

ತಿರುವನಂತಪುರಂ: ಕೇರಳದಲ್ಲಿ ಹೇಮಾ ಸಮಿತಿಯ ವರದಿ ಬಿಡುಗಡೆಯಾದ ಬೆನ್ನಲ್ಲೇ ಮಲಯಾಳಂ ಚಿತ್ರರಂಗದ ಕರಾಳ ಮುಖ ಒಂದೊಂದಾಗಿ ಕಳಚಿಕೊಳ್ಳತ್ತಿದೆ. ಅನೇಕ ನಟಿಯರು ತಾವು ಎದುರಿಸಿದ ಕಹಿ ಘಟನೆಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸುತ್ತಿದ್ದಾರೆ. ಇದೀಗ ಮತ್ತೊಬ್ಬ ನಟಿ ಚಾರ್ಮಿಳಾ ತಾನು ಎದುರಿಸಿದ ಕರಾಳ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.
ನಟರು, ನಿರ್ದೇಶಕರು, ನಿರ್ಮಾಪಕರು ಸೇರಿ 28 ಮಂದಿ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ನಟಿ ಚಾರ್ಮಿಳಾ ಗಂಭೀರ ಆರೋಪ ಮಾಡಿದ್ದಾರೆ. ಅರ್ಜುನನ್ ಪಿಳ್ಳೈ ಅಂಚು ಮಕ್ಕಂ ಚಿತ್ರದಲ್ಲಿ ನಿರ್ಮಾಪಕ ಎಂಪಿ ಮೋಹನನ್ ಮತ್ತು ಅವರ ಸ್ನೇಹಿತರು ತನ್ನ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದರು ಎಂದು ಮಲಯಾಳಂ ಮಾಧ್ಯಮವೊಂದಕ್ಕೆ ನಟಿ ಚಾರ್ಮಿಳಾ ಹೇಳಿದ್ದಾರೆ.
1997ರಲ್ಲಿ ತೆರೆಕಂಡ ‘ಅರ್ಜುನನ್ ಪಿಳ್ಳೆಯುಂ ಅಂಚು ಮಕ್ಕಳುಂ’ ಚಿತ್ರದ ವೇಳೆ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗುವ ಪ್ರಯತ್ನ ನಡೆದಿತ್ತು. ಅತ್ಯಾಚಾರ ಯತ್ನದ ಸಂದರ್ಭದಲ್ಲಿ ನಾನು ಹೋಟೆಲ್ ರೂಮಿನಿಂದ ಹೇಗೋ ತಪ್ಪಿಸಿಕೊಂಡು ಹೊರಗೆ ಓಡಿ ಬಂದೆ. ಈ ವೇಳೆ ನನ್ನ ಸಹಾಯಕಿಯ ಸೀರೆಯನ್ನು ಹಿಡಿದು ಎಳೆಯಲು ಪ್ರಯತ್ನಿಸಿದರು. ಅಲ್ಲದೆ, ಪುರುಷ ಸಹಾಯಕನ ಮೇಲೆ ಹಲ್ಲೆ ಮಾಡಿದರು. ಈ ಅಪರಾಧ ಕೃತ್ಯಕ್ಕೆ ಹೋಟೆಲ್ ರಿಸೆಪ್ಷನಿಸ್ಟ್ ಕೂಡ ಕುಮ್ಮಕ್ಕು ನೀಡಿದರು. ಕೊನೆಗೆ ಹೋಟೆಲ್ ರೂಮ್ನಿಮದ ಹೊರಗೆ ಓಡಿ ಬಂದಾಗ ಆಟೋ ಚಾಲಕರು ನನ್ನನ್ನು ರಕ್ಷಿಸಿದರು ಎಂದು ಚಾರ್ಮಿಳಾ ತಿಳಿಸಿದರು.
ನಿರ್ಮಾಪಕ ಎಂ.ಪಿ.ಮೋಹನನ್ ಮತ್ತು ಅವರ ಸ್ನೇಹಿತರು ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದರು. ಅದರಿಂದ ನಾನು ತಪ್ಪಿಸಿಕೊಂಡೆ. ಆದರೆ, ಜೂನಿಯರ್ ಆರ್ಟಿಸ್ಟ್ಗಳಿಗೆ ಅದು ಸಾಧ್ಯವಾಗಲಿಲ್ಲ. ನಾನು ಹೊಂದಾಣಿಕೆಗೆ ಸಿದ್ಧವಿಲ್ಲದ ಕಾರಣ ನಾನು ಅನೇಕ ಮಲಯಾಳಂ ಚಿತ್ರಗಳನ್ನು ಕಳೆದುಕೊಂಡೆ ಎಂದು ನಟಿ ಚಾರ್ಮಿಳಾ ಹೇಳಿದ್ದಾರೆ.
ಹಿರಿಯ ನಿರ್ದೇಶಕ ಹರಿಹರನ್ ವಿರುದ್ಧವೂ ನಟಿ ಆರೋಪ ಮಾಡಿದ್ದಾರೆ. ನಿರ್ದೇಶಕ ಹರಿಹರನ್ ಅವರು ನಟ ವಿಷ್ಣು ಬಳಿ ನಾನು ಹೊಂದಾಣಿಕೆ ಮಾಡಿಕೊಳ್ಳುತ್ತೇನೋ ಇಲ್ಲವೋ ಎಂಬುದನ್ನು ವಿಚಾರಿಸಿದ್ದಾರೆ. ನಾನು ಇಲ್ಲ ಎಂದಾಗ ಹರಿಹರನ್ ತಮ್ಮ ಹಿಟ್ ಚಿತ್ರ ‘ಪರಿಣಯಂ’ನಿಂದ ನನ್ನನ್ನು ತೆಗೆದರು ಎಂದು ಚಾರ್ಮಿಳಾ ಹೇಳಿದ್ದಾರೆ. ಈ ವಿಚಾರವನ್ನು ನಟ ವಿಷ್ಣು ಕೂಡ ನಿಜ ಎಂದು ಒಪ್ಪಿಕೊಂಡಿದ್ದಾರೆ.
ನಿರ್ದೇಶಕ ಹರಿಹರನ್ ಅವರು ನನ್ನ ಬಳಿ ಬಂದು ಚಾರ್ಮಿಳಾ ಹೊಂದಾಣಿಕೆ ಮಾಡಿಕೊಳ್ಳುತ್ತಾರಾ ಕೇಳಿ ನೋಡಿ ಎಂದರು. ನಾನು ಚಾರ್ಮಿಳಾ ಬಳಿ ಕೇಳಿದೆ. ಅವರು ಇಲ್ಲ ಎಂದು ಹೇಳಿದರು. ಬಳಿಕ ಈ ವಿಚಾರವನ್ನು ಹರಿಹರನ್ ಅವರಿಗೆ ತಿಳಿಸಿದ್ದೆ. ಇದಾದ ನಂತರ ಚಾರ್ಮಿಳಾ ಅವರನ್ನು ಪರಿಣಯಂ ಸಿನಿಮಾದಿಂದ ಕೈಬಿಡಲಾಯಿತು ಎಂದು ನಟ ವಿಷ್ಣು, ಖಾಸಗಿ ವಾಹಿನಿಯೊಂದಕ್ಕೆ ಬಹಿರಂಗಪಡಿಸಿದ್ದಾರೆ. ಮಹಿಳಾ ಕಲಾವಿದರಿಗೆ ಕೆಲಸ ಮಾಡಲು ಇದು ಉತ್ತಮ ಸ್ಥಳವಲ್ಲ ಎಂದು ನಟಿ ಚಾರ್ಮಿಳಾ ಮಾಲಿವುಡ್ನ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ.
ಏನಿದು ಹೇಮಾ ಸಮಿತಿ ವರದಿ?
ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ರಾಷ್ಟ್ರವ್ಯಾಪಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಇಂದಿಗೂ ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಪ್ರಕರಣ ಬೆನ್ನಲ್ಲೇ ನ್ಯಾಯಾಮೂರ್ತಿ ಕೆ. ಹೇಮಾ (ನಿವೃತ್ತ) ಅವರ ನೇತೃತ್ವದಲ್ಲಿ ಮಾಜಿ ಅಧಿಕಾರಿ ಕೆಬಿ ವಲ್ಸಲಕುಮಾರಿ ಮತ್ತು ಹಿರಿಯ ನಟಿ ಶಾರದಾ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಕೇರಳ ಸರ್ಕಾರ ರಚನೆ ಮಾಡಿತ್ತು. ಈ ಸಮಿತಿ 2019ರ ಡಿಸೆಂಬರ್ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಾಲ್ಕೂವರೆ ವರ್ಷಗಳ ಬಳಿಕ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದು, ಮಲಯಾಳಂ ಚಿತ್ರರಂಗದ ಕರಾಳ ಮುಖ ಅನಾವರಣವಾಗಿದೆ. ಮಲಯಾಳಂ ಸಿನಿರಂಗದ ಒಂದೊಂದೆ ಕರಾಳ ಮುಖವಾಡ ಕಳಚಿ ಬೀಳುತ್ತಿದೆ. ಸಿನಿಮಾದಲ್ಲಿ ಮಾತ್ರವಲ್ಲದೆ ಎಲ್ಲ ಕ್ಷೇತ್ರಗಳಲ್ಲೂ ಲೈಂಗಿಕ ಶೋಷಣೆ ನಡೆಯುತ್ತಿದೆ. ಆದರೆ, ಸಿನಿಮಾರಂಗದಲ್ಲಿ ವ್ಯಾಪಕವಾಗಿದೆ ಎನ್ನುತ್ತಾರೆ ನೊಂದ ಮಹಿಳೆಯರು. ಸಿನಿಮಾದಲ್ಲಿ ಅವಕಾಶ ಬೇಕಾದರೆ ಕಾಮತೃಷೆ ತೀರಿಸಬೇಕು ಎನ್ನುತ್ತಾರೆ ನೊಂದ ಕಲಾವಿದೆಯರು. (ಏಜೆನ್ಸೀಸ್)