

Mohammed Shami : ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರ ವಿರುದ್ಧ ಮಾಜಿ ಪತ್ನಿ ಹಸಿನಾ ಜಹಾನ್ ಮತ್ತೊಮ್ಮೆ ಗಂಭೀರ ಆರೋಪ ಮಾಡಿದ್ದಾರೆ. ಶಮಿ ತಮ್ಮ ಮಗಳು ಆರ್ಯಾಳ ಬಗ್ಗೆ ಸ್ವಲ್ಪವೂ ಗಮನ ಹರಿಸುತ್ತಿಲ್ಲ, ಅದರ ಬದಲಿಗೆ ತನ್ನ ಗೆಳತಿಯ ಮಕ್ಕಳು ಮತ್ತು ಕುಟುಂಬಕ್ಕೆ ಮಾತ್ರ ಆದ್ಯತೆ ನೀಡುತ್ತಾರೆ ಎಂದು ಹಸಿನಾ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಆರೋಪಿಸಿದ್ದಾರೆ.
ಕೋಲ್ಕತ ಹೈಕೋರ್ಟ್ ಇತ್ತೀಚೆಗೆ ಒಂದು ಆದೇಶ ಹೊರಡಿಸಿತ್ತು. ಅದರ ಪ್ರಕಾರ, ಶಮಿ ಅವರು ಹಸಿನಾ ಮತ್ತು ಮಗಳು ಆರ್ಯಾಳ ಜೀವನ ವೆಚ್ಚಕ್ಕಾಗಿ ತಿಂಗಳಿಗೆ 4 ಲಕ್ಷ ರೂ.ಗಳನ್ನು ಪಾವತಿಸಬೇಕು. ಇದರಲ್ಲಿ 2.5 ಲಕ್ಷ ರೂ.ಗಳನ್ನು ಅವರ ಮಗಳ ಶಿಕ್ಷಣ ಮತ್ತು ವೆಚ್ಚಗಳಿಗಾಗಿ ಬಳಸಬೇಕೆಂದು ನ್ಯಾಯಾಲಯ ಹೇಳಿದೆ.
ತನ್ನ ಮಗಳು ಆರ್ಯಾ ಪ್ರತಿಷ್ಠಿತ ಶಾಲೆಯಲ್ಲಿ ಪ್ರವೇಶ ಪಡೆಯುವ ಸಂದರ್ಭದಲ್ಲಿ ಕೆಲವು ಶತ್ರುಗಳು ಅದನ್ನು ತಡೆಯಲು ಪ್ರಯತ್ನಿಸಿದರು ಎಂದು ಹಸಿನಾ ಆರೋಪಿಸಿದ್ದಾರೆ. ತನ್ನ ಮಗಳು ಉತ್ತಮ ಶಾಲೆಯಲ್ಲಿ ಓದುತ್ತಿರುವುದು ಶತ್ರುಗಳಿಗೆ ಇಷ್ಟವಿಲ್ಲ. ಆದರೆ, ಅಲ್ಲಾಹನು ಮಧ್ಯಪ್ರವೇಶಿಸಿ ಶತ್ರುಗಳ ಯೋಜನೆಗಳನ್ನು ಹಾಳುಮಾಡಿದ್ದಾರೆ ಎಂದು ಹಸಿನಾ ಹೇಳಿದ್ದಾರೆ.
ತನ್ನ ಮಾಜಿ ಪತಿ ಶಮಿ ಕೋಟ್ಯಾಧಿಪತಿಯಾಗಿದ್ದರೂ, ಆತ ನಮ್ಮ ಜೀವನದ ಜೊತೆ ಆಟವಾಡುತ್ತಿದ್ದಾನೆ. ಅನೇಕ ಮಹಿಳೆಯರೊಂದಿಗೆ ಸಂಬಂಧ ಹೊಂದಿರುವ ಶಮಿ ಓರ್ವ ಹೆಣ್ಣುಬಾಕ. ಆತ ತನ್ನ ಸ್ವಂತ ಮಗಳನ್ನು ಹಿಂತಿರುಗಿ ನೋಡುತ್ತಿಲ್ಲ. ಬದಲಿಗೆ ತನ್ನ ಗೆಳತಿ ಮತ್ತು ಆಕೆಯ ಮಗಳಿಗೆ ಬಿಸಿನೆಸ್ ಕ್ಲಾಸ್ ಟಿಕೆಟ್ಗಳನ್ನು ಖರೀದಿಸುವ ಮೂಲಕ ತನ್ನ ಸಂಪತ್ತನ್ನು ತೋರಿಸುತ್ತಿದ್ದಾನೆ ಎಂದು ಹಸಿನಾ ಜಹಾನ್ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಈ ವಿಚಾರವಾಗಿ ಶಮಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಂದಹಾಗೆ ಮೊಹಮ್ಮದ್ ಶಮಿ 2014ರ ಜೂನ್ 6ರಂದು ಹಸಿನ್ ಜಹಾನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ, 4 ವರ್ಷಗಳ ನಂತರ ಶಮಿಗೆ ಪತ್ನಿ ಡಿವೋರ್ಸ್ ನೀಡಿದ್ದಾರೆ. ಜಹಾನ್ ಅವರು ಕೆಲವು ವರ್ಷಗಳ ಹಿಂದೆ ಶಮಿ ವಿರುದ್ಧ ವ್ಯಭಿಚಾರ, ಮ್ಯಾಚ್ ಫಿಕ್ಸಿಂಗ್ ಮತ್ತು ಕೌಟುಂಬಿಕ ದೌರ್ಜನ್ಯ ಸೇರಿದಂತೆ ಸರಣಿ ಆರೋಪಗಳನ್ನು ಮಾಡಿದ್ದರು. ಆರೋಪ ಕೇಳಿಬಂದ ಬೆನ್ನಲ್ಲೇ ಬಿಸಿಸಿಐ ಶಮಿ ಒಪ್ಪಂದವನ್ನು ತಡೆಹಿಡಿದಿತ್ತು. ಆದಾಗ್ಯೂ, ತನಿಖೆಯ ನಂತರ ಬಿಸಿಸಿಐ ಶಮಿ ವಿರುದ್ಧದ ಮ್ಯಾಚ್ ಫಿಕ್ಸಿಂಗ್ ಆರೋಪ ಸುಳ್ಳು ಎಂದು ಹೇಳಿ, ಸ್ವತಃ ಒಪ್ಪಂದಕ್ಕೆ ಮರಳಿತು. ಅನೇಕ ವರ್ಷಗಳಿಂದ ಇಬ್ಬರ ವೈವಾಹಿಕ ಜೀವನದ ಸಂಘರ್ಷ ಮುಂದುವರಿದುಕೊಂಡು ಬರುತ್ತಿದೆ.
ಶಮಿ ವಿರುದ್ಧ ಜಹಾನ್, ಜಾಧವಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಮಿ, ಅನೇಕ ಮಹಿಳೆಯ ಜತೆ ಚಾಟಿಂಗ್ ಮಾಡಿದ್ದಾರೆ ಎಂದು ಆರೋಪ ಮಾಡಿರುವ ಜಹಾನ್, ಮಾಜಿ ಪತಿಯ ಕಾಲ್ ರೆಕಾರ್ಡಿಂಗ್ಸ್ ಸಹ ಶೇರ್ ಮಾಡಿದ್ದಾರೆ. 2018ರಿಂದ ಶಮಿ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, 2020ರವರೆಗೂ ತುಂಬಾ ಚರ್ಚೆಯಾಯಿತು. ಈ ನಡುವೆ ಶಮಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಎಲ್ಲೂ ಕುಗ್ಗದ ಶಮಿ ತಮ್ಮ ಪ್ರಯತ್ನದಿಂದ ಕ್ರಿಕೆಟ್ನಲ್ಲಿ ಮತ್ತೆ ಪುಟಿದೆದ್ದಿದ್ದು, ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ಸ್ಟಾರ್ ಬೌಲರ್ ಎನಿಸಿಕೊಂಡಿದ್ದಾರೆ. (ಏಜೆನ್ಸೀಸ್)