ತಮ ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ತಮ್ಮ ವಿನಾಶಕಾರಿ ಆಟದ ಶೈಲಿಯಿಂದ, ಈ ಬಲಗೈ ಬ್ಯಾಟ್ಸ್ಮನ್ ಭಾರತ ತಂಡಕ್ಕೆ ಅನೇಕ ಸ್ಮರಣೀಯ ಗೆಲುವುಗಳನ್ನು ನೀಡಿದ್ದಾರೆ. ಮೊದಲ ಎಸೆತದಲ್ಲೇ ಅಥವಾ ಶತಕದ ಹೊಸ್ತಿಲಲ್ಲಿ ಬೌಂಡರಿ ಬಾರಿಸುವ ಮೂಲಕ ಬೌಲರ್ಗಳನ್ನು ಬೆಂಡತ್ತಿದ್ದರು. ಸೆಹ್ವಾಗ್ ಅವರ ಆಟದ ಶೈಲಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ.
ಅಂದಹಾಗೆ, ಸೆಹ್ವಾಗ್ ಅವರು ತಮ್ಮ ವೃತ್ತಿಜೀವನದಲ್ಲಿ 104 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 82 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 8586 ರನ್ ಗಳಿಸಿದ್ದಾರೆ. ಇದರಲ್ಲಿ 23 ಶತಕಗಳು ಮತ್ತು 6 ದ್ವಿಶತಕಗಳು ಸೇರಿವೆ. ಎಲ್ಲಕ್ಕಿಂತ ಹೆಚ್ಚಾಗಿ, ವೀರೂ ಭಾಯ್ ಮುಲ್ತಾನ್‌ನಲ್ಲಿ ಪಾಕಿಸ್ತಾನ ವಿರುದ್ಧ ಗಳಿಸಿದ ತ್ರಿಶತಕ (319) ಟೀಮ್ ಇಂಡಿಯಾ ಅಭಿಮಾನಿಗಳ ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಸೆಹ್ವಾಗ್ ಆಡಿರುವ 251 ಏಕದಿನ ಪಂದ್ಯಗಳಲ್ಲಿ 15 ಶತಕಗಳು ಮತ್ತು ಒಂದು ದ್ವಿಶತಕ ಸೇರಿದಂತೆ 104 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನೊಂದಿಗೆ 8273 ರನ್ ಗಳಿಸಿದ್ದಾರೆ.
ಇನ್ನು ಧೋನಿ ನಾಯಕತ್ವದಲ್ಲಿ ತವರು ನೆಲದಲ್ಲಿ 2011 ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಸೆಹ್ವಾಗ್ ಕೂಡ ಪ್ರಮುಖ ಪಾತ್ರ ವಹಿಸಿದರು. ಆದರೆ, ಅಚ್ಚರಿ ಸಂಗತಿ ಏನೆಂದರೆ, ಈ ವಿಶ್ವಕಪ್ ಆಡುವ ಮುನ್ನವೇ ಅಂದರೆ, 2008ರಲ್ಲಿ ಸೆಹ್ವಾಗ್ ಅವರು ಏಕದಿನ ಪಂದ್ಯಗಳಿಂದ ನಿವೃತ್ತಿ ಘೋಷಿಸುವ ಬಗ್ಗೆ ಯೋಚಿಸಿದ್ದರು. ಇದಕ್ಕೆ ಕಾರಣ, ಆಗಿನ ನಾಯಕ ಮಹೇಂದ್ರ ಸಿಂಗ್ ಧೋನಿ 2007-08 ರ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಸೆಹ್ವಾಗ್ ಅವರನ್ನು ಅಂತಿಮ ತಂಡದಿಂದ ಹೊರಗಿಟ್ಟಿದ್ದರು. ಈ ಬೇಸರದಲ್ಲಿ ಸೆಹ್ವಾಗ್ ಆ ನಿರ್ಧಾರಕ್ಕೆ ಬಂದಿದ್ದರು. ಆದರೆ, ಸಚಿನ್ ತೆಂಡೂಲ್ಕರ್ ಅವರ ಸಲಹೆಯ ನಂತರ, ವೀರೂ ಭಾಯ್ ತಮ್ಮ ನಿರ್ಧಾರವನ್ನು ಹಿಂತೆಗೆದುಕೊಂಡರು.
ಧೋನಿ ನನ್ನನ್ನು ಅಂತಿಮ ತಂಡದಿಂದ ಹೊರಗಿಟ್ಟಿದ್ದರು ಎಂದು ವೀರೇಂದ್ರ ಸ್ವತಃ ಸೆಹ್ವಾಗ್ ಅವರೇ ಬಹಿರಂಗಪಡಿಸಿದ್ದಾರೆ. ಪದ್ಮಜೀತ್ ಸೆಹ್ರಾವತ್ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಸೆಹ್ವಾಗ್, 2007-08ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಮೂರು ಪಂದ್ಯಗಳನ್ನು ಆಡಿದ ನಂತರ ಎಂಎಸ್ ಧೋನಿ ನನ್ನನ್ನು ಅಂತಿಮ ತಂಡದಿಂದ ಹೊರಗಿಟ್ಟರು. ಅದಾದ ನಂತರ, ನನ್ನನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲಿಲ್ಲ. ಆಡುವ ಹನ್ನೊಂದರ ಬಳಗದಲ್ಲಿ ನನಗೆ ಇನ್ನು ಮುಂದೆ ಸ್ಥಾನವಿಲ್ಲ ಎಂದು ಅರ್ಥವಾಯಿತು. ಆ ಸಮಯದಲ್ಲಿ ಏಕದಿನ ಪಂದ್ಯಗಳಲ್ಲಿ ಮುಂದುವರಿಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅನಿಸಿತು. ಬಳಿಕ ಸಚಿನ್ ತೆಂಡೂಲ್ಕರ್ ಬಳಿ ಹೋಗಿ, ನಾನು ಏಕದಿನ ಮಾದರಿಯಿಂದ ನಿವೃತ್ತಿಯನ್ನು ಘೋಷಿಸಲು ಬಯಸುತ್ತೇನೆಂದು ಹೇಳಿದೆ.
ಈ ವೇಳೆ ಸಚಿನ್ ಅವರು ನನ್ನ ಮನಸ್ಸು ಬದಲಿಸಿದರು. ನಿಮ್ಮಂತೆಯೇ, ನಾನು ಕೂಡ 1999-2000 ರಲ್ಲಿ ಇದೇ ರೀತಿಯ ಕಠಿಣ ಪರಿಸ್ಥಿತಿಯನ್ನು ಎದುರಿಸಿದೆ. ನಾನು ಕೂಡ ರನ್ ಗಳಿಸಲು ಹೆಣಗಾಡಿದೆ. ನಿಮ್ಮಂತೆ ನಾನು ಕೂಡ ಆಟಕ್ಕೆ ವಿದಾಯ ಹೇಳಲು ಬಯಸಿದ್ದೆ. ಆದರೆ, ನಾನು ಆ ಕಠಿಣ ಹಂತವನ್ನು ಜಯಿಸಿದೆ. ಇದೀಗ ನೀವು ಕೂಡ ಕಠಿಣ ಪರಿಸ್ಥಿತಿಯಲ್ಲಿದ್ದೀರಿ. ಇದು ಕೂಡ ಶೀಘ್ರದಲ್ಲೇ ಕೊನೆಗೊಳ್ಳುತ್ತದೆ. ಭಾವನಾತ್ಮಕವಾಗಿ ವರ್ತಿಸಿ, ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಿಮಗಾಗಿ ಕೆಲವೊಂದಿಷ್ಟು ಸಮಯ ಕೊಡಿ. ಒಂದೆರೆಡು ಸರಣಿ ನೋಡಿ ಆಮೇಲೆ ನಿರ್ಧಾರಕ್ಕೆ ಬನ್ನಿ ಎಂದು ಸಚಿನ್ ಸಲಹೆ ನೀಡಿದರು ಅಂತ ಸೆಹ್ವಾಗ್ ಹೇಳಿದ್ದಾರೆ.
ಇದಾದ ಬಳಿಕ ನಾನು ಮುಂದಿನ ಸರಣಿಯಲ್ಲಿ ಬಹಳಷ್ಟು ರನ್ ಗಳಿಸಿದೆ. 2011 ರಲ್ಲಿ ನಾನು ಏಕದಿನ ವಿಶ್ವಕಪ್ ಅನ್ನು ಸಹ ಗೆದ್ದೆ ಎಂದು ಸೆಹ್ವಾಗ್ ಹೇಳಿದರು. ತಮ್ಮ ವೃತ್ತಿಜೀವನದ ಕಹಿ ಅನುಭವಗಳನ್ನು ನಿವಾರಿಸಿಕೊಂಡು ಸಿಹಿ ಅನುಭವಗಳನ್ನು ಪಡೆದುಕೊಂಡ ನೆನಪುಗಳನ್ನು ಪಾಡ್ಕಾಸ್ಟ್ನಲ್ಲಿ ಹಂಚಿಕೊಂಡರು.
ಅಂದಹಾಗೆ, ಸೆಹ್ವಾಗ್ ಅವರು 2015 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ತಮ್ಮ ವೃತ್ತಿಜೀವನದಲ್ಲಿ ಒಟ್ಟು 19 ಅಂತಾರಾಷ್ಟ್ರೀಯ ಟಿ20ಐಗಳನ್ನು ಆಡಿರುವ ಸೆಹ್ವಾಗ್ 394 ರನ್ ಗಳಿಸಿದರು. ಐಪಿಎಲ್‌ನಲ್ಲಿ, ಅವರು 104 ಪಂದ್ಯಗಳಲ್ಲಿ ಎರಡು ಶತಕಗಳ ಸಹಾಯದಿಂದ 2728 ರನ್ ಗಳಿಸಿದರು. (ಏಜೆನ್ಸೀಸ್)