

ನವದೆಹಲಿ: ವಿಶ್ವದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ, ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್, ದಾಖಲೆಗಳ ಸರದಾರ ಮತ್ತು ರನ್ ಮೆಷಿನ್ ವಿರಾಟ್ ಕೊಹ್ಲಿಯನ್ನು ಮನಸಾರೆ ಕೊಂಡಾಡಿದ್ದಾರೆ. ಇದಕ್ಕೆ ಸಂಬಂಧಿಸಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಶ್ವ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಓರ್ವ ಅತ್ಯುತ್ತಮ ಬ್ಯಾಟ್ಸ್ಮನ್. ನಾವಿಬ್ಬರು 2008-09 ರಿಂದ ಒಟ್ಟಿಗೆ ಕ್ರಿಕೆಟ್ ಆಡಿದ್ದೇವೆ. ಇಬ್ಬರಿಗೂ ವಯಸ್ಸಿನ ಅಂತರವಿದೆ. ಹಾಗಾಗಿ ನಾನು ಅವರನ್ನು ಕಿರಿಯ ಸಹೋದರ, ಸಹ ಆಟಗಾರ ಅಥವಾ ನೀವು ನೀಡುವ ಯಾವುದೇ ಹೆಸರನ್ನು ನಾನು ಹೇಳಬಹುದೇ ನನಗೆ ತಿಳಿದಿಲ್ಲ. ಆದರೆ, ಅಂತಿಮವಾಗಿ ನಾವಿಬ್ಬರು ಸಹ ಆಟಗಾರರಷ್ಟೇ. ಭಾರತಕ್ಕಾಗಿ ಯಾರು ಬಹಳ ಸಮಯದಿಂದ ಆಡುತ್ತಿದ್ದಾರೆ ಎಂಬುದು ನಿಮಗೆ ಗೊತ್ತಿದೆ. ವಿಶ್ವ ಕ್ರಿಕೆಟ್ ಅಂತ ಬಂದಾಗ ವಿರಾಟ್ ಕೊಹ್ಲಿ ಓರ್ವ ಅತ್ಯುತ್ತಮ ಬ್ಯಾಟ್ಸ್ಮನ್ ಎಂದು ಧೋನಿ ಮಾತನಾಡಿರುವ ವಿಡಿಯೋ ಎಕ್ಸ್ ವೇದಿಕೆಯಲ್ಲಿ ಹರಿದಾಡುತ್ತಿದೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ವಿರಾಟ್ ಕೊಹ್ಲಿಯ ಬಗ್ಗೆ ಕೇಳಿದಾಗ ಧೋನಿ ಮಾತನಾಡಿರುವ ವಿಡಿಯೋ ಇದಾಗಿದೆ. ಅಂದಹಾಗೆ ಧೋನಿ ಅಥವಾ ಕೊಹ್ಲಿ ಒಬ್ಬರನ್ನೊಬ್ಬರು ಸಾರ್ವಜನಿಕವಾಗಿ ಹೊಗಳುವುದು ಅಥವಾ ತಮ್ಮ ಬಾಂಧವ್ಯದ ಬಗ್ಗೆ ಮಾತನಾಡುವುದು ಇದೇ ಮೊದಲೇನಲ್ಲ. 2022ರ ಜನವರಿಯಲ್ಲಿ ಟೀಮ್ ಇಂಡಿಯಾದ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ನಂತರ ಧೋನಿ ಮಾತ್ರ ನನಗೆ ಕರೆ ಮಾಡಿದ್ದರು ಎಂದು ಕೊಹ್ಲಿ ಬಹಿರಂಗಪಡಿಸಿದ್ದರು.
ನಾನು ಟೆಸ್ಟ್ ನಾಯಕತ್ವವನ್ನು ತೊರೆದಾಗ, ಓರ್ವ ಆಟಗಾರ ಮಾತ್ರ ನನಗೆ ಕರೆ ಮಾಡಿ ಮಾತನಾಡಿದರು. ಅವರು ಬೇರೆ ಯಾರೂ ಅಲ್ಲ ಧೋನಿ. ಅನೇಕ ಜನರು ನನ್ನ ನಂಬರ್ ಹೊಂದಿದ್ದಾರೆ ಮತ್ತು ಟಿವಿಯಲ್ಲಿ ಸಲಹೆಗಳನ್ನು ನೀಡುವ ಅನೇಕ ಜನರಿದ್ದಾರೆ. ಆದರೆ, ಅವರಲ್ಲಿ ಯಾರೊಬ್ಬರು ಕೂಡ ನನಗೆ ಕರೆ ಮಾಡಲಿಲ್ಲ. ಯಾವುದೇ ವ್ಯಕ್ತಿಯೊಂದಿಗಿನ ಸಂಪರ್ಕವು ಸಾಕಷ್ಟು ನೈಜವಾದಾಗ ಮಾತ್ರ ಇಂತಹ ಬಾಂಧವ್ಯ ಹೊರಬರುತ್ತದೆ. ಏಕೆಂದರೆ, ಎರಡೂ ಕಡೆಗಳಲ್ಲಿ ಗೌರವದ ಭಾವನೆ ಇರುತ್ತದೆ ಎಂದು ಕೊಹ್ಲಿ ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. (ಏಜೆನ್ಸೀಸ್)