ವಿಜಯ್​-ರಶ್ಮಿಕಾ ಮಧ್ಯೆ ಪ್ರೀತಿ ಹುಟ್ಟಲು ಆ ಚಿತ್ರದ ನಿರ್ದೇಶಕರೇ ಕಾರಣವಂತೆ! ಏನಿದು ವಿಚಾರ? | Vijay-Rashmika

ವಿಜಯವಾಣಿ (23)
Published on

Vijay-Rashmika: ಸ್ಟಾರ್​ ಜೋಡಿಗಳಾದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಇದೀಗ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸುಮಾರು ಆರು ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿದ್ದ ಈ ಜೋಡಿ, ಕಡೆಗೂ ಊಹಾಪೋಹಗಳಿಗೆ ತೆರೆ ಎಳೆಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಫೆಬ್ರವರಿಯಲ್ಲಿ ಮದುವೆ!

ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದ ರಶ್ಮಿಕಾ-ವಿಜಯ್ ಜೋಡಿ, ತಮ್ಮ ಕುಟುಂಬದ ಹಿರಿಯರನ್ನು ಮನವೊಲಿಸಿ, ಅ.03ರಂದು ಸಿಂಪಲ್ ಆಗಿ ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರೆ. ಈ ಕುರಿತಾಗಿ ವಿಜಯ್ ದೇವಕರೊಂಡ ಹಾಗೂ ರಶ್ಮಿಕಾ ತಮ್ಮ ಅಧಿಕೃತ ಜಾಲತಾಣದ ಖಾತೆಯಲ್ಲಿ ಖಚಿತಪಡಿಸಿದ್ದಾರೆ​. 2026ರ ಫೆಬ್ರವರಿಯಲ್ಲಿ ದಾಂಪತ್ಯಕ್ಕೆ ಕಾಲಿಡುವುದಾಗಿಯೂ ತಿಳಿಸಿದ್ದಾರೆ. ಈ ವಿಷಯ ಇಬ್ಬರ ಅಭಿಮಾನಿಗಳಲ್ಲಿ ಖುಷಿ ಮೂಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅಸಲಿಗೆ, ರಶ್ಮಿಕಾ-ವಿಜಯ್ ಮಧ್ಯೆ ಪ್ರೀತಿ ಅರಳಲು ಚಿತ್ರದ ನಿರ್ದೇಶಕರೊಬ್ಬರು ಕಾರಣ ಎಂಬ ವಿಷಯ ಸದ್ಯ ಟಾಲಿವುಡ್​ನಲ್ಲಿ ಸಖತ್ ಸದ್ದು ಮಾಡುತ್ತಿದೆ.

'ಗೀತಾ ಗೋವಿಂದಂ'

ಫೆಬ್ರವರಿ 2026ರಲ್ಲಿ ಸ್ಟಾರ್​ ಜೋಡಿಯ ಮದುವೆ ನಡೆಯುವ ಸಾಧ್ಯತೆಯಿದೆ. ಈ ವಿವಾಹ ತುಂಬಾ ಸರಳ ಮತ್ತು ಸಾಂಪ್ರದಾಯಿಕವಾಗಿರುತ್ತದೆ ಎಂಬ ಮಾತುಗಳು ಕೇಳಿಬಂದಿವೆ. ಇದರ ಮಧ್ಯೆ, ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಪ್ರೀತಿ ಮತ್ತು ಮದುವೆ ಕುರಿತಾಗಿ ಹರಿದಾಡುತ್ತಿರುವ ಸುದ್ದಿಯೊಂದು ಹಲವರ ಕುತೂಹಲ ಕೆರಳಿಸಿದೆ. ಅದೇನದು? ಎಂದು ನೋಡುವುದಾದರೆ, ವಿಜಯ್ ಮತ್ತು ರಶ್ಮಿಕಾ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ 'ಗೀತ ಗೋವಿಂದಂ' ಚಿತ್ರದ ನಿರ್ದೇಶಕರೇ ಇವರಿಬ್ಬರ ನಡುವಿನ ಪ್ರೀತಿಗೆ ಕಾರಣ ಎನ್ನಲಾಗಿದೆ.

ನಿರ್ದೇಶಕ ಪರಶುರಾಮ್ ಕಾರಣ

ಈ ಚಿತ್ರವನ್ನು ನಿರ್ದೇಶಕ ಪರಶುರಾಮ್ ನಿರ್ದೇಶಿಸಿದ್ದಾರೆ. ಅಂದು ತೆರೆಕಂಡ 'ಗೀತಾ ಗೋವಿಂದಂ' ಟಾಲಿವುಡ್​ನಲ್ಲಿ ಬ್ಲಾಕ್​ಬಸ್ಟರ್ ಹಿಟ್​ ಚಿತ್ರವಾಗಿ ಹೊರಹೊಮ್ಮಿತು. ಅಂದಿನಿಂದ ರಶ್ಮಿಕಾ ಮತ್ತು ವಿಜಯ್ ಜೋಡಿ ಅನೇಕರ ಮೆಚ್ಚುಗೆಗೆ ಕಾರಣವಾಯಿತು. ಆದಾಗ್ಯೂ, ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ವಿಜಯ್ ಮತ್ತು ರಶ್ಮಿಕಾ ಹೆಚ್ಚಾಗಿ ಮಾತನಾಡುತ್ತಿರಲಿಲ್ಲವಂತೆ. ಚಿತ್ರೀಕರಣ ಮುಗಿದ ಕೂಡಲೇ ತಮ್ಮ ತಮ್ಮ ಕ್ಯಾರವಾನ್‌ಗೆ ಹೋಗಿ ಕೂರುತ್ತಿದ್ದರಂತೆ. ಇದನ್ನು ಗಮನಿಸಿದ ನಿರ್ದೇಶಕರು, ಇಬ್ಬರ ನಡುವಿನ ಮಾತುಕತೆ ಹೆಚ್ಚಿಸಲು ಕೆಲವು ಸಂಭಾಷಣೆಗಳನ್ನು ಬರೆದು, ಅವುಗಳನ್ನು ಅಭ್ಯಾಸ ಮಾಡುವಂತೆ ಹೇಳಿದ್ದರಂತೆ.

ಆ ಸಂಭಾಷಣೆಗಳ ಕಲಿಯುವಿಕೆಯಲ್ಲಿ ಇಬ್ಬರ ನಡುವೆ ಉತ್ತಮ ಬಾಂಧವ್ಯ ಮೂಡಿತು ಎನ್ನಲಾಗಿದೆ. ಹೀಗಾಗಿ, ನಿರ್ದೇಶಕ ಪರಶುರಾಮ್ ಪರೋಕ್ಷವಾಗಿ ರಶ್ಮಿಕಾ-ವಿಜಯ್​ ಜೋಡಿ ಪ್ರೀತಿಯಲ್ಲಿ ಬೀಳಲು ಕಾರಣರಾದರು ಎಂದು ನೆಟ್ಟಿಗರು ನಿರ್ದೇಶಕರನ್ನು ಮುನ್ನೆಲೆಗೆ ತಂದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net