

ಕೊಟ್ಟಾಯಂ: ಆಕಸ್ಮಿಕವಾಗಿ ಚರಂಡಿಗೆ ಬಿದ್ದ ಮೊಬೈಲ್ ಫೋನ್ ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಸುಮಾರು 3 ಗಂಟೆಗಳ ಕಾಲ ಹರಸಾಹಸಪಟ್ಟ ಘಟನೆ ಕೊಟ್ಟಾಯಂನ ನಗರದ ಕೇಂದ್ರ ಭಾಗದಲ್ಲಿ ನಡೆದಿದೆ.
ಸೋಮವಾರ ಮಧ್ಯಾಹ್ನ ಪುಲಿಮೂಡು ಜಂಕ್ಸನ್ ಬಳಿ ಘಟನೆ ನಡೆದಿದ್ದು, ಚರಂಡಿಗೆ ಬಿದ್ದಿದ್ದ ಅಲಪುಜ್ಜ ಚಂಬಕುಲಂ ನಿವಾಸಿ ಅಲಿಸ್ ಜೋಸ್ ಅವರ ಮೊಬೈಲ್ ಅನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ.
ಘಟನೆಯ ವಿವರಣೆಗೆ ಬರುವುದಾದರೆ, ಅಲಿಸ್ ಅವರು ಸೈಡ್ ವಾಕ್ ಮೂಲಕ ಹಾದು ಹೋಗುತ್ತಿದ್ದರು. ಈ ವೇಳೆ ತಮ್ಮ ಬ್ಯಾಗ್ಬಿಂದ ಛತ್ರಿಯನ್ನು ಹೊರತೆಗೆಯುವಾಗ ಆಕಸ್ಮಿಕವಾಗಿ ಮೊಬೈಲ್ ಕೈನಿಂದ ಜಾರಿ ಚರಂಡಿಯೊಳಗೆ ಬಿದ್ದಿದೆ. ಮೊಬೈಲ್ ಕವರ್ ಒಳಗೆ ಹಣ ಇಟ್ಟಿದ್ದರಿಂದ ಗಾಬರಿಗೊಂಡ ಅಲಿಸ್ ಹತ್ತಿರದ ಅಂಗಡಿಯವರ ನೆರವು ಕೇಳಿದ್ದಾರೆ.
ಚರಂಡಿ ಮೇಲೆ ಹಾಕಲಾಗಿದ್ದ ಸ್ಲ್ಯಾಬ್ ಅನ್ನು ತೆಗೆಯಲಾಗದೇ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸ್ಲ್ಯಾಬ್ ಅನ್ನು ಸುಲಭವಾಗಿ ತೆಗೆಯಬಹುದು ಅಂದುಕೊಂಡಿದ್ದರು. ಆದರೆ, ಸ್ಲ್ಯಾಬ್ 9 ಇಂಚು ದಪ್ಪವಿದ್ದುದ್ದರಿಂದ ಸಿಬ್ಬಂದಿಯು ಸಹ ಹರಸಾಹಸ ಪಡಬೇಕಾಯಿತು.
ಕೊನೆಗೆ ಸ್ಲ್ಯಾಬ್ ಮೇಲೆ ರಂಧ್ರವನ್ನು ಕೊರೆದು ಟಾರ್ಚ್ಲೈಟ್ ಮೂಲಕ ಮೊಬೈಲ್ ಪತ್ತೆ ಹಚ್ಚಿ ಹೊರತೆಗೆದರು. ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಧನೇಶ್, ರೋಷನ್, ಶೆಫೀಕ್, ಅಜಿತ್, ರೆಜಿ ಕುರಿಯಾಕೊಸೆ ಮತ್ತು ಶೈಜು ತೊಡಗಿಕೊಂಡಿದ್ದರು. ಮೊಬೈಲ್ ಮರಳಿ ಪಡೆದ ಅಲಿಸ್ ಸಿಬ್ಬಂದಿಗೆ ಧನ್ಯವಾದ ತಿಳಿಸಿದರು. (ಏಜೆನ್ಸೀಸ್)