ಜಾಮೀನು ರದ್ದು ಮತ್ತೆ ಜೈಲುಪಾಲು: ನಟ ದರ್ಶನ್​ ಮುಂದಿರುವ ದಾರಿಗಳೇನು? ಮುಂದೇನಾಗಲಿದೆ? Darshan Arrest

Darshan Arrest
Published on

Darshan Arrest : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿದ ಬೆನ್ನಲ್ಲೇ ಎ2 ಆರೋಪಿ ನಟ ದರ್ಶನ್​ರನ್ನು ಪೊಲೀಸರು ಬಂಧಿಸಿದ್ದಾರೆ.​ ಅಲ್ಲದೆ, ಎ1 ಆರೋಪಿ ಹಾಗೂ ದರ್ಶನ್​ ಗೆಳತಿ ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳನ್ನು ಕೂಡ ಬಂಧನ ಮಾಡಲಾಗಿದೆ. ಈ ಒಂದು ಸುದ್ದಿ ದರ್ಶನ್​ ಅಭಿಮಾನಿಗಳಿಗೆ ಬರಸಿಡಿಲು ಬಡಿದಂತಾಗಿದೆ. ದರ್ಶನ್​ ಅವರ ಮುಂದಿನ ಆಯ್ಕೆ ಏನು? ಮುಂದೇನಾಗುತ್ತೆ? ಶಿಕ್ಷೆಯಾಗುತ್ತಾ? ಯಾವಾಗ ಬಿಡುಗಡೆಯಾಗುತ್ತಾರೆ ಎಂಬಿತ್ಯಾದಿ ಪ್ರಶ್ನೆಗಳಿವೆ. ಆ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಸುಪ್ರೀಂ ಕೋರ್ಟ್ ಇಂದು (ಆಗಸ್ಟ್ 14) ದರ್ಶನ್ ಸೇರಿದಂತೆ 7 ಆರೋಪಿಗಳ ಜಾಮೀನನ್ನು ರದ್ದುಗೊಳಿಸಿದೆ. ಇದರಿಂದಾಗಿ ದರ್ಶನ್ ಮತ್ತೆ ಜೈಲಿಗೆ ಹೋಗಬೇಕಾದ ಸ್ಥಿತಿ ಎದುರಾಗಿದೆ. ಈ ಆದೇಶದ ಪರಿಣಾಮವಾಗಿ, ದರ್ಶನ್ ಅವರಿಗೆ ಮುಂದಿನ 6 ತಿಂಗಳ ಕಾಲ ಜೈಲು ಶಿಕ್ಷೆ ಖಚಿತವಾಗಿದೆ ಎಂದು ಕೆಲ ವರದಿಗಳು ತಿಳಿಸಿವೆ.

ದರ್ಶನ್ ಮತ್ತು ಇತರ ಆರೋಪಿಗಳು ಕಾನೂನು ಪಂಡಿತರ ಸಲಹೆಯೊಂದಿಗೆ ಮತ್ತೆ ಜಾಮೀನು ಅರ್ಜಿ ಸಲ್ಲಿಸಬಹುದು. ಆದರೆ, ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದರಿಂದ, ತಕ್ಷಣದಲ್ಲಿ ಜಾಮೀನು ಸಿಗುವ ಸಾಧ್ಯತೆ ಕಡಿಮೆ. ಕನಿಷ್ಠ 3-6 ತಿಂಗಳವರೆಗೆ ಜಾಮೀನು ಅರ್ಜಿ ಸಲ್ಲಿಕೆ ಕಷ್ಟಕರ ಎಂದು ಕಾನೂನು ತಜ್ಞರು ಹೇಳಿದ್ದಾರೆ. ಏಕೆಂದರೆ ಪ್ರಕರಣದ ಗಂಭೀರತೆ ಮತ್ತು ದರ್ಶನ್‌ರ ಪ್ರಭಾವಿ ಸ್ಥಾನಮಾನದಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂಬ ಆತಂಕವಿದೆ.

ಪ್ರಕರಣವು ಈಗ ವಿಚಾರಣಾ ಹಂತದಲ್ಲಿದೆ. ಚಾರ್ಜ್‌ಶೀಟ್ ಈಗಾಗಲೇ ಸಲ್ಲಿಕೆಯಾಗಿದ್ದು, ಕೆಳಗಿನ ನ್ಯಾಯಾಲಯದಲ್ಲಿ ದೋಷಾರೋಪಣೆ (ಚಾರ್ಜ್ ಫ್ರೇಮಿಂಗ್) ಪ್ರಕ್ರಿಯೆ ನಡೆಯಲಿದೆ. ಈ ವಿಚಾರಣೆಯಲ್ಲಿ ದರ್ಶನ್‌ರ ಪಾತ್ರವನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಬೇಕಾಗಿದೆ. ವಿಚಾರಣೆ ಪೂರ್ಣಗೊಳ್ಳುವವರೆಗೆ (ಸಾಮಾನ್ಯವಾಗಿ 6 ತಿಂಗಳಿಗಿಂತ ಹೆಚ್ಚು ಕಾಲ) ಆರೋಪಿಗಳು ಜೈಲಿನಲ್ಲಿರಬೇಕಾಗಬಹುದು. ವಿಚಾರಣೆಯ ಫಲಿತಾಂಶವು ದರ್ಶನ್‌ರ ಭವಿಷ್ಯವನ್ನು ನಿರ್ಧರಿಸುತ್ತದೆ. ನಿರಪರಾಧಿತ್ವ ಸಾಬೀತಾದರೆ ಬಿಡುಗಡೆ, ದೋಷಿಯೆಂದು ತೀರ್ಪಾದರೆ ಶಿಕ್ಷೆಯಾಗುತ್ತದೆ.

6 ತಿಂಗಳ ಬಳಿಕ ದರ್ಶನ್ ಅವರು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠಕ್ಕೆ ಜಾಮೀನು ಅರ್ಜಿಯನ್ನು ಸಲ್ಲಿಸಬಹುದು. ಆದರೆ, ಇಂತಹ ಅರ್ಜಿಗಳು ಅಡ್ಮಿಟ್ ಆಗುವ ಸಾಧ್ಯತೆ ಕಡಿಮೆ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ. ಏಕೆಂದರೆ ಇದು ಅಪರೂಪದ ಸಂದರ್ಭಗಳಲ್ಲಿ ಮಾತ್ರ ಸಾಧ್ಯ. ಇನ್ನು ಆರು ತಿಂಗಳ ಬಳಿಕ, ಬದಲಾದ ಸನ್ನಿವೇಶಗಳನ್ನು ಆಧರಿಸಿ ಜಾಮೀನು ಕೋರಬಹುದು, ಉದಾಹರಣೆಗೆ ಆರೋಗ್ಯ ಸಮಸ್ಯೆಗಳು ಅಥವಾ ತನಿಖೆಯಲ್ಲಿನ ಹೊಸ ಬೆಳವಣಿಗೆಗಳ ಮೇಲೆ ಜಾಮೀನಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅಂದಹಾಗೆ, ಕಳೆದ 7 ತಿಂಗಳಿಂದ ಜಾಮೀನಿನ ಮೇಲೆ ಹೊರಗಡೆ ಇದ್ದ ದರ್ಶನ್​ ಮತ್ತೆ ಜೈಲು ಸೇರಬೇಕಾದ ಸನ್ನಿವೇಶ ಎದುರಾಗಿದೆ. ಆರೋಗ್ಯ ನೆಪ ಹೇಳಿ ಹೈಕೋರ್ಟ್​ನಿಂದ ಜಾಮೀನು ಪಡೆದಿದ್ದ ದರ್ಶನ್​ಗೆ ಸುಪ್ರೀಂಕೋರ್ಟ್​ ಶಾಕ್​ ನೀಡಿದೆ. ದರ್ಶನ್​ ಸೇರಿದಂತೆ ಎಲ್ಲ 7 ಆರೋಪಿಳಿಗೆ ಹೈಕೋರ್ಟ್​ ನೀಡಿದ್ದ ಜಾಮೀನು ಆದೇಶವನ್ನು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಹಾಗೂ ನ್ಯಾ.ಮಹದೇವನ್ ಅವರಿದ್ದ ದ್ವಿಸದಸ್ಯ ಪೀಠ ರದ್ದು ಮಾಡಿತು. ಹೈಕೋರ್ಟ್​ ನೀಡಿದ ಜಾಮೀನಿನಲ್ಲಿ ದೋಷವಿದೆ. ಜೈಲಿನಲ್ಲಿ ಆರೋಪಿಗಳಿಗೆ ಫೈವ್​ ಸ್ಟಾರ್​ ಟ್ರೀಟ್​ಮೆಂಟ್​ ನೀಡಲಾಗಿದೆ. ಈ ಪ್ರಕರಣ ಬೆಳಗಕಿಗೆ ಬಂದ ಕೂಡಲೇ ಜೈಲು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕಿತ್ತು. ಇದೊಂದು ಲ್ಯಾಂಡ್​​ ಮಾರ್ಕ್​ ತೀರ್ಪು ಎಂದು ಸುಪ್ರೀಂಕೋರ್ಟ್ ಹೇಳಿತು. ಅಲ್ಲದೆ, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಆರೋಪಿ ಜೈಲಿನ ಲಾನ್​ನಲ್ಲಿ ಸಿಗರೇಟ್​ ಸೇದುವುದು ಕಂಡಬಂದರೆ ಜೈಲಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಕೋರ್ಟ್​ ಎಚ್ಚರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net