VIDEO: ಇಂಗು ತಿಂದ ಮಂಗ ಹಳೆಯ ಮಾತಾಯಿತು- ಈಗೇನು ನೋಡಿ..

monkeyweb
Published on

ಮೀರತ್‌ (ಉತ್ತರ ಪ್ರದೇಶ): ಕರೊನಾದಿಂದ ಮೊದಲೇ ತತ್ತರಿಸಿಹೋಗಿರುವ ಉತ್ತರ ಪ್ರದೇಶದಲ್ಲಿ ಈಗ ಮಂಗನ ಹಾವಳಿಯೂ ಹೆಚ್ಚಾಗಿಬಿಟ್ಟಿದೆ. ಇಲ್ಲಿಯ ಮೀರತ್​ನಲ್ಲಿ ಕರೊನಾ ಸೋಂಕು ಶಂಕಿತರಿಂದ ಸಂಗ್ರಹಿಸಿದ್ದ ಗಂಟಲು ದ್ರವದ ಸ್ಯಾಂಪಲ್​ಗಳನ್ನು ಕೋತಿಗಳು ಎತ್ತಿಕೊಂಡು ಹೋಗಿಬಿಟ್ಟಿವೆ!

ಮೀರತ್‌ ಮೆಡಿಕಲ್‌ ಕಾಲೇಜಿನಲ್ಲಿ ಸ್ಯಾಂಪಲ್​ಗಳನ್ನು ಕೊಂಡೊಯ್ಯುತ್ತಿದ್ದ ಲ್ಯಾಬ್ ಟೆಕ್ನಿಷಿಯನ್ ಮೇಲೆ ಏಕಾಏಕಿ ದಾಳಿ ಮಾಡಿರುವ ಮಂಗಗಳು ಈ ಕೃತ್ಯ ಎಸಗಿವೆ! ಇವರು ಮೂವರು ಕರೊನಾ ಶಂಕಿತರ ಸ್ಯಾಂಪಲ್​ಗಳನ್ನು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದರು. ಆದರೆ ಮಂಗಗಳ ಹಿಂಡು ಸ್ಯಾಂಪಲ್‌‌ಗಳನ್ನ ಎಳೆದುಕೊಂಡು ಹೋಗಿವೆ.

ಸ್ಯಾಂಪಲ್​ಗಳು ಹೋಗಿರುವುದು ಒಂದೆಡೆ ಭೀತಿ ತಂದರೆ, ಆ ಸ್ಯಾಂಪಲ್​ಗಳನ್ನು ಸಂಗ್ರಹಿಸಿರುವ ಶಂಕಿತರದಲ್ಲಿ ಸೋಂಕು ಇದ್ದರೆ ಈ ಮಂಗನಿಂದಾಗಿ ಎಲ್ಲಿ ಅದು ಹರಡುವುದೋ ಎಂಬ ಭಯ ಇನ್ನೊಂದೆಡೆ ಶುರುವಾಗಿದೆ. ಅದು ದ್ರವದ ರೂಪದಲ್ಲಿ ಇರುವ ಹಿನ್ನೆಲೆಯಲ್ಲಿ, ಮಂಗಗಳು ಅದನ್ನು ಎಲ್ಲಿಯಾದರೆ ಚೆಲ್ಲಿದರೆ ಸೋಂಕು ಹರಡಬಹುದು ಎಂಬ ಭಯ ಕಾಡತೊಡಗಿದೆ.

ಸ್ಯಾಂಪಲ್​ಗಳನ್ನು ಕೊಂಡೊಯ್ದ ಮಂಗಗಳು ಮರದ ಮೇಲೆ ಕುಳಿತು ಕಿಟ್‌ ಜಗಿಯುತ್ತಿದ್ದು, ಸೋಂಕಿನ ಭೀತಿ ಇನ್ನಷ್ಟು ಹೆಚ್ಚಾಗಿದೆ. ಇದರ ವಿಡಿಯೋಯನ್ನು ಸ್ಥಳೀಯರು ಮಾಡಿದ್ದು ಅದೀಗ ಭಾರಿ ವೈರಲ್​ ಆಗುತ್ತಿದ್ದಂತೆಯೇ ಸ್ಥಳೀಯ ಜನರನ್ನು ಇನ್ನಷ್ಟು ಭೀತಿಗೆ ಸಿಲುಕಿಸಿದೆ.

ಮಂಗಗಳ ಹಾವಳಿ ಇಲ್ಲಿ ಹೆಚ್ಚಾಗಿದ್ದು, ಹಿಂದೆ ಕೂಡ ನಮಗೆ ಸಾಕಷ್ಟು ತೊಂದರೆ ನೀಡಿವೆ ಎಂದಿದ್ದಾರೆ ವೈದ್ಯಕೀಯ ಸಿಬ್ಬಂದಿ. ಇನ್ನು ಜಿಲ್ಲಾ ಆರೋಗ್ಯ ಇಲಾಖೆ ಈ ಸಂಬಂಧ ತನಿಖೆಗೆ ಆದೇಶಿಸಿದ್ದು, ಕೋತಿಗಳನ್ನ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net