ಶಾಸಕ ಜಮೀರ್ ಆಸ್ತಿ ಮೌಲ್ಯಮಾಪನ; ಆದಾಯಕ್ಕಿಂತ ಶೇ. 2034 ಹೆಚ್ಚು ಆಸ್ತಿ?

jameer
Published on

ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಆರೋಪ ಸಂಬಂಧ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನಿಖೆ ಮುಂದುವರಿಸಿದೆ. ಜಮೀರ್ ಅವರ 16 ವರ್ಷದ ಶಾಸಕತ್ವದ ಅವಧಿಯಲ್ಲಿ ಗಳಿಸಿದ ಸಂಪತ್ತಿನ ಮೂಲದ ಬಗ್ಗೆ ಶೋಧ ನಡೆಸುತ್ತಿದ್ದಾರೆ.

2006ರಲ್ಲಿ ಉಪಚುನಾವಣೆ ಮೂಲಕ ಮೊದಲ ಬಾರಿಗೆ ಚಾಮರಾಜಪೇಟೆ ಕ್ಷೇತ್ರದ ಶಾಸಕರಾದ ಜಮೀರ್, ಸತತ 4ನೇ ಬಾರಿಗೆ ವಿಧಾನಸಭೆಗೆ ಚುನಾಯಿತರಾಗಿದ್ದಾರೆ. ಶಾಸಕತ್ವವನ್ನು ಬಳಸಿಕೊಂಡು ಅಕ್ರಮ ಆಸ್ತಿ ಸಂಪಾದನೆ ಮಾಡಿರುವುದು ಎಸಿಬಿಗೆ ಅನುಮಾನ ಹುಟ್ಟಿಕೊಂಡಿದೆ. ಈ ಸಲುವಾಗಿ 2006ರ ಚುನಾವಣೆಗೆ ಸ್ಪರ್ಧಿಸಿದಾಗ ಸಲ್ಲಿಸಿದ್ದ ಆಸ್ತಿ ಪ್ರಮಾಣ ಪತ್ರವನ್ನು ಕಲೆ ಹಾಕಿರುವ ಎಸಿಬಿ, ಆ ಮಾಹಿತಿ ಆಧರಿಸಿ ಸಂಪತ್ತಿನ ಮೌಲ್ಯ ಮಾಪನ ನಡೆಸುತ್ತಿದೆ.

ಶಾಸಕರಾಗುವ ಮುನ್ನವೇ ನ್ಯಾಷನಲ್ ಟ್ರಾವೆಲ್ಸ್ ಏಜೆನ್ಸಿ ಹಾಗೂ ರಿಯಲ್ ಎಸ್ಟೇಟ್ ಸೇರಿದಂತೆ ಇತರೆ ಉದ್ಯಮದಲ್ಲಿ ಜಮೀರ್ ತೊಡಗಿದ್ದರು. ಟ್ರಾವೆಲ್ಸ್ ದೇಶ ವ್ಯಾಪ್ತಿ ಸಂಪರ್ಕ ಜಾಲ ಹೊಂದಿದೆ. ಶಾಸಕರಾದ ಮೇಲೆ ರಿಯಲ್ ಎಸ್ಟೇಟ್ ಸೇರಿದಂತೆ ಇತರ ವ್ಯವಹಾರಗಳಲ್ಲಿ ತೊಡಗಿದ್ದಾರೆ. ಪ್ರಾಥಮಿಕ ತನಿಖೆ ಮತ್ತು ಜಾರಿ ನಿರ್ದೇಶನಾಲಯ ನೀಡಿರುವ ವರದಿದಲ್ಲಿ ಆದಾಯಕ್ಕಿಂತ ಶೇ. 2034 ಹೆಚ್ಚಿನ ಪ್ರಮಾಣದ ಆಸ್ತಿ ಸಂಪಾದನೆ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆ ತಮ್ಮ ಶಾಸಕ ಸ್ಥಾನ ದುರ್ಬಳಕೆ ಮಾಡಿದ್ದರೆ ಚುನಾಯಿತ ಪ್ರತಿನಿಧಿ ಕಾಯ್ದೆಯಡಿ ಕ್ರಮ ಜರುಗಿಸಬಹುದು ಎಂದು ಎಸಿಬಿ ಮೂಲಗಳು ತಿಳಿಸಿವೆ.

ಜಮೀರ್ ಮೇಲಿನ ದಾಳಿ ವೇಳೆ ತಮ್ಮ ಆಸ್ತಿ ಪಾಸ್ತಿ ಕುರಿತು ಲೆಕ್ಕಪರಿಶೋಧಕರ ವರದಿಯನ್ನು ಎಸಿಬಿಗೆ ಸಲ್ಲಿಸಿದ್ದಾರೆ. ವರದಿ ಕುರಿತು ಸತ್ಯಾಸತ್ಯತೆ ಪರಿಶೀಲನೆಗೆ ಪ್ರತ್ಯೇಕವಾಗಿ ಲೆಕ್ಕಪರಿಶೋಧಕರ ಮೋರೆ ಹೋಗಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ಹಿನ್ನೆಲೆಯಲ್ಲಿ ಶಾಸಕ ಜಮೀರ್ ಮನೆ, ಕಚೇರಿ ಹಾಗೂ ಅತಿಥಿ ಗೃಹ ಸೇರಿದಂತೆ ಐದು ಸ್ಥಳಗಳಲ್ಲಿ ಮಂಗಳವಾರ ದಾಳಿ ನಡೆಸಿ ದಾಖಲೆಗಳನ್ನು ಎಸಿಬಿ ಜಪ್ತಿ ಮಾಡಿದ್ದಾರೆ. ಈ ದಾಖಲೆಗಳನ್ನು ಎರಡು ದಿನಗಳು ಸತತವಾಗಿ ಪರಿಶೀಲಿಸಿರುವ ಅಧಿಕಾರಿಗಳು, ವಿಚಾರಣೆಗೆ ಹಾಜರಾಗುವಂತೆ ಜಮೀರ್‌ಗೆ ನೋಟಿಸ್ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net