ನವದೆಹಲಿ: ಇತ್ತೀಚೆಗೆ ಡಿಜಿಪಿಯೊಬ್ಬರು ಟೀಮ್ ಇಂಡಿಯಾದ ದಿಗ್ಗಜ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರನ್ನು ಭೇಟಿ ಮಾಡಿದ್ದರು. ಹರಿಯಾಣ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಈ ವ್ಯಕ್ತಿ ಒಂದು ಕಾಲದಲ್ಲಿ ಟೀಮ್ ಇಂಡಿಯಾ ಪರ ಆಡುತ್ತಿದ್ದರು. ಕೇವಲ ಆಡುವುದಷ್ಟೇ ಅಲ್ಲ, ಭಾರತಕ್ಕೆ ಟಿ20 ವಿಶ್ವಕಪ್ ಒದಗಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.
ಹೌದು, 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಟಿ20 ವಿಶ್ವಕಪ್‌ನಲ್ಲಿ ಧೋನಿ ನಾಯಕತ್ವದ ಭಾರತ ತಂಡ ಚಾಂಪಿಯನ್ ಆಗಿದ್ದು ಗೊತ್ತೇ ಇದೆ. ಆ ಮೆಗಾ ಟೂರ್ನಮೆಂಟ್ನಲ್ಲಿ ನಮ್ಮ ಬಹುಕಾಲದ ಎದುರಾಳಿ ಪಾಕಿಸ್ತಾನದ ವಿರುದ್ಧದ ಫೈನಲ್ ಪಂದ್ಯದಲ್ಲಿ ಕೊನೆಯ ಓವರ್ ಬೌಲಿಂಗ್ ಮಾಡಿದ ಬೌಲರ್ ಈ ಡಿಜಿಪಿ. ಅವರೇ ಜೋಗಿಂದರ್ ಶರ್ಮ.
ಟಿ20 ವಿಶ್ವಕಪ್ ಫೈನಲ್ನಲ್ಲಿ ಪಾಕಿಸ್ತಾನ ಗೆಲುವಿಗೆ ಕೊನೆಯ 6 ಎಸೆತಗಳಲ್ಲಿ 13 ರನ್ ಅಗತ್ಯವಿತ್ತು. ಈ ವೇಳೆ ಮಿಸ್ಬಾ ಉಲ್ ಹಕ್ 37 ರನ್ ಬಾರಿಸಿ ಕ್ರೀಸ್ನಲ್ಲಿ ಅಂಟಿಕೊಂಡಿದ್ದರು. ಅಲ್ಲದೆ, ಒಳ್ಳೆಯ ಫಾರ್ಮ್ನಲ್ಲಿ ಕೂಡ ಇದ್ದರು. ಒಂದು ಓವರ್ನಲ್ಲಿ 13 ರನ್ ಗಳಿಸುವುದು ಕಷ್ಟವೇನಲ್ಲ. ಆದರೆ, ಇದು ಬೌಲರ್ ಮೇಲೆ ನಿಂತಿರುತ್ತದೆ. ಹೀಗಾಗಿ ಕೊನೆಯ ಓವರ್ ಬೌಲ್ ಮಾಡುವ ಬೌಲರ್ ಯಾರು? ಎಂಬ ಕುತೂಹಲ ಅಂದು ಎಲ್ಲರಲ್ಲೂ ಮನೆ ಮಾಡಿತ್ತು. ಅಲ್ಲದೆ, ಉಸಿರು ಬಿಗಿ ಹಿಡಿದು ಪಂದ್ಯ ವೀಕ್ಷಿಸುತ್ತಿದ್ದರು.
ಈ ವೇಳೆ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಜೋಗಿಂದರ್ ಶರ್ಮ ಕೈಗೆ ಚೆಂಡನ್ನು ನೀಡಿದರು. ಅಷ್ಟಕ್ಕೂ ಜೋಗಿಂದರ್ ಅವರೇನು ದೊಡ್ಡ ಬೌಲರ್ ಅಲ್ಲ, ಹೆಚ್ಚಿನ ಅನುಭವವೂ ಇರಲಿಲ್ಲ. ಇಂತಹ ಬೌಲರ್ಗೆ ಬಾಲ್ ನೀಡಿ ಎಲ್ಲರನ್ನು ಧೋನಿ ಅಚ್ಚರಿಗೆ ದೂಡಿದ್ದರು. ಆದರೆ, ಧೋನಿ ಮಾತ್ರ ಅವರನ್ನು ನಂಬಿದ್ದರು. ಕೊನೆಯ ಓವರ್ ಬೌಲ್ ಮಾಡಲು ಚೆಂಡನ್ನು ಅತ್ಯಂತ ಧೈರ್ಯದಿಂದ ಸ್ವೀಕರಿಸಿದ ಜೋಗಿಂದರ್ ಶರ್ಮ ಮೊದಲ ಎಸೆತವನ್ನು ವೈಡ್ ಮಾಡಿದರು. ಮುಂದಿನ ಎಸೆತ ಸಿಕ್ಸರ್ ಆಯಿತು. ಆದರೂ ಯಾವುದೇ ಒತ್ತಡಕ್ಕೆ ಸಿಲುಕದೆ ಮೂರನೇ ಎಸೆತವನ್ನು ಎಸೆದರು. ಈ ವೇಳೆ ಮಿಸ್ಬಾ ಸ್ಕೂಪ್ ಶಾಟ್ ಆಡಿದರು. ಗಾಳಿಯಲ್ಲಿ ಹಾರಿದ ಚೆಂಡು ನೇರ ಶ್ರೀಶಾಂತ್ ಕೈಗೆ ಸೇರಿತು. ಇದರಿಂದ ಪಾಕಿಸ್ತಾನದ ಕೊನೆಯ ವಿಕೆಟ್ ಪತನದೊಂದಿಗೆ ಟೀಮ್ ಇಂಡಿಯಾ ಚೊಚ್ಚಲ ಟಿ20 ಚಾಂಪಿಯನ್ ಆಯಿತು.
ಈ ಗೆಲುವಿನೊಂದಿಗೆ ಧೋನಿ ಮೊದಲ ಟಿ20 ವಿಶ್ವಕಪ್ ಗೆದ್ದ ನಾಯಕನಲ್ಲದೆ ಭಾರತೀಯ ಕ್ರಿಕೆಟ್‌ನಲ್ಲಿ ಸ್ಟಾರ್ ಆದರು. ಧೋನಿ ಈಗ ಈ ಮಟ್ಟದಲ್ಲಿರಲು ಟಿ20 ವಿಶ್ವಕಪ್ ಗೆಲುವು ಕೂಡ ಕಾರಣ. ಜೋಗಿಂದರ್ ಶರ್ಮ ಅವರು ಎಲ್ಲ ಮೆಗಾ ಟೂರ್ನಿಗಳಲ್ಲಿ ಕೆಚ್ಚೆದೆಯ ಬೌಲಿಂಗ್ ಹಾಗೂ ಒತ್ತಡವನ್ನು ಎದುರಿಸುವ ಮೂಲಕ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಧೋನಿ ಈಗ ಈ ಮಟ್ಟಕ್ಕೆ ಬರಲು ಜೋಗಿಂದರ್ ಶರ್ಮ ಕೂಡ ಕಾರಣ ಎನ್ನಬಹುದು.
ಜೋಗಿಂದರ್ ಶರ್ಮ ಟೀಮ್ ಇಂಡಿಯಾ ಪರ 4 ಏಕದಿನ ಮತ್ತು 4 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಏಕದಿನದಲ್ಲಿ 1 ವಿಕೆಟ್ ಮತ್ತು ಟಿ20ಯಲ್ಲಿ 4 ವಿಕೆಟ್ ಪಡೆದರು. ಅವರು ಏಕದಿನದಲ್ಲಿ 3 ಇನ್ನಿಂಗ್ಸ್‌ಗಳಲ್ಲಿ 35 ರನ್ ಗಳಿಸಿದರು. ಟಿ20ಯಲ್ಲಿ ಅವರು ಬ್ಯಾಟಿಂಗ್‌ಗೆ ಬರಲಿಲ್ಲ. ಕ್ರಿಕೆಟ್‌ನಿಂದ ದೂರವಾದ ನಂತರ, ಹರಿಯಾಣ ಸರ್ಕಾರವು ಜೋಗಿಂದರ್‌ಗೆ ಕ್ರೀಡಾ ಕೋಟಾದ ಅಡಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಉದ್ಯೋಗವನ್ನು ನೀಡಿದೆ.
ಜೋಗಿಂದರ್ ಅವರು ಪ್ರಸ್ತುತ ಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಮಹೇಂದ್ರ ಸಿಂಗ್ ಧೋನಿ ಅವರನ್ನು ಭೇಟಿ ಮಾಡಿದ್ದರು. ಸುಮಾರು 12 ವರ್ಷಗಳ ನಂತರ ಧೋನಿಯನ್ನು ಭೇಟಿಯಾಗಿರುವುದಾಗಿ ಜೋಗಿಂದರ್ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. (ಏಜೆನ್ಸೀಸ್)
ಮಳೆಯಲಿ ಜೊತೆಯಲಿ ದಿನವಿಡಿ ನೆನೆಯಲು… ಕ್ಯಾಮೆರಾ ಕಣ್ಣಲ್ಲಿ ಸೆರೆಯಾಯ್ತು ಆನೆ-ಮಾವುತನ ಪ್ರೀತಿಯ ದೃಶ್ಯಗಳು
ವಯನಾಡು ಸಂತ್ರಸ್ತರಿಗೆ ಸಹಾಯ ಮಾಡಿದ್ರೂ ನಿಲ್ಲದ ಟೀಕೆ: ರಶ್ಮಿಕಾ ವಿರುದ್ಧ ಭಾರಿ ಆಕ್ರೋಶ, ಕಾರಣ ಹೀಗಿದೆ…