

Food : ಮಳೆಯ ಸಮಯದಲ್ಲಿ ಬಿಸಿ ಬಿಸಿ ಖಾದ್ಯಗಳನ್ನು ತಿನ್ನಬೇಕೆಂಬ ಹಂಬಲ ಆಹಾರ ಪ್ರಿಯರಿಗೆ ಹೆಚ್ಚಾಗಿರುತ್ತದೆ. ಅದೇ ರೀತಿಯಲ್ಲಿ ಮಲೆನಾಡಿನ ಶೈಲಿಗಳಲ್ಲೊಂದಾದ ಪತ್ರೊಡೆಯು ವಿಶಿಷ್ಟ ಸ್ಥಾನವನ್ನು ಪಡೆದಿದೆ. ಅಂದಹಾಗೆ ನಾವಿಂದು ಅತೀ ಸುಲಭ ರೀತಿಯಲ್ಲಿ ಪತ್ರೊಡೆ ಮಾಡುವ ವಿಧಾನವನ್ನು ತೋರಿಸಿಕೊಡಲಿದ್ದೇವೆ.
* ಕೆಸುವಿನ ಸೊಪ್ಪು
* 2 ಕಪ್ ನೆನಸಿದ ಅಕ್ಕಿ
* 3 ನೆನಸಿದ ಕಪ್ ಹೆಸರುಬೇಳೆ
* 1 ಚಮಚ ನೆನಸಿದ ಮೆಂತೆ ಕಾಳು
* 1/2 ಕಪ್ ಕೊಬ್ಬರಿ
* ಸ್ವಲ್ಪ ಬೆಲ್ಲ
* 1 ಚಮಚ ನಿಂಬೆ ರಸ
* 5 ಒಣ ಮೆಣಸಿನಕಾಯಿ
* 1 ಚಮಚ ಕೊತ್ತುಂಬರಿ
* 1 ಚಮಚ ಜೀರಿಗೆ
* 1/4 ಚಮಚ ಅರಿಶಿಣ
* ಸ್ವಲ್ಪ ಇಂಗು
* ರುಚಿಗೆ ತಕ್ಕಷ್ಟು ಉಪ್ಪು
ಮೊದಲು ಒಂದು ಮಿಕ್ಸಿ ಜಾರ್ಗೆ ಎಲ್ಲಾ ಪದಾರ್ಥಗಳನ್ನು ಹಾಕಿ ಅದಕ್ಕೆ ಸ್ವಲ್ಪ ನೀರು ಬೆರಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಕೆಸುವಿನ ಸೊಪ್ಪನ್ನು ಚೆನ್ನಾಗಿ ತೊಳೆದು ಅದರಲ್ಲಿರುವ ದಂಟನ್ನು ಕತ್ತರಿಸಬೇಕು. ಈಗ ಈ ಮಿಶ್ರಣವನ್ನು ಕೆಸುವಿನ ಎಲೆಯ ಹಿಂಬದಿ ಹಚ್ಚಿ ಒಂದರ ಮೇಲೊಂದರಂತೆ 5 ಎಲೆಗಳನ್ನು ಜೋಡಿಸಿ, ಮಡಿಸಬೇಕು. ಸಂಪೂರ್ಣವಾಗಿ ಹಿಟ್ಟನ್ನು ಆ ಎಲೆಯ ಪೂರ್ತಿ ಹಚ್ಚಬೇಕು. ನಂತರ ಒಂದು ಇಡ್ಲಿ ಪಾತ್ರೆಯಲ್ಲಿ ನೀರನ್ನು ಕುದಿಸಿ, ಆ ಪಾತ್ರೆಯೊಳಗೆ ಈ ಮಿಶ್ರಣವನ್ನು 15 ನಿಮಿಷಗಳ ಕಾಲ ಬೇಯಿಸಬೇಕು. ಅದು ಸಂಪೂರ್ಣ ಬೆಂದ ನಂತರ ಅದನ್ನು ತುಂಡು ತುಂಡಾಗಿ ಕತ್ತರಿಸಿ ಇಟ್ಟುಕೊಳ್ಳಬೇಕು. ನಂತರ ಒಂದು ತವದ ಮೇಲೆ ಸ್ವಲ್ಪ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಈ ತುಂಡಸಿದ ಪತ್ರೊಡೆಯನ್ನು ಹುರಿಯಬೇಕು. ಬಳಿಕ ಸ್ವಲ್ಪ ತಣ್ಣಗಾದ ನಂತರ ಸೇವಿಸಬೇಕು. (ಏಜೆನ್ಸೀಸ್)