ಮಾಂಸ ದಂಧೆಗೆ ಯುವತಿಯನ್ನು ಮಾರಾಟ ಮಾಡಲು ಯತ್ನ: ಖ್ಯಾತ ನಟಿ ಮಿನು ಅರೆಸ್ಟ್​! Actress Minu Muneer

Actress Minu Muneer
Published on

Actress Minu Muneer : ಸೆಕ್ಸ್​ ಮಾಫಿಯಾಗೆ ತನ್ನ ಸಂಬಂಧಿ ಯುವತಿಯನ್ನು ಮಾರಾಟ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಮಿನು ಮುನೀರ್ ಅವರನ್ನು ತಮಿಳುನಾಡು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚೆನ್ನೈನ ತಿರುಮಂಗಲಂ ಪೊಲೀಸರು ಮಿನು ಅವರನ್ನು ಕೇರಳದ ಅಲುವಾದಲ್ಲಿ ತಮ್ಮ ವಶಕ್ಕೆ ಪಡೆದಿದ್ದು, ಚೆನ್ನೈಗೆ ಕರೆತರುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಘಟನೆ 2014 ರಲ್ಲಿ ನಡೆದಿತ್ತು. ಸಿನಿಮಾದಲ್ಲಿ ಅವಕಾಶ ಕೊಡಿಸುವ ನೆಪದಲ್ಲಿ ತಮ್ಮ ಸಂಬಂಧಿ ಯುವತಿಯನ್ನು ತಮಿಳುನಾಡಿಗೆ ಕರೆತಂದು ಸೆಕ್ಸ್​ ಮಾಫಿಯಾಗೆ ಮಾರಾಟ ಮಾಡಲು ಮಿನು ಪ್ರಯತ್ನಿಸಿದ್ದರು. ಈ ಸಂಬಂಧ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಇದೀಗ ನಟಿಯನ್ನು ಬಂಧಿಸಿದ್ದಾರೆ.

ಇನ್ನು ಖ್ಯಾತ ನಿರ್ದೇಶಕ ಮತ್ತು ನಟ ಬಾಲಚಂದ್ರ ಮೆನನ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸಿದ ಪ್ರಕರಣದಲ್ಲಿ ಮಿನು ಮುನೀರ್ ಅವರನ್ನು ಕಳೆದ ತಿಂಗಳು ಕೊಚ್ಚಿ ಇನ್ಫೋಪಾರ್ಕ್ ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. 'ದೇ ಇಂಗೊಟ್ಟು ನೋಕಿಯಾಯೆ' ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಿರ್ದೇಶಕ ಬಾಲಚಂದ್ರ ಮೆನನ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಿನು ಸಾಮಾಜಿಕ ಜಾಲತಾಣ ಮೂಲಕ ಆರೋಪಿಸಿದ್ದರು.

ಮಿನು ಆರೋಪದ ಮೇಲೆ ಬಾಲಚಂದ್ರ ಮೆನನ್ ವಿರುದ್ಧವೂ ಪೊಲೀಸರಿಗೆ ದೂರು ದಾಖಲಾಗಿತ್ತು. ಬಳಿಕ ಬಾಲಚಂದ್ರ ಅವರು ನ್ಯಾಯಾಲಯದಲ್ಲಿ ಮಾನಹಾನಿ ದೂರು ದಾಖಲಿಸಿದ್ದರು. ಈ ವೇಳೆ ಮಿನು ನಿರೀಕ್ಷಣಾ ಜಾಮೀನು ಸಲ್ಲಿಸಿದ್ದರು. ಜಾಮೀನು ತಿರಸ್ಕೃತಗೊಂಡ ನಂತರ ಆಕೆಯನ್ನು ಬಂಧಿಸಲಾಗಿತ್ತು. ಬಳಿಕ ಇಬ್ಬರು ಜಾಮೀನುದಾರರ ಮೇಲೆ ಅವರನ್ನು ಬಿಡುಗಡೆ ಮಾಡಲಾಯಿತು. ಬಾಲಚಂದ್ರ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ತಿರುಮಂಗಲಂ ಪೊಲೀಸರು ನಟಿ ಮಿನು ಅವರನ್ನು ವಶಕ್ಕೆ ಪಡೆದಿದ್ದಾರೆ.

ಅಂದಹಾಗೆ, ಸಿನಿಮಾ ರಂಗದಲ್ಲಿನ ಸಮಸ್ಯೆಗಳನ್ನು ಅಧ್ಯಯನ ಮಾಡಲು ಕೇರಳ ಸರ್ಕಾರ ಹೇಮಾ ಸಮಿತಿಯನ್ನು ನೇಮಿಸಿತ್ತು. ಅದರ ವರದಿ ಬಹಿರಂಗವಾದಾಗ, ನಟಿ ಮಿನು ಮುನೀರ್ ಮಾಧ್ಯಮಗಳ ಮುಂದೆ ಬಂದು ಕೆಲವು ನಟರ ವಿರುದ್ಧ ಲೈಂಗಿಕ ಆರೋಪಗಳನ್ನು ಮಾಡಿದರು. ಮಿನು ತನ್ನ ಫೇಸ್‌ಬುಕ್ ಪುಟದ ಮೂಲಕ ಜಯಸೂರ್ಯ, ಮುಖೇಶ್, ಮಣಿಯನ್ ಪಿಳ್ಳೈ ರಾಜು, ಎಡವಲೆ ಬಾಬು, ಅಡ್ವ. ಚಂದ್ರಶೇಖರನ್, ಪ್ರೊಡಕ್ಷನ್ ಕಂಟ್ರೋಲರ್ ನೋಬಲ್ ಮತ್ತು ವಿಚು ವಿರುದ್ಧ ಆರೋಪಗಳನ್ನು ಮಾಡಿದ್ದರು. ಈ ವೇಳೆ ಮಿನು ಆರೋಪ ಭಾರೀ ಚರ್ಚೆ ಹುಟ್ಟು ಹಾಕಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net