ಮಳೆಯಲಿ ಜೊತೆಯಲಿ ದಿನವಿಡಿ ನೆನೆಯಲು… ಕ್ಯಾಮೆರಾ ಕಣ್ಣಲ್ಲಿ ಸೆರೆಯಾಯ್ತು ಆನೆ-ಮಾವುತನ ಪ್ರೀತಿಯ ದೃಶ್ಯಗಳು

Elephant, Mahout
Published on

ನವದೆಹಲಿ: ದೇಶದಲ್ಲಿ ಮಳೆ ಜೋರಾಗಿ ಸುರಿಯುತ್ತಿದೆ. ಬೇಸಿಗೆಯ ಬಿಸಿಲಿನ ತಾಪಕ್ಕೆ ಬೆಂದು ಒಣಗಿದ್ದ ಪ್ರಕೃತಿ ಎಡೆಬಿಡದೆ ಸುರಿಯುತ್ತಿರುವ ಮಳೆಹನಿಗಳ ಮುತ್ತಿಗೆ ನಾಚಿ ಹಸಿರಾಗಿದ್ದರೂ, ಇನ್ನೂ ಬೇಕಾಗಿದೆ ಎಂದು ಗುನುಗುನಿಸುತ್ತಾ ಕೈಯಗಲಿಸಿ ವರ್ಷಧಾರೆಯನ್ನು ಆಲಿಂಗನಕ್ಕೆ ಕರೆಯುತ್ತಿದೆ. ಭೂಮಿ ಮೈತುಂಬಿ ನಿಂತು ಹಸಿರು ಸೀರೆಯುಟ್ಟ ಚೆಲುವೆಯಮತೆ ಕಂಗೊಳಿಸುತ್ತಿದೆ.

ಮಳೆ ಮತ್ತು ಪ್ರಕೃತಿಯ ಈ ಸಮೃದ್ಧ ಮಿಲನಕ್ಕೆ ಸಾಕ್ಷಿಯಾಗಿರುವ ವನ್ಯಜೀವಿಗಳು ಕೂಡ ಸಂತೋಷಗೊಂಡಂತಿವೆ. ಆನೆಯೊಂದು ಸುರಿಯುತ್ತಿರುವ ಮಳೆಗೆ ತನ್ನ ಮೈಯೊಡ್ಡಿ ಮಾವುತನ ಜೊತೆ ಹೆಜ್ಜೆ ಹಾಕಿ ಆ ಕ್ಷಣಗಳನ್ನು ಸಂಭ್ರಮಿಸುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಮಾವುತ ಮತ್ತು ಆನೆಯ ನಡುವಿನ ಆ ಸುಂದರ ಮಳೆ ಪ್ರೀತಿಯ ದೃಶ್ಯಗಳಿಗೀಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ತಮಿಳುನಾಡಿನ ಅಣ್ಣಾಮಲೈ ಹುಲಿಸಂರಕ್ಷಿತಾರಣ್ಯದ ಆನೆ ಶಿಬಿರದಲ್ಲಿ ಆನೆ ಮತ್ತು ಮಾವುತ ಜತೆ ಸಾಗುತ್ತಿರುವುದನ್ನು ವನ್ಯಜೀವಿ ಛಾಯಾಗ್ರಾಹಕ ಧನು ಪರನ್ ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆ ಹಿಡಿದಿದ್ದಾರೆ. ಆನೆ ಮತ್ತು ಮಾವುತನ ಆ ಆತ್ಮೀಯ ದೃಶ್ಯಗಳು ವೈರಲ್ ಆಗಿದ್ದು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅದನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡು ಇದೊಂದು ಮ್ಯಾಜಿಕಲ್ ಕ್ಷಣಗಳಾಗಿವೆ ಎಂದು ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿ ಆನೆಯ ದಂತವನ್ನು ಮಾವುತ ಅಂಗೈಯಂತೆ ಹಿಡಿದು ನಡೆದು ಬರುವುದನ್ನು ಕಾಣಬಹುದು. ಕೊಡೆ ಹಿಡಿದು ಮುಂದೆ ಸಾಗುತ್ತಿರುವ ಮಾವುತನನ್ನು ಆನೆ ಹಿಂಬಾಲಿಸುತ್ತದೆ. ಸುರಿಯುತ್ತಿರುವ ಮಳೆಗೆ ತನ್ನ ವಿಶಾಲವಾದ ಮೈಯೊಡ್ಡಿರುವ ಆನೆಯ ಸೊಂಡಿಲು, ತಲೆ, ಕಿವಿಗಳನ್ನು ಪ್ರೀತಿಯಿಂದ ಸವರುವ ಮಾವುತ ಮತ್ತು ಆ ಕ್ಷಣವನ್ನು ಆನಂದಿಸುತ್ತಿರುವ ಆನೆ, ಇವರಿಬ್ಬರು ತಮ್ಮದೇ ಸ್ವರ್ಗರಾಜ್ಯದಲ್ಲಿರುವಂತೆ ಕಾಣುತ್ತದೆ.

ಮಳೆಯಲಿ ಜೊತೆಯಲಿ ದಿನವಿಡಿ ನೆನೆಯಲು ಎನ್ನುವ ಮಳೆ ಹಾಡುಗಳ ಹನಿಮುತ್ತುಗಳ ಹಾಗೆ ಗಜರಾಜ ಮತ್ತು ಮಾವುತನ ಒಡನಾಟದ ಈ ದೃಶ್ಯ ಹೃದಯಸ್ಪರ್ಶಿಯಾಗಿದೆ. (ಏಜೇನ್ಸಿಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net