ಡ್ಯಾಡ್​ ಆದ ವಿಶಾಲ್​ ; ಅರ್ಜುನ್​ ಕೃಷ್ಣ ನಿರ್ದೇಶನದ "ದೇವರಾಜ್​ ಅಲಿಯಾಸ್​ ಡೇವಿಡ್​' ಚಿತ್ರ

DAD-10
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ದಿಗಂತ್​, ವಿಜಯ್​ ಸೂರ್ಯ, ಪ್ರತಾಪ್​ ನಾರಾಯಣ್​ ಸೇರಿ ಹಲವರು ಮಾಡೆಲಿಂಗ್​ನಿಂದ ಚಿತ್ರರಂಗಕ್ಕೆ ಬಂದು ಮಿಂಚಿದ್ದಾರೆ. ಆ ಸಾಲಿಗೆ ಹೊಸ ಸೇರ್ಪಡೆ ವಿಶಾಲ್​. ಬಾಲಿವುಡ್​ ನಟ ಜಾನ್​ ಅಬ್ರಹಾಂ ಅಪ್ಪಟ ಅಭಿಮಾನಿ ವಿಶಾಲ್​. ಆನ್​ಲೈನ್​ನಲ್ಲಿ ಜಾನ್​ ಅಬ್ರಹಾಂ ನೋಡಿ ಮಾಡೆಲಿಂಗ್​ ಕಲಿತ ವಿಶಾಲ್​, ನಟನೆಯನ್ನೂ ಸಿನಿಮಾಗಳನ್ನು ನೋಡಿಯೇ ಕಲಿತರಂತೆ. "ನವರತ್ನ' ಚಿತ್ರದಲ್ಲಿ ಖಳನಟನಾಗಿ ಕಾಣಿಸಿಕೊಂಡಿದ್ದ ಅವರು, ಇದೀಗ "ಡ್ಯಾಡ್​, ದೇವರಾಜ್​ ಅಲಿಯಾಸ್​ ಡೇವಿಡ್​' ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

"ನನ್ನದು ಇಂಟೆನ್ಸ್​ ಪಾತ್ರ, ಅನ್ಯಾಯವನ್ನು ತಡೆಯದ, ಒನ್​ ಮ್ಯಾನ್​ ಆರ್ಮಿ ರೀತಿಯ ನೇರ ಮಾತಿನ ಹುಡುಗನಾಗಿ ಕಾಣಿಸಿಕೊಳ್ಳಲಿದ್ದೇನೆ' ಎನ್ನುತ್ತಾರೆ ವಿಶಾಲ್​. ಇದೊಂದು ಕಲ್ಟ್​ ಕಮರ್ಷಿಯಲ್​ ಚಿತ್ರವಾಗಿದ್ದು, ಅರ್ಜುನ್​ ಕೃಷ್ಣ ಚೊಚ್ಚಲ ಬಾರಿಗೆ ನಿರ್ದೇಶಿಸಿದ್ದಾರೆ. ಅವರೇ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಅರ್ಜುನ್​, "ಅಪ್ಪ-ಮಗನ ಸೆಂಟಿಮೆಂಟ್​ ಇರುವ ಎಮೋಷನಲ್​ ಆ್ಯಕ್ಷನ್​ ಥ್ರಿಲ್ಲರ್​ ಚಿತ್ರ. ನಮ್ಮ ಸುತ್ತಮುತ್ತ ನಡೆಯುವ, ಪೇಪರ್​ನಲ್ಲಿ ಓದಿದ, ಟಿವಿಯಲ್ಲಿ ನೋಡಿದ ಟನೆಗಳು ಒಬ್ಬನ ಜೀವನದಲ್ಲಿ ನಡೆದರೆ ಹೇಗಿರುತ್ತದೆ ಎಂಬುದು ಕಥೆ' ಎಂದು ಹೇಳಿಕೊಳ್ಳುತ್ತಾರೆ.

ಈಗಾಗಲೇ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಯೂಟ್ಯೂಬ್​ನಲ್ಲಿ ವೈರಲ್​ ಆಗಿವೆ. ಸದ್ಯ ಚಿತ್ರತಂಡ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಲ್ಲಿ ಬಿಜಿಯಾಗಿದೆ. ವಿಶಾಲ್​ಗೆ ಇಬ್ಬರು ನಾಯಕಿಯರಿದ್ದು ಮಹಿಕಾ ಮತ್ತು ನೃತ್ಯ ಬೋಪಣ್ಣ ನಟಿಸಿದ್ದಾರೆ. ಮಂಜುನಾಥ್​, ಸುಚೇಂದ್ರ ಪ್ರಸಾದ್​, ಅರುಣಾ ಬಾಲರಾಜ್​ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಅನಿಲ್​ ಕುಮಾರ್​ ಛಾಯಾಗ್ರಹಣ, ವಾಸುಕಿ ವೈಭವ್​ ಸಂಗೀತವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net