

ಬಾಗಲಕೋಟೆ: ಇಂದು ಕಾರ್ಯಕರ್ತರ ಸಭೆಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಕಳೆದ ತಿಂಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಉಪೇಂದ್ರ ಚಿತ್ರದ ಗೀತೆ ಏನಿಲ್ಲ ಏನಿಲ್ಲ...ನಿನ್ನ ನನ್ನ ನಡುವೆ ಏನಿಲ್ಲ. ನಿಜದಂತಿರುವ ಸುಳ್ಳಲ್ಲ, ಸುಳ್ಳುಗಳೆಲ್ಲ ನಿಜವಲ್ಲ....ಎಂದು ಹಾಡಿದರು. ಇದು ಮೊದಲಿಗೆ ನಗು ತರಿಸಿದರು, ಹಾಡಿದರ ಹಿಂದಿನ ಉದ್ದೇಶವೇನು ಎಂಬುದು ಸದ್ಯ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.
ಚುನಾವಣೆ ಪ್ರಚಾರ ಸಭೆಯಲ್ಲಿ ಹಾಡು ಹೇಳಿದ ಬಾಗಲಕೋಟೆ ಶಾಸಕ ವಿಜಯಾನಂದ ಕಾಶಪ್ಪನವರ್, ಇಳಕಲ್ ನಗರದ ತಮ್ಮ ನಿವಾಸದಲ್ಲಿ ಕರೆದಿದ್ದ ಪಕ್ಷದ ಪ್ರಮುಖರ ಸಭೆಯಲ್ಲಿ ಈ ವೈರಲ್ ಹಾಡನ್ನು ಹಾಡಿದ್ದಾರೆ. ಹುನಗುಂದ ಕ್ಷೇತ್ರದ ಕಾಂಗ್ರೆಸ್ ಪ್ರಮುಖರ ಸಭೆಯಲ್ಲಿ ಏನಿಲ್ಲ ಗೀತೆಯನ್ನು ಹಾಡಿದ್ದಾರೆ. ತಮ್ಮ ಪತ್ನಿ ವೀಣಾ ಕಾಶಪ್ಪನವರ್ಗೆ ಕಾಂಗ್ರೆಸ್ ಲೋಕಸಭೆ ಟಿಕೆಟ್ ಕೈತಪ್ಪಿದ್ದಕ್ಕೆ ಜನರಲ್ಲಿ ಇದ್ದ ಗೊಂದಲಕ್ಕೆ ಮಾತಿನ ಮೂಲಕ ಸ್ಪಷ್ಟನೆ ನೀಡಿದರು.
"ಕಾಂಗ್ರೆಸ್ ಪಕ್ಷ ಅಂದ್ರೆ ಕಾಶಪ್ಪನವರ ಕುಟುಂಬ. ಕಾಶಪ್ಪನವರ ಕುಟುಂಬ ಅಂದ್ರೆ ಕಾಂಗ್ರೆಸ್. ಇಡೀ ಜಿಲ್ಲೆಯಲ್ಲಿ ಈಗ ಬಹಳಷ್ಟು ಜನರು ಕಾತುರದಿಂದ ಏನಾಗುತ್ತೆ, ಮುಂದೇನು ಆಗಬಹುದು ಅಂತ ಕಾಯುತ್ತಿದ್ದಾರೆ. ಏನು ಆಗಲ್ಲ, ನಾನು ಹುಟ್ಟಿದ್ದು ಕಾಂಗ್ರೆಸ್ನಲ್ಲೆ, ಸಾಯೋದು ಸಹ ಕಾಂಗ್ರೆಸ್ಸಿಗನಾಗೆ ಸಾಯ್ತೇನೆ" ಎಂದರು.
"ಈಗ ಇಡೀ ಕ್ಷೇತ್ರದ ಜನರ ಕಣ್ಣು ನನ್ನ ಮೇಲಿದೆ. ಕಾರಣ ನನ್ನ ಹೆಂಡತಿಗೆ ಟಿಕೆಟ್ ಕೇಳಿದ್ದೆ, ಕೊಡಲಿಲ್ಲ. ನಮಗಿಂತ ಪಕ್ಷವೇ ದೊಡ್ಡದು ಎಂದು ನಂಬಿರುವ ಕುಟುಂಬ ನಮ್ಮದು. ನನಗೆ ಸಿಟ್ಟು ಬರುತ್ತೆ, ಆದರೆ, ಮನಸ್ಸು ಆ ರೀತಿ ಇಲ್ಲ. ಯಾರಾದ್ರೂ ಬಂದು ವಿರೋಧ ಮಾಡು (ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ವಿರುದ್ದ ಕೆಲಸ) ಅಂದ್ರೂ ನಾನು ವಿರೋಧ ಮಾಡಲ್ಲ" ಎಂದರು.
"ಇದು ನನ್ನ ತಾಯಿ ಸಾಕ್ಷಿಯಾಗಿ ಹೇಳುತ್ತಿರುವ ಮಾತು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಪ್ರಚಾರ ಮಾಡ್ತಿದ್ದೀನಿ.
ಪತ್ನಿಗೆ ಟಿಕೆಟ್ ಸಿಕ್ಕಿಲ್ಲವೆಂದು ಪಕ್ಷದ ವಿರುದ್ಧ ಕೆಲಸ ಮಾಡಲ್ಲ" ಎಂದು ತಮ್ಮ ಪಕ್ಷ ನಿಷ್ಠೆ ಸ್ಪಷ್ಟಪಡಿಸಿದರು.