

ಮೈಸೂರು: ಮುಖ್ಯಮಂತ್ರಿ ಆಗುವತನಕ ನಾನು ಬೇಕಿತ್ತು. ಆದರೀಗ ಯಡಿಯೂರಪ್ಪ ಅವರಿಗೆ ನನ್ನ ದರ್ದಿಲ್ಲ (ಅವಶ್ಯಕತೆ) ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಅಸಮಾಧಾನ ಹೊರ ಹಾಕಿದರು.
ಸುತ್ತೂರಿನಲ್ಲಿ ಬುಧವಾರ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಭಾಗವಹಿಸಲು ಆಗಮಿಸಿದ್ದ ಸಂಸದರು ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮನ್ನು ಸಿಎಂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.
ಸಂಪುಟ ಪುನಾರಚನೆ, ವಿಸ್ತರಣೆ, ನಿಗಮ-ಮಂಡಳಿ ವಿಚಾರದಲ್ಲಿ ನನ್ನ ಮಾತು ಪರಿಗಣಿಸಿಲ್ಲ ಎನ್ನುವ ಕಾರಣಕ್ಕೆ ಅಸಮಾಧಾನದಿಂದಲೇ ಮಾತನಾಡಿದ ಶ್ರೀನಿವಾಸ ಪ್ರಸಾದ್, ಮುಖ್ಯಮಂತ್ರಿ ಅಗುವಾಗ ನನ್ನ ಪಾತ್ರ ಇತ್ತು. ಅಲ್ಲಿಯವರೆಗೂ ವಿಶ್ವಾಸದಿಂದಲೇ ಇದ್ದರು. ಆದರೆ, ಮುಖ್ಯಮಂತ್ರಿಯಾದ ಬಳಿಕ ಅವರಿಗೆ ನನ್ನ ದರ್ದಿಲ್ಲ. ಈಗ ಆರಾಮವಾಗಿದ್ದಾರೆ. ಇರಲಿ ಬಿಡಿ ಮುಂದೆ ನೋಡ್ಕೋತ್ತೀವಿ ಎಂದು ಅಸಹನೆ ತೋರಿಸಿದರು.
ಹಳೇ ಮೈಸೂರು ಭಾಗಕ್ಕೆ ಪ್ರಾತಿನಿಧ್ಯ ನೀಡಬೇಕೆನ್ನುವ ನಂಜನಗೂಡು ಶಾಸಕ ಹರ್ಷವರ್ಧನ್ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅದು ಅವರ ವೈಯಕ್ತಿಕ ಹೇಳಿಕೆ. ಈಗಾಗಲೇ ಹಳೇ ಮೈಸೂರು ಭಾಗದಲ್ಲಿ ಕೆ.ಆರ್.ಪೇಟೆ ನಾರಾಯಣಗೌಡ ಸಚಿವರಾಗಿದ್ದಾರೆ ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಲ್ಲಿಯವರೇ. ಈಶ್ವರಪ್ಪ, ಎಸ್.ಟಿ.ಸೋಮಶೇಖರ್ ಕೂಡ ಹಳೇ ಮೈಸೂರು ಭಾಗವನ್ನೇ ಪ್ರತಿನಿಧಿಸುತ್ತಾರೆ. ಕೇಂದ್ರ ಸಚಿವ ಸದಾನಂದಗೌಡ ಅವರು ಈ ಭಾಗಕ್ಕೆ ಬರುವುದಿಲ್ಲವೇ? ಇನ್ನೆಷ್ಟು ಜನರನ್ನು ಗುಡ್ಡೆ ಹಾಕಿಕೊಳ್ಳಲು ಸಾಧ್ಯ ಎಂದು ಅಳಿಯ ಹರ್ಷವರ್ಧನ್ ಹೇಳಿಕೆಗೂ ಅಸಮ್ಮತಿ ವ್ಯಕ್ತಪಡಿಸಿದರು.
ಶುಲ್ಕ ಕಟ್ಟದಿದ್ದರೆ ಆನ್ಲೈನ್ ತರಗತಿಯಿಂದ ವಿದ್ಯಾಥಿರ್ಗಳನ್ನು ಬ್ಲಾಕ್ ಮಾಡಲಾಗುವುದು ಎಂಬ ಖಾಸಗಿ ಶಿಕ್ಷಣ ಸಂಸ್ಥೆಗಳ ನಿರ್ಧಾರಕ್ಕೆ ಕಿಡಿಕಾರಿದ ಶ್ರೀನಿವಾಸಪ್ರಸಾದ್, ಖಾಸಗಿ ಶಾಲೆಗಳು ಸರ್ಕಾರದ ಕೈಯಲ್ಲಿವೆ. ಅವರು ಹಾಗೆ ಮಾಡುತ್ತಾರೆ, ಹೀಗೆ ಮಾಡುತ್ತಾರೆ ಎಂದು ಹೇಳಿಕೆಕೊಟ್ಟು ಕಿರುಚಾಡುವ ಬದಲು, ಏನು ಮಾಡಬೇಕು ಎನ್ನುವುದನ್ನು ಸರ್ಕಾರ ನಿರ್ಧರಿಸಬೇಕು. ಮಕ್ಕಳ ಹಿತದೃಷ್ಟಿಯಿಂದ ಆಡಳಿತ ಮಂಡಳಿಯೊಂದಿಗೆ ಸರ್ಕಾರ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕು. ತೊಂದರೆ ಕೊಡುವ ಶಾಲೆಗಳ ಆಡಳಿತ ಮಂಡಳಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದರು.
ಸಂಸದರಾಗಿ ಶ್ರೀನಿವಾಸಪ್ರಸಾದ್ ಏನೂ ಕೆಲ ಮಾಡುತ್ತಿಲ್ಲ ಎನ್ನುವ ಮಾಜಿ ಸಂಸದ ಆರ್.ಧ್ರುವನಾರಾಯಣ ಹೇಳಿಕೆಗೆ ಕೆಂಡಾಮಂಡಲರಾದ ಅವರು, ಅವನು ನನ್ನ ಉಗುರಿಗೂ ಸಮಾನನಲ್ಲ. ಎರಡು ಸಾರಿ ಸಂಸದನಾದವನ ಬಾಲಿಶ ಹೇಳಿಕೆಗೆ ನಾನು ಪ್ರತಿಕ್ರಿಯಿಸೋದಿಲ್ಲ ಎಂದರು.