

Smartphones : ಪ್ರಸ್ತುತ ಯುಗದಲ್ಲಿ ಸ್ಮಾರ್ಟ್ಫೋನ್ಗಳ ಅತಿಯಾದ ಬಳಕೆಯು ಜನರ ನಡುವಿನ ವೈಯಕ್ತಿಕ ಸಂಬಂಧಗಳನ್ನು ಹಾಳುಮಾಡುತ್ತಿದೆ. ಕೂತರು, ನಿಂತರು ಹಾಗೂ ಮಲಗಿದರೂ ಮೊಬೈಲ್ ಬೇಕೇ ಬೇಕು. ಊಟ ಮಾಡುವಾಗ, ಪ್ರಯಾಣ ಮಾಡುವಾಗ ಮತ್ತು ನಿತ್ಯ ಕರ್ಮಗಳನ್ನು ಮುಗಿಸುವಾಗಲೂ ಮೊಬೈಲ್ ಕೈಯಲ್ಲಿ ಹಿಡಿದಿರಲೇ ಬೇಕು. ಮೊಬೈಲ್ ಇಲ್ಲದಿದ್ದರೆ ಕೈಕಾಲುಗಳೇ ಓಡುವುದಿಲ್ಲ, ಏನೋ ಕಳೆದುಕೊಂಡಂತೆ ಚಡಿಪಡಿಸುತ್ತೇವೆ ಎಂದು ಹೇಳುವ ಅನೇಕ ಮಂದಿ ಇದಾರೆ. ಅಂಗೈ ಗಾತ್ರದ ಒಂದು ಸಣ್ಣ ಮೊಬೈಲ್ ಇಂದು ಜಗತ್ತಿನ ನೆಮ್ಮದಿಯನ್ನೇ ನಾಶ ಮಾಡುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು.
ಇನ್ನು ಮಕ್ಕಳ ವಿಚಾರಕ್ಕೆ ಬಂದರೆ, ಅಪ್ರಾಪ್ತ ವಯಸ್ಕರಲ್ಲಿ ಸ್ಮಾರ್ಟ್ಫೋನ್ ಚಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಊಟ ಮಾಡಲು ಬೇಕು ಮೊಬೈಲ್, ನಿದ್ರೆಗೆ ಜಾರುವಾಗಲೂ ಬೇಕಿದೆ ಮೊಬೈಲ್. ಪುಟ್ಟ ಮಕ್ಕಳಲ್ಲಿ ಹೆಚ್ಚುತ್ತಿರುವ ಈ ಗೀಳು, ಪೋಷಕರಲ್ಲಿ ಭಾರೀ ಆತಂಕ ಸೃಷ್ಟಿಸುತ್ತಿದೆ. ಕೆಲವರು ತಮ್ಮ ಮಕ್ಕಳಿಗೆ ಬುದ್ಧಿ ಹೇಳಿ, ಒಂದೆರೆಡು ಏಟು ಬಾರಿಸಿ ಮೊಬೈಲ್ ಕಸಿದುಕೊಂಡರೆ, ಇನ್ನೂ ಕೆಲವು ಪೋಷಕರು ಎಷ್ಟೇ ಬುದ್ಧಿ ಮಾತು ಹೇಳಿದರು ಮಕ್ಕಳು ಬಗ್ಗದೆ, ತಂದೆ-ತಾಯಿಗೆ ತಿರುಗಿ ಮಾತನಾಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಮೊಬೈಲ್ ಬಳಸಬೇಡ ಎಂದು ಪಾಲಕರ ಬೈದಿದ್ದಕ್ಕೆ ದುಡುಕಿನ ನಿರ್ಧಾರ ತೆಗೆದುಕೊಂಡ ಉದಾಹರಣೆಗಳು ಕೂಡ ನಮ್ಮ ಕಣ್ಣ ಮುಂದಿವೆ.
13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಅತಿಯಾದ ಸ್ಮಾರ್ಟ್ಫೋನ್ ಬಳಕೆಯಿಂದ ಅವರು ವಯಸ್ಕರಾದಾಗ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೊಂದುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನವೊಂದು ಕಂಡುಹಿಡಿದಿದೆ. ಸುಮಾರು 1,00,000 ಕ್ಕೂ ಹೆಚ್ಚು ಜನರ ಮೇಲೆ ನಡೆಸಿದ ಅಧ್ಯಯನದಲ್ಲಿ ಈ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಈ ಅಧ್ಯಯನವನ್ನು ಜರ್ನಲ್ ಆಫ್ ಹ್ಯೂಮನ್ ಡೆವಲಪ್ಮೆಂಟ್ ಅಂಡ್ ಕೆಪಾಬಿಲಿಟೀಸ್ನಲ್ಲಿ ಪ್ರಕಟಿಸಲಾಗಿದೆ.
ಸ್ಮಾರ್ಟ್ಫೋನ್ಗಳನ್ನು ಪಡೆದ 12 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು 18 ರಿಂದ 24 ವರ್ಷದೊಳಗೆ ಆತ್ಮಹತ್ಯೆ ಪ್ರವೃತ್ತಿ, ಆಕ್ರಮಣಶೀಲತೆ, ವಾಸ್ತವದಿಂದ ಬೇರ್ಪಡುವಿಕೆ, ಭಾವನೆಗಳನ್ನು ನಿಯಂತ್ರಿಸುವುದರಲ್ಲಿ ಅಸಮರ್ಥತೆ ಮತ್ತು ಕಡಿಮೆ ಸ್ವಾಭಿಮಾನದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೊಂದಿರುತ್ತಾರೆ ಎಂದು ಅಧ್ಯಯನವು ಕಂಡುಹಿಡಿದಿದೆ.
ಸ್ಮಾರ್ಟ್ಫೋನ್ಗಳು ಮಕ್ಕಳಿಗೆ ಸಾಮಾಜಿಕ ಜಾಲತಾಣಗಳಿಗೆ ಸುಲಭ ಪ್ರವೇಶವನ್ನು ನೀಡುತ್ತವೆ. ಇದರಿಂದಾಗಿ ಪ್ರೌಢಾವಸ್ಥೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಅಲ್ಲದೆ, ಅತಿಯಾದ ಮೊಬೈಲ್ ಬಳಕೆಯಿಂದ ನಿದ್ರಾಹೀನತೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಕೌಟುಂಬಿಕ ಸಂಬಂಧಗಳು ಹದಗೆಡುವ ಅಪಾಯ ಹೆಚ್ಚಾಗುತ್ತಿವೆ ಎಂದು ಅಧ್ಯಯನವು ಸೂಚಿಸುತ್ತದೆ.
ಇತ್ತೀಚಿನ ವರ್ಷಗಳಲ್ಲಿ, ಫ್ರಾನ್ಸ್, ನೆದರ್ಲ್ಯಾಂಡ್ಸ್, ಇಟಲಿ ಮತ್ತು ನ್ಯೂಜಿಲೆಂಡ್ ಸೇರಿದಂತೆ ಹಲವಾರು ದೇಶಗಳು ಶಾಲೆಗಳಲ್ಲಿ ಸ್ಮಾರ್ಟ್ಫೋನ್ಗಳ ಬಳಕೆಯನ್ನು ನಿಷೇಧಿಸಿವೆ ಅಥವಾ ನಿರ್ಬಂಧಿಸಿವೆ. ಅಮೆರಿಕದ ಹಲವಾರು ರಾಜ್ಯಗಳ ಶಾಲೆಗಳು ಕೂಡ ಮಕ್ಕಳ ಸ್ಮಾರ್ಟ್ಫೋನ್ ಬಳಕೆಯನ್ನು ಸೀಮಿತಗೊಳಿಸುವ ಕಾನೂನನ್ನು ಅಂಗೀಕರಿಸಿವೆ.
ಇನ್ನು ಸ್ಯಾಪಿಯನ್ ಲ್ಯಾಬ್ಸ್ನ ಸಂಶೋಧನೆಯು ಮಕ್ಕಳ ಸ್ಮಾರ್ಟ್ಫೋನ್ ಬಳಕೆಯನ್ನು ನಿಯಂತ್ರಿಸುವ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಸ್ಮಾರ್ಟ್ಫೋನ್ಗಳು ಮಕ್ಕಳ ಭಾವನಾತ್ಮಕ ನಿಯಂತ್ರಣ, ಸ್ವಾಭಿಮಾನ ಇತ್ಯಾದಿಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ ಎಂದು ಸಂಶೋಧನೆ ಹೇಳಿದೆ ಎಂದು ಸ್ಯಾಪಿಯನ್ ಲ್ಯಾಬ್ನ ಸಂಸ್ಥಾಪಕಿ ತಾರಾ ತ್ಯಾಗರಾಜನ್ ಹೇಳಿದ್ದಾರೆ. (ಏಜೆನ್ಸೀಸ್)