

ಮುಂಬೈ: ವರ್ಷ ಮುಗಿಯುತ್ತಾ ಬರುತ್ತಿದ್ದಂತೆಯೇ, ಕ್ರಮೇಣ ಚಿತ್ರರಂಗದ ಮತ್ತು ಪ್ರೇಕ್ಷಕರ ಚಿತ್ತ ಮುಂದಿನ ವರ್ಷದ ನೆಟ್ಟಿದೆ. ಈ ವರ್ಷವೇನೋ ಮುಗಿಯಿತು. ಮುಂದಿನ ವರ್ಷ ಯಾವೆಲ್ಲ ಚಿತ್ರಗಳು ಬರುತ್ತಿವೆ, ಯಾವೆಲ್ಲ ಸ್ಟಾರ್ಗಳು ದೊಡ್ಡ ಮಟ್ಟದಲ್ಲಿ ಮಿಂಚುವುದಕ್ಕೆ ರೆಡಿಯಾಗಿದ್ದಾರೆ, ಯಾವೆಲ್ಲ ಚಿತ್ರಗಳು ಬಾಕ್ಸ್-ಆಫೀಸ್ ಉಡೀಸ್ ಮಾಡುವುದಕ್ಕೆ ತಯಾರಿ ನಡೆಸಿವೆ ಎಂಬಂತ ವಿಷಯಗಳ ಬಗ್ಗೆ ಎಲ್ಲರೂ ತಲೆ ಕೆಡಿಸಿಕೊಂಡಿದ್ದಾರೆ.
ಈ ವರ್ಷ 'RRR', 'ಕೆಜಿಎಫ್ 2', 'ರಾಧೇ ಶ್ಯಾಮ್'ನಂತೆ ಮುಂದಿನ ವರ್ಷವೂ ಒಂದಿಷ್ಟು ನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ದೊಡ್ಡದೊಡ್ಡ ಸ್ಟಾರ್ಗಳು ತಮ್ಮ ಚಿತ್ರಗಳೊಂದಿಗೆ ಬಾಕ್ಸ್ ಆಫೀಸ್ನಲ್ಲಿ ಪೈಪೋಟಿ ಮಾಡುವುದಕ್ಕೆ ತಯಾರಿ ನಡೆಸಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ತಮಿಳಿನಲ್ಲಿ ಒಂದು ದೊಡ್ಡ ಪೈಪೋಟಿ ನಡೆಯಲಿದೆ. ವಿಜಯ್ ಅಭಿನಯದ 'ವಾರಿಸು' ಮತ್ತು ಅಜಿತ್ ಅಭಿನಯದ 'ತುನಿವು' ಚಿತ್ರಗಳು ಪೈಪೋಟಿ ನಡೆಸುವುದಕ್ಕೆ ತಯಾರಿ ನಡೆಸಿದ್ದು, ಇದರಲ್ಲಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಇದಲ್ಲದೆ, ಇನ್ನೊಂದಿಷ್ಟು ಚಿತ್ರಗಳು ನಿರೀಕ್ಷಿತ ಚಿತ್ರಗಳಿವೆ. ಪ್ರಮುಖವಾಗಿ ಮುಂದಿನ ವರ್ಷ ಗಣರಾಜ್ಯೋತ್ಸವ ಸಂದರ್ಭದಲ್ಲಿ ಬಿಡುಗಡೆಯಾಗುವುದಕ್ಕೆ ಶಾರೂಖ್ ಖಾನ್ ಅಭಿನಯದ 'ಪಠಾಣ್' ಚಿತ್ರ ತಯಾರಿ ನಡೆಸಿದೆ. ಶಾರೂಖ್ ಖಾನ್ ಪೂರ್ಣಪ್ರಮಾಣದ ನಾಯಕನಾಗಿ ನಟಿಸಿರುವ ಚಿತ್ರವೊಂದು ಬಿಡುಗಡೆಯಾಗಿ ಕೆಲವು ವರ್ಷಗಳೇ ಆಗಿವೆ. ಹಾಗಾಗಿ, 'ಪಠಾಣ್' ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿದೆ.
'ಪಠಾಣ್' ಅಲ್ಲದೆ, ಕಮಲ್ ಹಾಸನ್ ಅಭಿನಯದ 'ಇಂಡಿಯನ್ 2', ಸಲ್ಮಾನ್ ಖಾನ್ ಅಭಿನಯದ 'ಕಿಸೀ ಕಾ ಭಾಯ್ ಕಿಸೀ ಕೀ ಜಾನ್', ರಣವೀರ್ ಸಿಂಗ್ ಅಭಿನಯದ 'ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ', ಪ್ರಭಾಸ್ ಅಭಿನಯದ 'ಆದಿಪುರಿಷ್', ರಜನಿಕಾಂತ್ ಅಭಿನಯದ 'ಜೈಲರ್', ಶಾರೂಖ್ ಖಾನ್ ಅಭಿನಯದ 'ಜವಾನ್', ರಣಬೀರ್ ಕಪೂರ್ ಅಭಿನಯದ 'ತೂ ಝೂಟಿ ಮೇ ಮಕ್ಕಾರ್', ಪ್ರಭಾಸ್ ಅಭಿನಯದ 'ಸಲಾರ್' ಮತ್ತು ಶಾರೂಖ್ ಖಾನ್ ಅಭಿನಯದ 'ಡಂಕಿ' ಚಿತ್ರಗಳು ಬಿಡುಗಡೆಯಾಗುತ್ತಿವೆ.