

ಭೋಪಾಲ್: ಮಧ್ಯಪ್ರದೇಶದ ಛತ್ತರ್ಪುರ ಪ್ರದೇಶದಲ್ಲಿ ನೇಣು ಹಾಕಿಕೊಂಡ ಬಾಲಕನ ಶವವನ್ನು ಕೆಳಗಿಳಿಸಲು ಪೊಲೀಸರು ಬರೋಬ್ಬರಿ 15 ತಾಸು ಕಾದಿದ್ದಾರೆ....!
15 ವರ್ಷದ ಬಾಲಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಗ್ರಾಮಕ್ಕೆ ತೆರಳಿದ್ದಾರೆ. ಆದರೆ, ಆ ವೇಳೆಗಾಗಲೇ ಕತ್ತಲಾಗಿತ್ತು. ಕತ್ತಲಲ್ಲಿ ಪರಿಶೀಲನೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಪೊಲೀಸರು ಕೈಚೆಲ್ಲಿದ್ದಾರೆ.
ಬಾಲಕ ಶಿಯಾರಾಮ್ ಕೊಂದಾರ್ಗೆ ಗ್ರಾಮದ ಪಂಚಾಯತ್ನವರು 10,000 ರೂ. ದಂಡ ವಿಧಿಸಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಬಾಲಕ ಮನೆಗೆ ತೆರಳಿ ನೇಣಿಗೆ ಶರಣಾಗಿದ್ದಾನೆ. ಗ್ರಾಮಸ್ಥರು ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದಾಗ ಕೊಠಡಿಯಲ್ಲಿ ಕತ್ತಲಿತ್ತು. ಅಲ್ಲಿ ವಿದ್ಯುತ್ ಕೂಡ ಇರಲಿಲ್ಲ. ಹೀಗಾಗಿ ಕೊಠಡಿಗೆ ಬೀಗ ಹಾಕಲಾಗಿತ್ತು. ಯಾರೂ ಸಾಕ್ಷ್ಯಾಧಾರಗಳನ್ನು ನಾಶಪಡಿಸದಂತೆ ಪೊಲೀಸರನ್ನು ಕಾವಲಿರಿಸಲಾಗಿತ್ತು ಎಂದು ಇನ್ಸ್ಪೆಕ್ಟರ್ ಹೇಳಿದ್ದಾರೆ.
ನನ್ನ ಮಗನಿಗೆ ಮೇಲ್ಜಾತಿಯ ಜನರೆಲ್ಲ ಥಳಿಸಿದ್ದಾರೆ. ಆತ, ಬದುಕಿದ್ದಾನೋ, ಸತ್ತಿದ್ದಾನೋ ಎಂಬುದನ್ನು ಪೊಲೀಸರು ನೋಡಲಿಲ್ಲ, ರಾತ್ರಿಯಿಡೀ ದೇಹ ನೇತಾಡುತ್ತಿತ್ತು ಎಂದು ಬಾಲಕನ ತಂದೆ ಅಳಲು ತೋಡಿಕೊಂಡಿದ್ದಾರೆ.