

ಮಂಗಳೂರು: ಭಾರಿ ಮಳೆಯಿಂದಾಗಿ ಮನೆಯೊಂದರ ಮೇಲೆ ಗುಡ್ಡ ಕುಸಿದಿದ್ದು, ಮಣ್ಣಿನ ರಾಶಿಯಡಿ ನಾಲ್ವರು ಸಿಲುಕಿಕೊಂಡಿದ್ದು, ಒಬ್ಬ ಸಾವಿಗೀಡಾಗಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಗ್ಗ ಸಮೀಪದ ಪಂಜಿಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಕುಡ ಎಂಬಲ್ಲಿ ಈ ಅವಘಡ ಸಂಭವಿಸಿದೆ.
ಮಣ್ಣಿನಡಿ ಸಿಲುಕಿದವರೆಲ್ಲರೂ ಕಾರ್ಲೊ ಎಂಬವರ ರಬ್ಬರ್ ತೋಟಕ್ಕೆ ಕೆಲಸಕ್ಕೆ ಬಂದಿದ್ದ ಕಾರ್ಮಿಕರು. ಮನೆಯ ಹತ್ತಿರದಲ್ಲಿ ಈ ಕಾರ್ಮಿಕರಿಗಾಗಿ ಪ್ರತ್ಯೇಕ ಕೊಠಡಿಯೊಂದನ್ನು ನಿರ್ಮಿಸಿ ಕೊಡಲಾಗಿತ್ತು.
ಭಾರಿ ಮಳೆಯಿಂದಾಗಿ ಇಂದು ರಾತ್ರಿ ಸುಮಾರಿಗೆ ಗುಡ್ಡ ಕುಸಿದಿದ್ದು, ಇವರು ಮಣ್ಣಿನಡಿ ಸಿಲುಕಿದ್ದರು. ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಮೂವರನ್ನು ರಕ್ಷಿಸಲಾಗಿದೆ. ಆದರೆ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾನೆ.