ಮೋದಿ ಸರ್ಕಾರ ಸಂಪತ್ತಿನ ಕೇಂದ್ರೀಕರಣವನ್ನು ಉತ್ತೇಜಿಸುತ್ತಿದೆ: ಇದು ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿ: ಕಾಂಗ್ರೆಸ್| Democracy

Jairam Ramesh
Published on

Democracy: ದೇಶದಲ್ಲಿ ಸಂಭವಿಸುತ್ತಿರುವ ಸಂಪತ್ತಿನ ಕೇಂದ್ರೀಕರಣ ವಿಷಯವನ್ನು ಕಾಂಗ್ರೆಸ್ ಟೀಕಿಸಿದೆ.ಅಲ್ಲದೆ, ಇದು ಮೋದಿ ಸರ್ಕಾರದ ಆರ್ಥಿಕ ನೀತಿಗಳಿಂದ ನಡೆಸಲ್ಪಡುತ್ತಿದ್ದು, ಕೇವಲ ಆರ್ಥಿಕತೆಯ ಸಮಸ್ಯೆಯಲ್ಲ, ಬದಲಾಗಿ ಪ್ರಜಾಪ್ರಭುತ್ವದ ಆತ್ಮದ ಮೇಲಿನ ನೇರ ದಾಳಿ ಎಂದು ಕಿಡಿಕಾರಿದೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂವಹನ ಉಸ್ತುವಾರಿ ಜೈರಾಮ್ ರಮೇಶ್, ಭಾರತವು ಈಗ ಶತಕೋಟ್ಯಾಧಿಪತಿಗಳ ಹೊಸ ಕೇಂದ್ರವಾಗುತ್ತಿದೆ. ದೇಶದಲ್ಲಿ ಶ್ರೀಮಂತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ವೇಗವಾಗಿ ಹೆಚ್ಚುತ್ತಿದೆ ಎಂದು ಆರೋಪಿಸಿದ್ದಾರೆ.

ಅಲ್ಲದೆ, ಒಂದರ ನಂತರ ಒಂದರಂತೆ ವರದಿಗಳು ಭಾರತದಲ್ಲಿ ಸಂಪತ್ತಿನ ವ್ಯಾಪಕ ಕೇಂದ್ರೀಕರಣದ ಬಗ್ಗೆ ಎಚ್ಚರಿಕೆ ನೀಡುತ್ತಿವೆ. ಲಕ್ಷಾಂತರ ಭಾರತೀಯರು ದೈನಂದಿನ ಅಗತ್ಯಗಳನ್ನು ಪೂರೈಸಲು ಹೆಣಗಾಡುತ್ತಿದ್ದರೆ, ಕೇವಲ 1,687 ಜನರು ದೇಶದ ಅರ್ಧದಷ್ಟು ಸಂಪತ್ತನ್ನು ಹೊಂದಿದ್ದಾರೆ ಎಂದು ಜೈರಾಮ್​ ದೇಶದ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಮುಂದುವರೆದು ಮಾತನಾಡಿರುವ ರಮೇಶ್​, ಮೋದಿ ಸರ್ಕಾರದ ಆರ್ಥಿಕ ನೀತಿಗಳಿಂದ ನಡೆಸಲ್ಪಡುವ ಈ ಬೃಹತ್ ಸಂಪತ್ತಿನ ಕೇಂದ್ರೀಕರಣವು ನಮ್ಮ ದೇಶದಲ್ಲಿ ಭಾರಿ ಆರ್ಥಿಕ ಅಸಮಾನತೆಯನ್ನು ಸೃಷ್ಟಿಸುತ್ತಿದೆ. ಈ ಅಸಮಾನತೆಯು ವ್ಯಾಪಕವಾದ ಸಾಮಾಜಿಕ ಅಭದ್ರತೆ ಮತ್ತು ಅಸಮಾಧಾನಕ್ಕೆ ಕಾರಣವಾಗುತ್ತಿದೆ ಎಂದು ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಮ್ಮ ಸುತ್ತಮುತ್ತಲಿನ ದೇಶಗಳಲ್ಲಿನ ಇತ್ತೀಚಿನ ನಡೆದ ಘಟನೆಗಳು ತೀವ್ರ ಆರ್ಥಿಕ ಅಸಮಾನತೆ ಮತ್ತು ದುರ್ಬಲಗೊಂಡ ಪ್ರಜಾಪ್ರಭುತ್ವ ಸಂಸ್ಥೆಗಳು ರಾಜಕೀಯ ಅರಾಜಕತೆಗೆ ಕಾರಣವಾಗಿದೆ ಎಂದು ಜೈರಾಮ್​ ತಿಳಿಸಿದ್ದಾರೆ.

ದೇಶದಲ್ಲಿ ಕೈಗಾರಿಕೋದ್ಯಮಿಗಳು ಮಾತ್ರ ಶ್ರೀಮಂತರಾಗುತ್ತಿದ್ದಾರೆ- ಜೈರಾಮ್​ ರಮೇಶ್​ ವಾಗ್ದಾಳಿ

ಕೇಂದ್ರದ ಅಧಿಕಾರದ ಸಂಬಂಧದಿಂದಾಗಿ ಕೆಲವು ಕೈಗಾರಿಕೋದ್ಯಮಿಗಳು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ. ಪ್ರಧಾನ ಮಂತ್ರಿಯ ನೀತಿಗಳು ಅವರ ಕೆಲವೇ ಕೈಗಾರಿಕೋದ್ಯಮಿ ಸ್ನೇಹಿತರ ಪ್ರಯೋಜನಗಳ ಮೇಲೆ ಮಾತ್ರ ಕೇಂದ್ರೀಕೃತವಾಗಿವೆ ಎಂದು ಎಂದು ರಮೇಶ್​ ಆರೋಪಿಸಿದ್ದಾರೆ.

ಅಲ್ಲದೆ, ಭಾರತದ ಆರ್ಥಿಕತೆಯ ಬೆನ್ನೆಲುಬಾಗಿರುವ MSME ವಲಯವು ಒತ್ತಡದಲ್ಲಿದೆ. ಈ ಒತ್ತಡವು ದೇಶೀಯ ನೀತಿಗಳಷ್ಟೇ ಅಲ್ಲ, ವಿದೇಶಾಂಗ ನೀತಿಯ ವೈಫಲ್ಯಗಳ ಪರಿಣಾಮವಾಗಿದೆ ಎಂದು ರಮೇಶ್​​ಹೇಳಿದ್ದಾರೆ.

ದೇಶದಲ್ಲಿ ಸಾಮಾನ್ಯ ಜನರಿಗೆ ಅವಕಾಶಗಳು ಕುಗ್ಗುತ್ತಿವೆ. ಹಣದುಬ್ಬರವು ತುಂಬಾ ಹೆಚ್ಚಾಗಿದ್ದು, ಉದ್ಯೋಗದಲ್ಲಿರುವ ಜನರು ಸಹ ಉಳಿತಾಯದ ಬದಲು ಸಾಲದ ಹೊರೆಯನ್ನು ಹೊತ್ತುಕೊಳ್ಳುತ್ತಿದ್ದಾರೆ. ಶಿಕ್ಷಣ ಮತ್ತು ಆರೋಗ್ಯದಲ್ಲಿನ ಹೂಡಿಕೆಗಳು ಸ್ಥಿರವಾಗಿ ಕಡಿಮೆಯಾಗುತ್ತಿವೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳು ದುರ್ಬಲಗೊಳ್ಳುತ್ತಿವೆ ಎಂದು ರಮೇಶ್ ವಾಗ್ದಾಳಿ ನಡೆಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net